ಭೀಕರ ಬರಗಾಲ : ಮತ್ತಷ್ಟು ಕುಸಿದ ಅಂತರ್ಜಲ

| Published : May 23 2024, 01:08 AM IST / Updated: May 23 2024, 01:01 PM IST

ಭೀಕರ ಬರಗಾಲ : ಮತ್ತಷ್ಟು ಕುಸಿದ ಅಂತರ್ಜಲ
Share this Article
  • FB
  • TW
  • Linkdin
  • Email

ಸಾರಾಂಶ

 ಭೀಕರ ಬರ, ಕಳೆದ ಒಂದೇ ವರ್ಷ ಮಳೆ ಕಡಿಮೆಯಾಗಿದ್ದಕ್ಕೆ ನದಿ, ಹಳ್ಳ ಕೊಳ್ಳಗಳು ಸೇರಿದಂತೆ ಜಲ ಮೂಲಗಳು ನೀರಿಲ್ಲದೇ ಬತ್ತಿ ಹೋಗಿವೆ. ಪರಿಣಾಮ ಜನ, ಜಾನುವಾರುಗಳು ಪರಿತಪಿಸುತ್ತಿವೆ 

ಕೇಶವ ಕುಲಕರ್ಣಿ

 ಜಮಖಂಡಿ :   ಭೀಕರ ಬರ, ಕಳೆದ ಒಂದೇ ವರ್ಷ ಮಳೆ ಕಡಿಮೆಯಾಗಿದ್ದಕ್ಕೆ ನದಿ, ಹಳ್ಳ ಕೊಳ್ಳಗಳು ಸೇರಿದಂತೆ ಜಲ ಮೂಲಗಳು ನೀರಿಲ್ಲದೇ ಬತ್ತಿ ಹೋಗಿವೆ. ಪರಿಣಾಮ ಜನ, ಜಾನುವಾರುಗಳು ಪರಿತಪಿಸುತ್ತಿರುವುದು ತಿಳಿದ ವಿಚಾರ. ಇದರ ಜತೆಗೆ ಅಂತರ್ಜಲಮಟ್ಟ ಕೂಡ ಕುಸಿತ ಕಂಡಿದೆ.ಭೂ ಮೇಲ್ಮೈ ಜಲಮೂಲಗಳು ಬತ್ತಿದಾಗ ಜನ, ಜಾನುವಾರುಗಳಿಗೆ ಇರುವುದು ಒಂದೇ ಮಾರ್ಗ ಅದು ಅಂತರ್ಜಲ. ಆದರೆ, ಕಳೆದ ಬಾರಿ ವಾಡಿಕೆ ಮಳೆ ಕೂಡ ಆಗದ ಬರ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ನದಿ, ಕೆರೆಗಳು, ಹಳ್ಳಗಳಲ್ಲಿ ನೀರು ಹೆಚ್ಚು ಸಂಗ್ರಹವಾಗಲಿಲ್ಲ. ಇದರಿಂದ ಸಹಜವಾಗಿ ಅಂತರ್ಜಲಮಟ್ಟ ಕೂಡ ಮತ್ತಷ್ಟು ಪಾತಾಳ ಕಂಡಿವೆ.

ಸಹಜವಾಗಿ ಬೋರ್‌ವೆಲ್‌ ನಂಬಿ ಕೃಷಿ ಮಾಡಿಕೊಂಡಿದ್ದ ರೈತರಿಗೆ ಬಹಳ ನಷ್ಟ ಮಾಡಿವೆ. ಅನ್ನದಾತರಿಗೆ ಆಸರೆಯಾಗಿದ್ದ ಬೋರ್‌ವೆಲ್‌ಗಳಲ್ಲೂ ನೀರು ಸಿಗುತ್ತಿಲ್ಲ. ಮಳೆ ಕೊರತೆಯಾದ ಕಾರಣ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹ ತೀವ್ರ ಕೊರತೆ ಉಂಟಾಗಿ ಕೃಷ್ಣಾನದಿಯ ಒಡಲು ಬರಿದಾಗಿದೆ. ಎಲ್ಲೂ ಬೊಗಸೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನದಿ ತೀರ ಪ್ರದೇಶದಲ್ಲಿಯೂ ನೀರಾವರಿ ಪ್ರದೇಶಗಳು ಒಣಗುವ ಹಂತ ತಲುಪಿವೆ. ಇದರ ಜತೆಗೆ ಕೊಳವೆ ಬಾವಿಗಳು ಕೂಡ ಬರಿದಾಗಿ, ಬಾಯ್ತೆರೆದಿವೆ. ನೀರಾವರಿಗಾಗಿ ನದಿಯನ್ನೇ ಅವಲಂಬಿಸಿದ್ದ ರೈತರು, ಆಪತ್ಕಾಲಕ್ಕೆ ಕೊಳವೆ ಬಾವಿ ಕೊರೆಸಿ, ಬೆಳೆದು ನಿಂತ ಬೆಳೆ ರಕ್ಷಿಸಿಕೊಳ್ಳುತ್ತಿದ್ದ. ಆದರೆ, ಈ ಬಾರಿ ಕೊಳವೆ ಬಾವಿಗಳು ಬರಿದಾಗಿದ್ದರಿಂದ ತೀವ್ರ ಚಿಂತೆಗೀಡಾಗಿದ್ದಾನೆ.

