ಚನ್ನಗಿರಿಯಲ್ಲಿ ಅಂತರ್ಜಲ ಕುಸಿತ: ಅಡಕೆಗೆ ನೀರಿಲ್ಲ!

| Published : Mar 18 2025, 12:30 AM IST

ಚನ್ನಗಿರಿಯಲ್ಲಿ ಅಂತರ್ಜಲ ಕುಸಿತ: ಅಡಕೆಗೆ ನೀರಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ: ತಾಲೂಕಿನಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭೂಮಿಯೊಳಗಿನ ಅಂತರ್ಜಲಮಟ್ಟ 800ರಿಂದ 1300 ಅಡಿಗಳವರೆಗೆ ಕುಸಿಯುತ್ತಿದೆ. ಇದರಿಂದ ಅಡಕೆ ಬೆಳೆಗಾರರು ದಿನೇದಿನೇ ಚಿಂತೆಗೀಡಾಗುತ್ತಿದ್ದಾರೆ.

ಚನ್ನಗಿರಿ: ತಾಲೂಕಿನಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭೂಮಿಯೊಳಗಿನ ಅಂತರ್ಜಲಮಟ್ಟ 800ರಿಂದ 1300 ಅಡಿಗಳವರೆಗೆ ಕುಸಿಯುತ್ತಿದೆ. ಇದರಿಂದ ಅಡಕೆ ಬೆಳೆಗಾರರು ದಿನೇದಿನೇ ಚಿಂತೆಗೀಡಾಗುತ್ತಿದ್ದಾರೆ.

ಪ್ರಸ್ತುತ ತಾಲೂಕಿನಲ್ಲಿ 38ರಿಂದ 39 ಡಿಗ್ರಿ ಉಷ್ಣಾಂಶವಿದೆ. ಅಡಕೆ ಕಾಯಿಕಟ್ಟುವ ಈ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಅಡಕೆ ಗಿಡಗಳಲ್ಲಿನ ಹರಳುಗಳು ಉದುರುತ್ತಿವೆ. ಸಂತೆಬೆನ್ನೂರು, ಉಬ್ರಾಣಿ ಹೋಬಳಿಗಳು ಮತ್ತು ಚನ್ನಗಿರಿ ಕಸಬಾ ಹೋಬಳಿಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿದೆ. ಪರಿಣಾಮ ಅಲ್ಲಿನ ಬೆಳೆಗಾರರು ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರನ್ನು ಖರೀದಿಸಿ, ತೋಟದಲ್ಲಿನ ಕೃಷಿ ಹೊಂಡಗಳಿಗೆ ತುಂಬಿಸಿಕೊಂಡು ಡ್ರಿಪ್‌ನ ಮೂಲಕ ಅಡಕೆ ಗಿಡಗಳಿಗೆ ನೀರುಣಿಸುತ್ತಿದ್ದಾರೆ.

ಟ್ಯಾಂಕರ್‌ ನೀರು ದುಬಾರಿ:

ಅಂದಾಜು 1000 ಲೀ.ನ ಟ್ಯಾಂಕ್‌ ನೀರಿಗೆ ₹1,200 ದರ ನಿಗದಿಯಾಗಿರುತ್ತದೆ. 1 ಎಕರೆ, 2 ಎಕರೆ ಇರುವ ಅತಿಸಣ್ಣ ರೈತರಿಗೂ ಟ್ಯಾಂಕರ್ ನೀರುಣಿಸಿ ಗಿಡಗಳ ರಕ್ಷಿಸುವುದು ದುಬಾರಿಯಾಗಿ ಪರಿಣಮಿಸಲಿದೆ. ಇನ್ನು ಎಂಟ್ಹತ್ತು ಎಕರೆ ಅಡಕೆ ಕೃಷಿ ಮಾಡುವ ದೊಡ್ಡ ಮಟ್ಟದ ರೈತರ ತೋಟಗಳಲ್ಲೂ ಬೋರ್‌ಗಳಲ್ಲಿ ಅಂತರ್ಜಲ ಇನ್ನೂ ಕುಸಿದರೆ, ಬೆಳೆ ಉಳಿಸಿಕೊಳ್ಳುವುದು ಖಂಡಿತಾ ಅಸಾಧ್ಯವಾಗಲಿದೆ. ಆಗ ಈಗಿರುವ ಟ್ಯಾಂಕರ್‌ ನೀರು ಖರೀದಿಗೆ ಪೈಪೋಟಿ ಎದುರಾದರೂ ಅಚ್ಚರಿಯಿಲ್ಲ. ದರ ಏರಿಕೆಯೂ ಸಹಜವಾಗಿ ಏರಿಕೆಯಾಗುವುದು ಸುಳ್ಳಲ್ಲ. ಈ ಹಿಂದಿನ ವರ್ಷಗಳಲ್ಲೂ ಟ್ಯಾಂಕರ್‌ಗಳ ನೀರಿಗೆ ಹೆಚ್ಚು ಬೇಡಿಕೆ ಇದ್ದುದು ಗಮನೀಯ. ನಾಲೆಯಿಂದ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆಯಲು ಅವಕಾಶವೇ ಇಲ್ಲ. ಬೋರ್‌ ಇದ್ದೂ, ನೀರು ಸಾಕಾಗದಿದ್ದರೆ ಹೊಸ ಬೋರ್‌ ಕೊರೆಸಲು ಲಕ್ಷಾಂತರ ರು. ಬೇಕಾಗುತ್ತದೆ. ಇದು ಸಹ ರೈತರಿಗೆ ಆರ್ಥಿಕ ಹೊರೆಯಾಗಿದೆ. ಹೀಗಿರುವಾಗ ಅಡಕೆ ಬೆಳೆ ನೀರಿಗೆ ನೀರಾವರಿ ಇಲಾಖೆ ನಿಯಮಗಳು ಇನ್ಯಾವ ರೀತಿ ಬಾಧಿಸುವುದೋ ಎಂಬ ಅಳುಕು ಸಹ ರೈತವಲಯದಲ್ಲಿದೆ.

