- ಚನ್ನಗಿರಿ ತಾಲೂಕಿನಲ್ಲಿ 1100 ಅಡಿಗಳವರೆಗೂ ಕುಸಿದ ಅಂತರ್ಜಲಮಟ್ಟ । ಬೆಳೆಗಾರರ ಆತಂಕ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಮಧ್ಯಾಹ್ನ 12 ಗಂಟೆ ನಂತರ ಬಿಸಿಲಿನ ತಾಪದಿಂದ ಜನತೆ ಹೊರಗಡೆ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ತಾಪದಿಂದ ಅಂತರ್ಜಲ ಮಟ್ಟ ಸಹ ಕುಸಿದಿದ್ದು, ಅಡಕೆ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.ತಾಲೂಕಿನ ಕಂಚಿಗನಾಳು, ಹೊದಿಗೆರೆ, ಅರಳಿಕಟ್ಟೆ, ಹೆಬ್ಬಳಗೆರೆ, ಬೆಟ್ಟಕಡೂರು, ಮಹಾದೇವಪುರ, ಯರಗಟ್ಟಿಹಳ್ಳಿ ಈ ಗ್ರಾಮಗಳ ಸುತ್ತಮುತ್ತಲು 800 ಅಡಿಗಳಿಂದ 1100 ಅಡಿಗಳವರೆಗೆ ಅಂತರ ಜಲಮಟ್ಟ ಕುಸಿದಿದೆ. ದಿನದಿಂದ ದಿನಕ್ಕೆ ಅಂತರ್ಜಲ ಕುಸಿತ ಆಗುತ್ತಿರುವುದು ರೈತರ ಕಂಗಾಲಾಗಿಸುತ್ತಿದೆ.
ತಾಲೂಕಿನಲ್ಲಿ 42 ಸಾವಿರ ಹೆಕ್ಟರಲ್ಲಿ ಅಡಕೆ ಬೆಳೆಯುತ್ತಿದ್ದು, 774 ಹೆಕ್ಟರಲ್ಲಿ ಮಾವು ಬೆಳೆಯುತ್ತಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗಿ ಅಡಕೆ ಮರದಲ್ಲಿನ ಅರಳುಗಳು ಉದುರುತ್ತಿವೆ. ತೋಟಗಳಲ್ಲಿರುವ ಕೊಳವೆಬಾವಿಗಳು ಬತ್ತಿಹೋಗಿದ್ದು, ತೋಟಗಳನ್ನು ಉಳಿಸಿಕೊಳ್ಳಲು ತಾಲೂಕಿನ ರೈತರು ಟ್ಯಾಂಕರ್ ನೀರು ತರಿಸಿ ಅಡಕೆ ಗಿಡಗಳಿಗೆ ನೀರುಣಿಸುತ್ತಿದ್ದಾರೆ.
ಬೇಸಗಿ ಪರಿಸ್ಥಿತಿ ಹಿನ್ನೆಲೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಸಹ ರೈತರಿಗೆ ಸಲಹೆ ನೀಡಿದ್ದಾರೆ. ಉಬ್ರಾಣಿ ಹೋಬಳಿಯ ಕೊಡಕಿಕೆರೆ, ಮುಗಳಿಹಳ್ಳಿ, ನೆಲ್ಲಿಹಂಕಲು, ಶಂಕರಿಪುರ, ದುರ್ವಿಗೆರೆ, ಗಂಗಗೊಂಡನಹಳ್ಳಿ ಈ ಪ್ರದೇಶಗಳಲ್ಲಿ 1400 ಕೊಳವೆಬಾವಿಗಳಿವೆ. 30ರಿಂದ 35 ಸಾವಿರ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸ್ತುತ ಬೇಸಿಗೆ ಕಾಲವಾಗಿದೆ. ಆದ್ದರಿಂದ ತೋಟಗಳಿಗೆ ನೀರನ್ನು ಹರಿಸಿ, ವ್ಯಯಮಾಡದೇ, ಹನಿ ನೀರಾವರಿ ಯೋಜನೆ ಅಳವಡಿಸಿಕೊಳ್ಳುವುದು ಸೂಕ್ತ. ಹನಿ ನೀರಾವರಿ ಮೂಲಕವೇ ಗಿಡಗಳಿಗೆ ನೀರನ್ನು ಉಣಿಸುವುದು ಪ್ರಸ್ತುತ ಲಾಭದಾಯಕ ಎಂದಿದ್ದಾರೆ.
ತಾಲೂಕಿನ ಸಂತೆಬೆನ್ನೂರು, ಕೋಗಲೂರು, ತಣಿಗೆರೆ, ಪಾಂಡೋಮಟ್ಟಿ, ಮರವಂಜಿ ಮುಂತಾದ ಗ್ರಾಮಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಅಡಕೆ ಗಿಡಗಳು ಒಣಗಲು ಆರಂಭಿಸಿವೆ. ಲಾರಿ ಟ್ಯಾಂಕರ್‌ನಿಂದ 30 ಕಿ.ಮೀ. ದೂರದೊಳಗಿನ ತೋಟಗಳಿಗೆ ನೀರನ್ನು ಕಳಿಸಿದರೆ 1 ಟ್ಯಾಂಕರ್‌ಗೆ ₹4 ಸಾವಿರ, ಟ್ರ್ಯಾಕ್ಟರ್ ಟ್ಯಾಂಕರ್‌ಗೆ ₹1 ಸಾವಿರ ಹಣ ತೆತ್ತು ನೀರನ್ನು ಹಾಯಿಸಬೇಕಾಗಿದೆ ಎಂದು ರೈತ ದೇವರಹಳ್ಳಿ ಗ್ರಾಮದ ಟ್ಯಾಂಕರ್ ಮಾಲೀಕ ರಾಕೇಶ್ ಹೇಳುತ್ತಾರೆ.ಗ್ರಾಮೀಣ ಕುಡಿಯುವ ನೀರು ಇಲಾಖೆ ಅಭಿಯಂತರ ಲೋಹಿತ್ ಪ್ರತಿಕ್ರಿಯಿಸಿದ್ದು, ಬೇಸಿಗೆಯಲ್ಲಿ ಚನ್ನಗಿರಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ₹10.40 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
- - - (ಕೋಟ್ಸ್)ಚನ್ನಗಿರಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ತಾಲೂಕಿನಲ್ಲಿ 2 ಏತನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ, ಕೆರೆಗಳಿಗೆ ಸಮರ್ಪಕ ನೀರನ್ನು ತುಂಬಿಸದ ಕಾರಣ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಗಳು ಬತ್ತಿಹೋಗಿವೆ. ತೋಟ ಬೆಳೆಗಾರರು ಸಾಲ ಮಾಡಿ ಬೋರ್‌ವೆಲ್‌ಗಳನ್ನು ಕೊರೆಸುತ್ತಿದ್ದು, 1 ಸಾವಿರದಿಂದ 1500 ಅಡಿಗಳವರೆಗೆ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ನಷ್ಟದಿಂದ ಕಂಗಾಲಾಗಿದ್ದಾರೆ.
- ದಿಗ್ಗೇನಹಳ್ಳಿ ನಾಗರಾಜ್, ಬೋರ್‌ವೆಲ್ ಏಜೆನ್ಸಿ ಮಾಲೀಕ.- - -
-7ಕೆಸಿಎನ್‌ಜಿ1: ಟ್ಯಾಂಕರ್ ಮೂಲಕ ಕೃಷಿ ಹೊಂಡಕ್ಕೆ ನೀರು ಹರಿಸುತ್ತೀರುವುದು.