ನಗರದಲ್ಲಿ ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದ್ದಂತೆ ಹಲವೆಡೆ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಲವೆಡೆ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ನಗರದಲ್ಲಿ ನೀರಿನ ಅಭಾವ ಆರಂಭವಾಗಿದೆ.
ಬೆಂಗಳೂರು : ನಗರದಲ್ಲಿ ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದ್ದಂತೆ ಹಲವೆಡೆ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಲವೆಡೆ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ನಗರದಲ್ಲಿ ನೀರಿನ ಅಭಾವ ಆರಂಭವಾಗಿದೆ.
ಅಪಾರ್ಟ್‌ಮೆಂಟ್‌ಗಳು, ಬಹುಮಹಡಿ ವಾಣಿಜ್ಯ ಕಟ್ಟಡಗಳು, ಮನೆಗಳು ಸೇರಿದಂತೆ ಕೊಳವೆ ಬಾವಿಗಳ ಮೇಲೆ ಹೆಚ್ಚು ಅವಲಂಬಿತರು ನೀರಿನ ಅಭಾವದ ಬಿಸಿ ಎದುರಿಸುತ್ತಿದ್ದು, ನೀರಿನ ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶ ಸಮೀಪದ ಅಂಧ್ರಹಳ್ಳಿ ಪ್ರದೇಶದ ಅನೇಕ ಕಡೆ ಕೊಳವೆಬಾವಿಗಳು ಬಹುತೇಕ ಬತ್ತಿ ಹೋಗಿವೆ.
ಮಳೆಯಿಲ್ಲದೇ ಕೆರೆ ಸೇರಿದಂತೆ ಭೂಮಿಯ ಮೇಲಿನ ಜಲಮೂಲಗಳು ಒಣಗಿರುವುದರಿಂದ ಜಲ ಮರುಪೂರಣವಾಗದೆ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ.
ಮುಂದೇ ಹೇಗೋ ಗೊತ್ತಿಲ್ಲ: ‘ನಮ್ಮ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕಾವೇರಿ ನೀರು ಬರುತ್ತಿದೆ. ಅದು ಕೂಡ ವಾರಕ್ಕೊಮ್ಮೆ. ಆದರೆ, ನೀರು ಸಂಗ್ರಹಕ್ಕೆ ದೊಡ್ಡ ಟ್ಯಾಂಕ್ ಇರುವುದರಿಂದ ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಗೊತ್ತಿಲ್ಲ’ ಎಂದು ಅಂಧ್ರಹಳ್ಳಿಯ ಪವನ್ ಹೇಳಿದರು.
‘ನಗರದ ಹೊಸೂರು ರಸ್ತೆಯ ಗಾರ್ವೇಬಾವಿಪಾಳ್ಯ ಸುತ್ತಲಿನ ಪ್ರದೇಶಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ, ಜನರು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಅಪಾರ್ಟ್‌ಮೆಂಟ್ ನಿವಾಸಿಗಳು ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ’ ಎಂದು ಗಾರ್ವೇಬಾವಿಪಾಳ್ಯ ನಿವಾಸಿ ಚಿದನ್ ತಿಳಿಸಿದರು.
ಸಂಜಯನಗರ, ನಾಗಶೆಟ್ಟಿಹಳ್ಳಿಯಲ್ಲೂ ಹಾಹಾಕಾರ:
ಅಷ್ಟೇ ಅಲ್ಲ, ನಗರದ ಕೇಂದ್ರ ಭಾಗವೆನಿಸಿದ ಸಂಜಯನಗರ, ನಾಗಶೆಟ್ಟಿಹಳ್ಳಿಯಂತಹ ಪ್ರದೇಶಗಳಲ್ಲೂ ಅಂತರ್ಜಲ ಕುಸಿದ ಕಾರಣ ನೀರಿನ ಹಾಹಾಕಾರ ಉಂಟಾಗಿದೆ. ಕಾವೇರಿ ನೀರಿನ ಸಂಪರ್ಕವಿದ್ದರೂ ನಾಗಶೆಟ್ಟಿಹಳ್ಳಿಯಂತಹ ಪ್ರದೇಶದಲ್ಲಿ ಜಲಮಂಡಳಿಯೂ ಸ್ಥಳೀಯವಾಗಿ ನೀರು ಪೂರೈಸಲು ಕೊಳವೆಬಾವಿಯನ್ನೇ ಅವಲಂಬಿಸಿರುವುದರಿಂದ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ.ಆದರೆ, ಈ ಬಗ್ಗೆ ಮುಗುಂ ಆಗುವ ಜಲಮಂಡಳಿಯು ಕಾವೇರಿ ನೀರಿನ ಸರಬರಾಜಿನಲ್ಲಿ ಸಮಸ್ಯೆಯಿಲ್ಲ ಎನ್ನುತ್ತಿದೆ. ಆದರೆ, ಕಾವೇರಿ ನೀರಿನ ಪೂರೈಕೆಯು ಈ ಬಡಾವಣೆಗಳಲ್ಲಿ ಕುಸಿತ ಕಂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಕಾವೇರಿ ನೀರಿನ ಸರಬರಾಜಿನಲ್ಲಿ ಸಮಸ್ಯೆ ಇಲ್ಲ. ಆದರೆ, ಕೊಳವೆಬಾವಿ ಅವಲಂಬಿಸಿರುವ ಕಡೆಗಳಲ್ಲಿ, ನೀರಿನ ಕೊರತೆ ಇರುವ ಪ್ರದೇಶಗಳಿಗೆ ಬೇಡಿಕೆ ಆಧಾರದ ಮೇಲೆ ಸಂಚಾರಿ ಕಾವೇರಿ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬೇಡಿಕೆ ಗಣನೀಯವಾಗಿ ಏರಿಕೆಯಾಗಿಲ್ಲ ಎಂದು ಜಲಮಂಡಳಿಯ ಉನ್ನತ ಅಧಿಕಾರಿ ತಿಳಿಸಿದರು.
ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ ಅಗತ್ಯ ಪ್ರಮಾಣದಲ್ಲಿ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ, ಕಳೆದ ವರ್ಷದಂತೆ ನಗರದಲ್ಲಿ ನೀರಿನ ಸಮಸ್ಯೆ ಆಗಿಲ್ಲ. ಕೊಳವೆಬಾವಿಗಳ ಮೇಲೆ ಅವಲಂಬಿತರಾಗಿರುವ ಅಪಾರ್ಟ್‌ಮೆಂಟ್ ಸೇರಿ ಬಹುಮಹಡಿ ಕಟ್ಟಡಗಳಿಗೆ ಬೇಡಿಕೆ ಆಧರಿಸಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಕಾವೇರಿ ನೀರು ಸರಬರಾಜು ಸಮರ್ಪಕವಾಗಿದೆ ಎಂದು ಅಧಿಕಾರಿ ತಿಳಿಸಿದರು.
ಮಳೆ ಕೊರತೆ ಅಂತರ್ಜಲ ಕುಸಿತ:
ಬೇಸಿಗೆಯಲ್ಲಿ ಮಳೆ ಇಲ್ಲದೇ ಕೆರೆ ಸೇರಿದಂತೆ ಭೂಮಿಯ ಮೇಲ್ಭಾಗದಲ್ಲಿನ ಜಲಮೂಲಗಳಲ್ಲಿ ನೀರು ಕಡಿಮೆಯಾಗಿ ಅಂತರ್ಜಲ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ನೀರಿಗೆ ಬೇಡಿಕೆ ಕೂಡ ಹೆಚ್ಚಾಗಿರುತ್ತದೆ. ಮೇ ತಿಂಗಳ 2 ಅಥವಾ 3ನೇ ವಾರದಿಂದ ನಗರದಲ್ಲಿ ಪೂರ್ವ ಮುಂಗಾರು ನಿರೀಕ್ಷಿಸಬಹುದು. ಅಲ್ಲಿಯವರೆಗೆ ನಗರದಲ್ಲಿ ಅಂತರ್ಜಲ ಕೊರತೆ ಕಾಡಬಹುದು ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ತಿಳಿಸಿದರು.
1 ಟ್ಯಾಂಕರ್‌ಗೆ ₹ 600! 3 ಕಿ.ಮೀ ವರೆಗಿನ ದೂರದ ಪ್ರದೇಶಗಳಿಗೆ 6,000 ಲೀಟರ್‌ನ 1 ಟ್ಯಾಂಕರ್‌ಗೆ 600 ರು. ಹಾಗೂ 12,000 ಲೀಟರ್ ನೀರಿನ ಟ್ಯಾಂಕಿಗೆ 1,200 ರು. ದರವನ್ನು ಖಾಸಗಿ ನೀರು ಸರಬರಾಜುದಾರರು ದರ ನಿಗದಿಪಡಿಸಿದ್ದಾರೆ.
ಹೊಸ ಬೋರ್‌ವೆಲ್‌ಗೆ ಚಿಂತನೆ
ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿನ ಬೊರ್‌ವೆಲ್‌ನಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಭೀತಿಯಿಂದ ಮತ್ತೊಂದು ಬೊರ್‌ವೆಲ್ ಕೊರೆಸಲು ಅಂತರ್ಜಲ ಲಭ್ಯತೆ ಪರಿಶೀಲಿಸುವ ತಂತ್ರಜ್ಞರನ್ನು ಕರೆಸಲಾಗಿದೆ ಎಂದು ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ತಿಳಿಸಿದರು.