ಮಾವಿನ ಬೆಳೆಗೆ ಇಬ್ಬನಿ ಕಾಟ:

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್ ರೈತರಿಗೆ ಈ ಸಂದರ್ಭದಲ್ಲಿ ಸಲಹೆಯೊಂದನ್ನು ನೀಡಿದ್ದಾರೆ. ಕಳೆದೊಂದು ವಾರದಿಂದ ಬೆಳಗಿನ ಜಾವದಿಂದ ಬೆಳಗ್ಗೆ 7 ಗಂಟೆವರೆಗೆ ಇಬ್ಬನಿ ಸುರಿಯುತ್ತಿದ್ದು, ಇದರಿಂದ ಸಮೃದ್ಧವಾಗಿ ಬೆಳೆಯುತ್ತಿರುವ ಮಾವಿನ ಹೂವು ಮತ್ತು ಕಾಯಿಗಳಿಗೆ ಮಾರಕವಾಗಿ ಪರಿಣಮಿಸಿದೆ. ತಾಲೂಕಿನಲ್ಲಿ 41 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಅಡಕೆ ಬೆಳೆ ಬೆಳೆಯಲಾಗುತ್ತಿದೆ. ಇದರಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದ ಅಡಕೆ ಬೆಳೆ ಸಸಿ ಮರಗಳಾಗಿವೆ. ರೈತರು ಮಿತವಾಗಿ ನೀರಿನ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.

ಚನ್ನಗಿರಿ ತಾಲೂಕಿನ ವಾಣಿಜ್ಯ ಬೆಳೆಯಾಗಿ ಸಣ್ಣ- ಅತಿ ಸಣ್ಣ ರೈತರಿಂದ ಹಿಡಿದು ದೊಡ್ಡ ರೈತರು ಅಡಕೆ ಬೆಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುತ್ತಿದ್ದಾರೆ. ಇವರಿಗೆ ಈಗ ಮಳೆಯೊಂದೇ ಆಸರೆಯಾಗಿದೆ. ಆದರೆ, ಇನ್ನೂ ಬೇಸಿಗೆ ಆರಂಭದ ದಿನಗಳು ಎಂಬುದೇ ಎಲ್ಲ ರೈತರಿಗೆ ದೊಡ್ಡ ಚಿಂತೆಯಾಗಿದೆ.

ಕೇವಲ ಎರಡೂವರೆ ತಿಂಗಳಲ್ಲಿ ಸಾವಿರ ಬೋರ್‌! ಚನ್ನಗಿರಿ ತಾಲೂಕಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗಿನ ಬಿಸಿಲಿನ ಪ್ರಖರತೆಗೆ ಜನಜೀವನವೇ ಅಸ್ತವ್ಯಸ್ತವಾಗುತ್ತಿದೆ. ಶೆಟ್ಟಿಹಳ್ಳಿ, ಮಾದಾಪುರ, ಹೊದಿಗೆರೆ, ಆಕಳಿಕಟ್ಟೆ, ಕಂಚಿಗನಾಳ್, ಯರಗಟ್ಟಿಹಳ್ಳಿ ಇನ್ನು ಹಲವು ಗ್ರಾಮಗಳಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೊಂದು ತಿಂಗಳೊಳಗೆ ಮಳೆಯಾಗದಿದ್ದರೆ ಈ ಭಾಗದ ರೈತರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬೋರ್‌ವೆಲ್ ಏಜೆನ್ಸಿಯ ದಿಗ್ಗೇನಹಳ್ಳಿ ನಾಗರಾಜ್ ಪರಿಸ್ಥಿತಿಯನ್ನು ತಿಳಿಸುತ್ತಾರೆ. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಕೇವಲ ಎರಡೂವರೆ ತಿಂಗಳಲ್ಲಿ ತೋಟ ಬೆಳೆಗಾರ ರೈತರು ನೀರಿಗಾಗಿ ಸುಮಅರು ಒಂದು ಸಾವಿರದಷ್ಟು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ನಿಲುಗಡೆ ಆಗುತ್ತಿದ್ದಂತೆಯೇ, ಮತ್ತೊಂದು ಬೋರ್ ಕೊರೆಸಲು ರೈತರು ಮುಂದಾಗುತ್ತಿದ್ದಾರೆ ಎಂದಿರುವುದು ಪ್ರಸ್ತುತ ಎದುರಾಗಿರುವ ನೀರುನ ಬವಣೆಗೆ ಸಾಕ್ಷಿಯಾಗಿದೆ.