ಅಡಕೆ ಉದುರುವ ಸಮಸ್ಯೆ ಉಲ್ಬಣ: ಬೆಳೆಗಾರರಿಗೆ ಚಿಂತೆ

| Published : Jul 26 2024, 01:38 AM IST

ಸಾರಾಂಶ

ಈಗಾಗಲೇ ಕೆಲವೆಡೆ ಅಡಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ತಾಲೂಕಿನ ಸಂಪಖಂಡ ಮತ್ತು ಹುಲೇಕಲ್ ಹೋಬಳಿ, ಸಿದ್ದಾಪುರ ತಾಲೂಕಿನ ನಿಲ್ಕುಂದ, ವಂದಾನೆ ಭಾಗದಲ್ಲಿ ಅಡಕೆಗೆ ಕೊಳೆ ತಗುಲಿದೆ.

ಶಿರಸಿ: ಕಳೆದ ೧೫ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಘಟ್ಟದ ಮೇಲಿನ ಅಡಕೆ ತೋಟಗಳಲ್ಲಿ ನೀರು ನಿಂತು ಇನ್ನೂ ಬೆಳೆಯದ ಎಳೆ ಅಡಕೆ ಕಾಯಿಗಳು ಉದುರಲಾರಂಭಿಸಿದ್ದು, ಕೆಲವು ದಿನಗಳಲ್ಲಿಯೇ ಮರ ಬರಿದಾಗುವ ಆತಂಕವನ್ನು ಬೆಳೆಗಾರರು ಎದುರಿಸುವಂತಾಗಿದೆ.

ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಸುಮಾರು ೬೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಎಳೆ ಅಡಕೆ ಉದುರುತ್ತಿದ್ದು, ಹುಲೇಕಲ್, ಸಂಪಖಂಡ ಹೋಬಳಿಯಲ್ಲಿ, ಸಿದ್ದಾಪುರ ತಾಲೂಕಿನ ನಿಲ್ಕುಂದ, ಕಂಚಿಕೈ, ಯಲ್ಲಾಪುರ ತಾಲೂಕಿನ ಅನೇಕ ಕಡೆಗಳಲ್ಲಿ ಅಡಕೆ ಉದರಲಾರಂಭಿಸಿದೆ. ಕಳೆದ ೧೫ ದಿನಗಳಿಂದ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಮಳೆ ಎಡಬಿಡದೇ ಸುರಿಯುತ್ತಿದೆ.

ಈಗಾಗಲೇ ಕೆಲವೆಡೆ ಅಡಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ತಾಲೂಕಿನ ಸಂಪಖಂಡ ಮತ್ತು ಹುಲೇಕಲ್ ಹೋಬಳಿ, ಸಿದ್ದಾಪುರ ತಾಲೂಕಿನ ನಿಲ್ಕುಂದ, ವಂದಾನೆ ಭಾಗದಲ್ಲಿ ಅಡಕೆಗೆ ಕೊಳೆ ಕಾಣಿಸಿಕೊಂಡಿದೆ. ಬೋರ್ಡೋ ಸಿಂಪಡಣೆಗೆ ಇದು ಸೂಕ್ತ ಕಾಲವಾಗಿದ್ದರೂ ಅಬ್ಬರದ ಮಳೆ ಅವಕಾಶ ನೀಡುತ್ತಿಲ್ಲ. ತಾಲೂಕಿನ ಬನವಾಸಿ ಭಾಗದಲ್ಲಿಯೂ ಅಲ್ಲಲ್ಲಿ ಕೊಳೆ ರೋಗದಿಂದಾಗಿ ಅಡಕೆ ಉದುರಲಾರಂಭಿಸಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಕೊಳೆ ರೋಗದ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ತೋಟಕ್ಕೆ ಪೋಟ್ಯಾಶಿಯಂ ಮತ್ತು ಪೋಷಕಾಂಶಗಳ ಕೊರತೆಯಿಂದ ಈ ರೀತಿ ಅಡಕೆ ಉದುರುತ್ತದೆ. ಬೇಸಿಗೆಯ ದಿನಗಳಲ್ಲಿ ಅಡಕೆ ಮರಗಳಿಗೆ ಸುಣ್ಣ, ಪೋಷಕಾಂಶ ನೀಡಿದರೆ ಈ ರೀತಿ ಸಮಸ್ಯೆಯಿಂದ ಬಚಾವಾಗಬಹುದು ಎಂಬುದನ್ನು ಹಲವು ರೈತರೂ ಹೇಳಿದ್ದಾರೆ. ಇನ್ನೊಂದೆಡೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಎಳೆ ಅಡಕೆಗೆ ಅನೇಕ ಕಡೆ ಪೆಂಟಾಮಿಡ್ ಬಗ್ ಕಾಟ ಕಾಣಿಸಿಕೊಳ್ಳುತ್ತವೆ. ಸೊಳ್ಳೆ ಮಾದರಿಯ ಸಣ್ಣ ಕೀಟಗಳು ಎಳೆ ಅಡಕೆಯ ಮೇಲೆ ಕುಳಿತು ರಸ ಹೀರುತ್ತವೆ. ಇದರಿಂದಾಗಿ ಅಡಕೆ ಬೆಳವಣಿಗೆ ನಿಂತು ತೊಟ್ಟಿನ ಭಾಗದಲ್ಲಿ ಕಳಚಿಕೊಳ್ಳುತ್ತಿವೆ.

