ಸಾರಾಂಶ
ತುಮಕೂರು : ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದು ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಇಲ್ಲಿವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 28268 ಕೋಟಿ ರು. ನೇರ ನಗದು ವರ್ಗಾವಣೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹಿಳೆಯರಿಂದ ಮೆಚ್ಚುಗೆ ಮಾತುಗಳು ವ್ಯಕ್ತವಾಗಿವೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಗೃಹಲಕ್ಷ್ಮಿ ಯೋಜನೆಯ ಪ್ರಗತಿ, ಜಿಲ್ಲಾ ಹಾಗೂ ತಾಲ್ಲೂಕು ಶಿಶುಪಾಲನಾ ಕೇಂದ್ರಗಳು, ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಲಭ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.
ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ : ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ ಸ್ಥಾಪಿಸುವುದು ಸೂಕ್ತ. ಈ ನಿಲಯಕ್ಕಾಗಿ 50 ಕೋಟಿ ರು. ಅನುದಾನ ಒದಗಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ರೀಲ್ಸ್ ಮಾಡುವವರನ್ನು ಪ್ರೋತ್ಸಾಹಿಸಿ: ಗೃಹಲಕ್ಷ್ಮಿ ಯೋಜನೆ ಕುರಿತಂತೆ ರೀಲ್ಸ್ ಮಾಡುವ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕು. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಆಗಿರುವ ಪ್ರಯೋಜನ ಪ್ರತಿಯೊಬ್ಬರಿಗೂ ತಿಳಿಯಬೇಕು. ರೀಲ್ಸ್ ಮಾಡುವ ಮಹಿಳೆಯರಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಒ) ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
234 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ: ಜಿಲ್ಲೆಯ 234 ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯವುಳ್ಳ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗಳಿಗೆ ನೀಡುವ ಹೆಚ್ಚಿನ ಶುಲ್ಕದ ಹೊರೆಯನ್ನು ತಪ್ಪಿಸಿದಂತಾಗುತ್ತದೆ. ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ನಗರದಲ್ಲಿ ನಿವೇಶನಗಳನ್ನು ಗುರುತಿಸಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಇಲಾಖೆಯಡಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ, ಸಾಂತ್ವನ ಕೇಂದ್ರ, ಶಿಶು ಪಾಲನಾ ಕೇಂದ್ರ, ಸ್ವೀಕಾರ ಕೇಂದ್ರ, ಬಾಲಮಂದಿರ, ವೃದ್ಧಾಶ್ರಮದ ಪ್ರಗತಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 4199 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 5 ವರ್ಷದೊಳಗಿನ ತೀವ್ರ ಅಪೌಷ್ಟಿಕತೆಯ 3533 ಮಕ್ಕಳಿದ್ದು, ಈ ಪೈಕಿ 69 ಮಕ್ಕಳನ್ನು ವೈದ್ಯರ ಶಿಫಾರಸ ಮೇರೆಗೆ ಎನ್‌ಆರ್‌ಸಿ, ಎಂಎನ್‌ಆರ್‌ಸಿ ಕೇಂದ್ರಕ್ಕೆ ದಾಖಲಿಸಲಾಗಿದೆ.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 48 ದೂರು ಪ್ರಕರಣಗಳು ಸ್ವೀಕೃತವಾಗಿದ್ದು, 46 ಪ್ರಕರಣಗಳಲ್ಲಿ ಬಾಲ್ಯವಿವಾಹವನ್ನು ತಡೆಯಲಾಗಿದೆ. ಉಳಿದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಶಾಮ್ಲಾ ಇಕ್ಬಾಲ್, ಸಿದ್ದೇಶ್ವರ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿ.ಪ್ರಭು, ಮರಿಯಪ್ಪ, ರಾಘವೇಂದ್ರ, ಬಿ.ಎಚ್.ನಿಶ್ಚಲ್, ಪುಷ್ಪಾ ರಾಯ್ಕರ್, ದಿನೇಶ್, ಪವಿತ್ರ ಉಪಸ್ಥಿತರಿದ್ದರು.
ಸಹಾಯವಾಣಿ ಕೇಂದ್ರಕ್ಕೆ ಸಚಿವೆ ಕರೆ; ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಸಹಾಯವಾಣಿ ಕೇಂದ್ರಕ್ಕೆ ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರವಾಣಿ ಕರೆ ಮಾಡಿ ಅಪರಿಚಿತರಂತೆ ಮಾತನಾಡಿ “ನಾನು ಶಿರಾದಿಂದ ಮಾತನಾಡುತ್ತಿದ್ದು, ನಮ್ಮತ್ತೆ ನನಗೆ ಹೊಡೆಯುತ್ತಿದ್ದಾರೆ” ಎಂದು ದೂರು ನೀಡುವ ನೆಪದಲ್ಲಿ ಸಹಾಯವಾಣಿ ಸಂಖ್ಯೆ ಸಕ್ರಿಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡರು. ಅಲ್ಲದೆ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳ ಕರ್ತವ್ಯ ಪಾಲನೆ ಹಾಗೂ ಸಹಾಯವಾಣಿ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))