ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಿತ್ತಾಕುಲಾ ಶಾಖೆಯ ವತಿಯಿಂದ ಗುಂಪು ವೈಯಕ್ತಿಕ ಅಪಘಾತ ವಿಮೆ (ಜಿಪಿಎಐ) ಯೋಜನೆಯಡಿ, ಅಪಘಾತದಲ್ಲಿ ಮೃತಪಟ್ಟ ತಮ್ಮ ಬ್ಯಾಂಕಿನ ಗ್ರಾಹಕನ ಕುಟುಂಬಕ್ಕೆ ₹10 ಲಕ್ಷ ವಿಮಾ ಪರಿಹಾರದ ಚೆಕ್ ಅನ್ನು ಗುರುವಾರ ವಿತರಿಸಲಾಯಿತು.

ಕಾರವಾರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಿತ್ತಾಕುಲಾ ಶಾಖೆಯ ವತಿಯಿಂದ ಗುಂಪು ವೈಯಕ್ತಿಕ ಅಪಘಾತ ವಿಮೆ (ಜಿಪಿಎಐ) ಯೋಜನೆಯಡಿ, ಅಪಘಾತದಲ್ಲಿ ಮೃತಪಟ್ಟ ತಮ್ಮ ಬ್ಯಾಂಕಿನ ಗ್ರಾಹಕನ ಕುಟುಂಬಕ್ಕೆ ₹10 ಲಕ್ಷ ವಿಮಾ ಪರಿಹಾರದ ಚೆಕ್ ಅನ್ನು ಗುರುವಾರ ವಿತರಿಸಲಾಯಿತು.

ಅಲ್ಪ ಮೊತ್ತದ ವಿಮಾ ಕಂತು ಪಾವತಿಸಿದ್ದರೂ ಸಂಕಷ್ಟದ ಸಮಯದಲ್ಲಿ ಬ್ಯಾಂಕ್ ಮೃತನ ಕುಟುಂಬದ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಹಾಗೂ ಬದ್ಧತೆ ಮೆರೆದಿದೆ. ಚಿತ್ತಾಕುಲಾ ಎಸ್.ಬಿ.ಐ. ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದ ಅಕ್ಷಯ ಅನಿಲ್ ಮಾಜಾಳಿಕರ್ ಎಂಬ ಯುವಕ, ಖಾತೆ ತೆರೆಯುವ ಸಂದರ್ಭದಲ್ಲಿ ಕೇವಲ ₹500 ಪಾವತಿಸಿ ಜಿಪಿಎಐ ವಿಮಾ ಪಾಲಿಸಿ ಪಡೆದುಕೊಂಡಿದ್ದರು. ದುರದೃಷ್ಟವಶಾತ್, ಇತ್ತೀಚೆಗೆ ಸಂಭವಿಸಿದ ಅಪಘಾತವೊಂದರಲ್ಲಿ ಅಕ್ಷಯ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ, ಅವರು ಮಾಡಿಸಿದ್ದ ವಿಮಾ ಪಾಲಿಸಿಯ ನಿಯಮಾವಳಿಯ ಅನ್ವಯ ಲಭ್ಯವಿರುವ ₹10 ಲಕ್ಷ ಪರಿಹಾರದ ಮೊತ್ತವನ್ನು ಬ್ಯಾಂಕ್ ಅಧಿಕಾರಿಗಳು ಅವರ ನಾಮಿನಿಯಾಗಿದ್ದ ತಂದೆ ಅನಿಲ್ ಬಾಬು ಮಾಜಾಳಿಕರ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಕಾರವಾರ ಪ್ರಾದೇಶಿಕ ವ್ಯವಸ್ಥಾಪಕರಾದ ಮುರಳೀಧರ ಅವರು ಮೃತನ ತಂದೆಗೆ ಪರಿಹಾರದ ಚೆಕ್ ಪ್ರದಾನ ಮಾಡಿದರು. ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ವಿವೇಕ್ ವಿನಾಯಕ ಜನ್ನು, ಚಿತ್ತಾಕುಲಾ ಶಾಖಾ ವ್ಯವಸ್ಥಾಪಕ ಚಂದ್ರಕಾಂತ್ ಮಾನೆ, ಬ್ಯಾಂಕಿನ ಇತರ ಸಿಬ್ಬಂದಿ ಹಾಗೂ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.

ಚೆಕ್ ವಿತರಿಸಿ ಮಾತನಾಡಿದ ಬ್ಯಾಂಕ್ ಅಧಿಕಾರಿಗಳು, ಎಸ್.ಬಿ.ಐ. ನೀಡುತ್ತಿರುವ ಈ ಗುಂಪು ವೈಯಕ್ತಿಕ ಅಪಘಾತ ವಿಮಾ ಯೋಜನೆಯ ಮಹತ್ವ ವಿವರಿಸಿದರು. ಗ್ರಾಹಕರು ಕೇವಲ ₹100ನಿಂದ ಹಿಡಿದು ₹3000ಗಳ ವರೆಗಿನ ಅಲ್ಪ ಮೊತ್ತದ ಪ್ರೀಮಿಯಂ ಪಾವತಿಸಿ, ಈ ಭದ್ರತಾ ಪಾಲಿಸಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಗ್ರಾಹಕರು ಪಾವತಿಸುವ ಪಾಲಿಸಿ ಮೊತ್ತದ ಆಧಾರದ ಮೇಲೆ, ಒಂದು ವೇಳೆ ಅಪಘಾತದಲ್ಲಿ ಮರಣ ಸಂಭವಿಸಿದರೆ ಅವರ ಕುಟುಂಬಕ್ಕೆ ಕನಿಷ್ಠ ₹2 ಲಕ್ಷದಿಂದ ಗರಿಷ್ಠ ₹60 ಲಕ್ಷ ವರೆಗೆ ಅಪಘಾತ ಮರಣ ವಿಮಾ ರಕ್ಷಣೆ ದೊರೆಯಲಿದೆ ಎಂದು ವಿವರಿಸಿದ ಅಧಿಕಾರಿಗಳು, ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.