ಆದರೆ, ಈ ವರ್ಷ ಅಡಕೆ ಉದುರುವಿಕೆಗೆ ಪ್ರಮುಖ ಕಾರಣವಾಗಿರುವುದು ಹವಾಮಾನ ವೈಪರೀತ್ಯ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಈ ವರ್ಷ ತಾಪಮಾನ ವಿಪರೀತವಾಗಿತ್ತು. ಪ್ರತಿದಿನ ಸರಾಸರಿ ೩೫ರಿಂದ ೩೮ ಡಿಗ್ರಿ ಸೆಲ್ಶಿಯಸ್‌ ವರೆಗೆ ತಲುಪಿತ್ತು. ಜತೆಗೆ ಒಣ ಬಿಸಿ ಹವಾಮಾನವೂ ಅಡಕೆ ಮರಗಳಿಗೆ ಬಾಧಿಸಿತ್ತು. ಈ ವಾತಾವರಣದಿಂದ ಒಮ್ಮೆಲೇ ಮಳೆಯ ವಾತಾವರಣ ಆರಂಭವಾಗಿದೆ ಮತ್ತು ಸರಾಸರಿ ತಾಪಮಾನ ೨೪ರಿಂದ ೨೬ ಡಿಗ್ರಿಗೆ ಕುಸಿತವಾಗಿದೆ. ಅದರಿಂದ ಅಡಕೆ ಮರಗಳಲ್ಲಿ ಒಮ್ಮೆಲೇ ಅಡಕೆ ಉದುರಲಾರಂಭಿಸಿದೆ. ಈ ಸಮಸ್ಯೆಗೆ ಬೇಸಿಗೆಯ ಅವಧಿಯಲ್ಲಿಯೇ ಅಡಕೆ ಮರಗಳಿಗೆ ಸೂಕ್ತ ಪೋಷಕಾಂಶ ನೀಡುವ ಮೂಲಕ ಬಗೆಹರಿಸಬಹುದಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.ಬಾಕ್ಸ್:

ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಕಾರಣ ಗುಡ್ಡ ಕುಸಿದು ತೋಟದಲ್ಲಿ ಮೂರ‍್ನಾಲ್ಕು ಪೂಟ್ ನೀರು ನಿಂತುಕೊಂಡಿದೆ. ಕೆಲವೊಂದು ಭಾಗಗಳಲ್ಲಿ ತೋಟದ ಮೇಲೆ ಹಳ್ಳದ ನೀರು ಹರಿದಿದೆ. ಕೊಳೆ ರೋಗದ ತೀವ್ರತೆ ಹೆಚ್ಚಾಗ ತೊಡಗಿದೆ. ಅಡಕೆ ಮರದ ಬುಡದಲ್ಲಿ ಎಳೆ ಅಡಕೆ ಉದಿರುವುದನ್ನು ನೋಡಿ, ಬಹಳ ಬೇಸರವಾಗುತ್ತಿದೆ. ಮಳೆ ಹೀಗೆ ಮುಂದುವರಿದರೆ ಅಡಕೆ ಮಿಳ್ಳೆಗಳೆಲ್ಲವೂ ಉದುರಿ ಮರ ಬರಿದಾಗುವ ಆತಂಕ ಕಾಡುತ್ತಿದೆ ಎನ್ನುತ್ತಾರೆ ಅಡಕೆ ಬೆಳೆಗಾರ ಪ್ರದೀಪ ಹೆಗಡೆ ಕರ್ಜಗಿ.ಕೊಳೆಯುತ್ತಿದೆ ಕಾಳುಮೆಣಸಿನ ಬಳ್ಳಿ: ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದ ಅಡಕೆ ತೋಟದಲ್ಲಿ ಉಪ ಬೆಳೆಯಾಗಿ ಬಾಳೆ, ಕಾಳುಮೆಣಸು, ಸ್ವಲ್ಪ ಪ್ರಮಾಣದಲ್ಲಿ ಯಾಲಕ್ಕಿ ಬೆಳೆಯಲಾಗುತ್ತಿದ್ದು, ಬೆಳೆಯಾಗುತ್ತಿದ್ದು, ಪ್ರಸಕ್ತ ವರ್ಷದ ಮಳೆಯ ಅಬ್ಬರಕ್ಕೆ ತೋಟಗಳಲ್ಲಿ ನೀರು ನಿಂತು ಕಾಳು ಮೆಣಸಿನ ಬಳ್ಳಿ, ಯಾಲಕ್ಕಿ ಗಿಡಗಳು ಕೊಳೆಯಲು ಆರಂಭಿಸಿದೆ.