1000 ಅಡಿ ಕೊರದರೂ ಸಿಗ್ತಿಲ್ಲ ನೀರು:

ಜಮಖಂಡಿ ತಾಲೂಕಿನ ಗೋಠೆ, ಗದ್ಯಾಳ, ಕನ್ನೋಳಿ ಅಡಿಹುಡಿ ಮುಂತಾದ ಗ್ರಾಮಗಳ ಭಾಗದಲ್ಲಂತೂ ಅಂತರ್ಜಲ ಪಾತಾಳ ಕಂಡಿದೆ. ಕಳೆದ 10 ವರ್ಷಗಳ ಹಿಂದೆ 250 ರಿಂದ 400 ಅಡಿಗಳಲ್ಲಿ ಸಿಗುತ್ತಿದ್ದ ಅಂತರ್ಜಲ ಈಗ 800 ರಿಂದ 1000 ಅಡಿಗಳಷ್ಟು ಕೊರೆದರೂ ಕೊಳವೆ ಬಾವಿಗಳಲ್ಲಿ ಒಂದಿಂಚು ನೀರು ಸಿಗುವುದು ದುರ್ಲಭವಾಗಿದೆ. ಈ ಭಾಗದಲ್ಲಿ ಏತ ನೀರಾವರಿ ಯೋಜನೆ ಪ್ರಾರಂಭವಾದ ನಂತರ ಅಂತರ್ಜಲದ ಮಟ್ಟ ಹೆಚ್ಚಾಗಿದ್ದರಿಂದ ಕೊಳವೆ ಬಾವಿಗಳಲ್ಲಿ ಉತ್ತಮವಾಗಿ ನೀರು ಬರುತ್ತಿತ್ತು.

ಆದರೆ, ಮುಂಗಾರು ಮತ್ತು ಹಿಂಗಾರು ಕಳೆದ ಬಾರಿ ಕೈಕೊಟ್ಟಿದ್ದರಿಂದ ಮಳೆಯ ತೀವ್ರ ಕೊರತೆ ಉಂಟಾಗಿದೆ. ಸಹಜವಾಗಿ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇದರಿಂದ ಕೊಳವೆಬಾವಿಗಳಲ್ಲಿ ಒಂದಿಂಚು ನೀರು ಕೂಡ ಸಿಗುತ್ತಿಲ್ಲ. ಇದು ರೈತರಿಗೆ ಹಾಗೂ ಈ ಭಾಗದ ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಹೊಡೆತವನ್ನೇ ನೀಡಿದಂತಾಗಿದೆ.

ಇದೀಗ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆಯಾದರೂ, ಬೆಳೆದು ನಿಂತ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಮಟ್ಟವನ್ನು ಕಾಪಾಡುವಲ್ಲಿ ಸಮರ್ಪಕ ಮಾಹಿತಿಯ ಕೊರತೆ ಮತ್ತು ಪ್ರಯತ್ನಗಳಾಗದೇ ಇರುವುದು ಇಂತಹ ದಯನೀಯ ಪರಿಸ್ಥಿತಿಗೆ ಕಾರಣವಾಗಿದೆ. ಕೃಷ್ಣಾ ನದಿ ಪಾತ್ರದ ರೈತರು ಈ ಬಗ್ಗೆ ಇನ್ನು ತಲೆಕೆಡಿಸಿಕೊಂಡಿಲ್ಲ. ಅಂತರ್ಜಲಮಟ್ಟ ಹೆಚ್ಚಿಸಲು ಕಾರ್ಯಾಗಾರಗಳು, ರೈತರಿಗೆ ಸಮರ್ಪಕ ಮಾಹಿತಿ ನೀಡುವ ಕೆಲಸವನ್ನು ಸಂಬಂಧಿಸಿದ ಇಲಾಖೆಗಳು ಮಾಡಬೇಕಿದೆ.

ಈ ಪರಿಸ್ಥಿತಿ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದುಕೊಳ್ಳಬೇಡಿ. ಇದು ನಗರ ಪ್ರದೇಶಗಳಲ್ಲೂ ತೀವ್ರ ಸಮಸ್ಯೆ ಇದೆ. ನಗರ ಪ್ರದೇಶದ ಬಡಾವಣೆಗಳಲ್ಲಿ ಪ್ರತಿ ಮನೆಗೊಂದು ಕೊಳವೆ ಬಾವಿಗಳಿವೆ. ಆದರೆ ನೀರಿಲ್ಲ. ಜಮಖಂಡಿಯ ರಾಮೇಶ್ವರ ಕಾಲೋನಿ ಪೋಸ್ಟ್ ಕಾಲೋನಿ, ಗಣೇಶ ನಗರ ಮುಂತಾದ ಕಡೆಗಳಲ್ಲಿ ಕೊಳವೆ ಬಾವಿಗಳು ಬರಿದಾಗಿ ನೀರಿಗೆ ತತ್ವಾರ ಶುರುವಾಗಿದೆ. ನೀರಿಗಾಗಿ ಜನರು ನಿತ್ಯ ಪರದಾಟ ನಡೆಸಿದ್ದಾರೆ. ಸದ್ಯ ಅಂತರ್ಜಲ ಮಟ್ಟ ಹೆಚ್ಚಿಸದೇ ಬೇರೆ ಮಾರ್ಗವಿಲ್ಲ.

ಇನ್ನಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿ ಮೊದಲು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇನ್ನಾದರೂ ರೈತರು ಅಂತರ್ಜಲ ಮಟ್ಟವನ್ನು ವೃದ್ದಿಸುವ ಕಡೆಗೆ ಗಮನ ಹರಿಸಬೇಕಿದ್ದು, ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕಿದೆ.