ಗೃಹಲಕ್ಷ್ಮೀ ಹಣಕ್ಕಾಗಿ ಕುಷ್ಟಗಿಯಲ್ಲಿ ಅಲೆದಾಟ, ಆತಂಕ ಮೂಡಿಸಿದ ವದಂತಿ

| Published : Jul 21 2024, 01:20 AM IST

ಸಾರಾಂಶ

ಎರಡು ತಿಂಗಳಿಂದ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣ ಬಾರದ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ಫಲಾನುಭವಿಗಳು ಅಂಗನವಾಡಿ, ಬ್ಯಾಂಕ್‌ಗಳಿಗೆ ಅಲೆದಾಡಿ ವಿಚಾರಿಸುತ್ತಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಲೋಕಸಭೆ ಚುನಾವಣೆ ನಂತರ ಬಾರದಿರುವುದು ಫಲಾನುಭವಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಒಂದೆಡೆ ಕುಟುಂಬದ ಯಜಮಾನಿಯರು ಬ್ಯಾಂಕ್‌ಗಳಿಗೆ, ಗ್ರಾಮಒನ್, ಅಂಗನವಾಡಿ ಕೇಂದ್ರಗಳಿಗೆ ಅಲೆಯುವಂತೆ ಮಾಡಿದೆ. ಇನ್ನೊಂದೆಡೆ ಲೋಕಸಭೆ ಚುನಾವಣೆ ಆನಂತರ ಯೋಜನೆ ಸ್ಥಗಿತ ಮಾಡಿರಬಹುದು ಎಂದು ಕೆಲವರು ಹೇಳುತ್ತಿರುವುದು ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ.

ಲೋಕಸಭೆ ಚುನಾವಣೆಗೂ ಮುನ್ನ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗಿತ್ತು. ಆ ಬಳಿಕ ಇಲ್ಲಿಯವರೆಗೂ ಹಣ ಸಂದಾಯವಾಗಿಲ್ಲ.

ಅಲೆದಾಟ: ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಮಾಡುವಾಗ ಸಮಸ್ಯೆಗಳಿದ್ದರೆ ಸಮೀಪದ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕ ಮಾಡಬೇಕು ಎಂದು ಸಿಡಿಪಿಒ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ಈಗ ಎರಡು ತಿಂಗಳ ಹಣ ಬಾರದಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಮಾಹಿತಿ ಇರುತ್ತದೆ ಎಂದು ತಿಳಿದು ನಿತ್ಯ ಮಹಿಳೆಯರು ಅಂಗನವಾಡಿ ಕೇಂದ್ರಗಳಿಗೆ ಆಗಮಿಸಿ ವಿಚಾರಿಸುತ್ತಿದ್ದಾರೆ. ಈ ಕುರಿತು ಅವರ ಬಳಿ ಮಾಹಿತಿ ಇಲ್ಲದಿರುವುದನ್ನು ಅರಿತ ಮಹಿಳೆಯರು ಬ್ಯಾಂಕ್‌ಗಳಿಗೆ ಹೋಗುತ್ತಿದ್ದಾರೆ. ಬ್ಯಾಂಕ್‌ ಖಾತೆಯಲ್ಲಿ ಹಣ ಜಮಾ ಆಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಎಸ್‌ಎಂಎಸ್‌ ಸಂದೇಶ ಬರುತ್ತದೆ ಎಂದು ಬ್ಯಾಂಕ್‌ ಅಧಿಕಾರಿಗಳು ಹೇಳಿದರೂ ಸಮಾಧಾನವಾಗುತ್ತಿಲ್ಲ.

ಫಲಾನುಭವಿಗಳ ಮಾಹಿತಿ: ಕುಷ್ಟಗಿ ತಾಲೂಕಿನಲ್ಲಿ 69,443 ಕುಟುಂಬಗಳ ಪೈಕಿ 68,714 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. 729 ಕುಟುಂಬಗಳಲ್ಲಿ ರೇಷನ್ ಕಾರ್ಡ್‌ಗಳಲ್ಲಿ ಪುರುಷ ಮುಖ್ಯಸ್ಥರ ಕುಟುಂಬ, ತಿದ್ದುಪಡಿ, ನಿರಾಕರಣೆ, ಮರಣ ವಿವಿಧ ಕಾರಣಗಳಿಂದ ನೋಂದಾವಣಿಯನ್ನು ಮಾಡಿಕೊಂಡಿಲ್ಲ.

ವದಂತಿ: ಲೋಕಸಭೆ ಚುನಾವಣೆ ಆನಂತರ ಗೃಹಲಕ್ಷ್ಮಿ ಯೋಜನೆ ನಿಲ್ಲಿಸಿರಬೇಕು. ಆ ಕಾರಣಕ್ಕಾಗಿ ನಮಗೆ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎಂದು ಗ್ರಾಮೀಣ ಭಾಗದ ಮಹಿಳೆಯರು ತಮ್ಮ ತಮ್ಮಲ್ಲೇ ಚರ್ಚಿಸುವುದು ಅಲ್ಲಲ್ಲಿ ಕಂಡುಬರುತ್ತಿದೆ.ಗೃಹಲಕ್ಷ್ಮೀ ಯೋಜನೆ ಸ್ಥಗಿತಗೊಂಡಿಲ್ಲ. ಜೂನ್ ತಿಂಗಳ ಕಂತು ಬಿಡುಗಡೆ ಆಗಿದೆ ಎಂದು ಮಾಹಿತಿ ಇದೆ. ಎಲ್ಲರಿಗೂ ಎರಡು ಕಂತು ಹಾಕುವ ಭರವಸೆಯನ್ನು ಇಲಾಖೆಯ ಮೇಲಧಿಕಾರಿಗಳು ನೀಡಿದ್ದಾರೆ. ವೆಬ್‌ಸೈಟ್‌ ತೊಂದರೆಯಿಂದಾಗಿ ಸರಿಯಾದ ಮಾಹಿತಿಯೂ ದೊರೆಯುತ್ತಿಲ್ಲ. ಈ ಕುರಿತು ಗ್ಯಾರಂಟಿ ಸಮಿತಿಗೆ ತಿಳಿಸಲಾಗಿದೆ. ನಮ್ಮ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಕುಷ್ಟಗಿ ಸಿಡಿಪಿಒ ಯೋಜನಾಧಿಕಾರಿ ಯಲ್ಲಮ್ಮ ಹಂಡಿ ಹೇಳುತ್ತಾರೆ. ನಮ್ಮ ಸರ್ಕಾರವು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಸಾರ್ವಜನಿಕರು ಉಹಾಪೊಹಗಳಿಗೆ ಯಾರೂ ಕಿವಿಗೊಡಬಾರದು. ಎರಡು ಕಂತಿನ ಹಣ ಈ ತಿಂಗಳಲ್ಲಿ ಬರುತ್ತದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಉಮಾದೇವಿ ಪೊಲೀಸ್‌ಪಾಟೀಲ ಹೇಳುತ್ತಾರೆ.ಪ್ರತಿ ತಿಂಗಳು ಸರ್ಕಾರದಿಂದ ಗೃಹಲಕ್ಷ್ಮಿ ಹಣ ₹2000 ಜಮೆ ಆಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ನನಗೆ ಜಮೆ ಆಗಿಲ್ಲ. ಈ ಕುರಿತು ಬ್ಯಾಂಕ್ ಮತ್ತು ನೋಂದಣಿ ಮಾಡಿದ ಕಚೇರಿಗೆ ತೆರಳಿ ವಿಚಾರಿಸಿದಾಗ ಇನ್ನೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಫಲಾನುಭವಿಗಳು ಹೇಳುತ್ತಾರೆ.