ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪ್ರತಿಯೊಬ್ಬರ ಮನೆಗಳಲ್ಲಿ ಹೂವು, ಹಣ್ಣಿನ ಗಿಡಗಳನ್ನು ಬೆಳೆಸುವ ಅಭ್ಯಾಸ ಶ್ರೇಷ್ಠವಾದದ್ದು. ಅದನ್ನು ಪ್ರತಿಯೊಬ್ಬ ಮಹಿಳೆಯರೂ ರೂಢಿಸಿಕೊಳ್ಳಬೇಕು. ಪರಿಸರಕ್ಕೂ ಪೂರಕವಾಗಿರುವುದಲ್ಲದೇ ಮಾನಸಿಕ ನೆಮ್ಮದಿಯ ಜೊತೆ ಆರ್ಥಿಕವಾಗಿ ಮಹಿಳೆಯರಿಗೆ ಸಬಲತೆ ಉಂಟುಮಾಡುತ್ತದೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು.

ಶನಿವಾರ ಪಟ್ಟಣದ ಎಪಿಎಂಸಿಯ ಶ್ರೀಮಾತಾ ಟ್ರೇಡಿಂಗ್ ಕಂಪೆನಿ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸಸ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಮನೆಯಂಗಳದಲ್ಲಿ ಡೇರೆ ಸೇರಿದಂತೆ ನೂರಾರು ಜಾತಿಯ ಹೂ ಗಿಡಗಳನ್ನು ಬೆಳೆಸುವುದರಿಂದ ಮನೆಗೂ ಅಂದ, ಮನಸ್ಸಿಗೂ ನೆಮ್ಮದಿ. ನಮ್ಮ ಉಳಿದ ತೋಟ, ಬೇಣಗಳಲ್ಲಿ ಹಣ್ಣು-ಹಂಪಲುಗಳನ್ನು ಬೆಳೆಸುವ ಮೂಲಕ ಮಹಿಳೆಯರ ಸ್ವಾವಲಂಬನೆಗೆ ಪೂರಕವಾದ ಉತ್ತಮ ಕಾರ್ಯ ಇದಾಗಿದೆ. ಮಹಿಳೆಯರಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ, ತ್ರಿಪುರಾಂಬಿಕಾ ಒಕ್ಕೂಟದ ನಿರ್ದೇಶಕಿ ಮುಕ್ತಾ ಶಂಕರ ಮಾತನಾಡಿ, ಮಹಿಳೆಯರಲ್ಲಿ ಪರಿಸರಕ್ಕೆ ಪೂರಕವಾದ ಇಂತಹ ಸಸ್ಯಗಳನ್ನು ಬೆಳೆಸುವ ಮೂಲಕ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಂಡು, ನಮ್ಮ ಆರೋಗ್ಯದ ರಕ್ಷಣೆಯನ್ನೂ ಮಾಡಿಕೊಳ್ಳಬಹುದು ಎಂದರು.


ಸನ್ಮಾನ ಸ್ವೀಕರಿಸಿದ ಗೀತಾ ರಾಜಾರಾಮ ವೈದ್ಯ ಮಾತನಾಡಿ, ಯಲ್ಲಾಪುರದಲ್ಲೂ ಇಂತಹ ಸಸ್ಯ ಮೇಳವನ್ನು ಆಯೋಜಿಸಿರುವುದು ಸಂತಸ ತಂದಿದೆ. ಎಲ್ಲ ಮಹಿಳೆಯರಿಗೂ ಇದೊಂದು ಪ್ರೇರಣೆಯಾಗಲಿದೆ ಎಂದರು.

ಶ್ರೀಮಾತಾ ಟ್ರೇಡಿಂಗ್ ಕಂಪನಿ ಮಾಲಕ ಶ್ರೀಪಾದ ಭಟ್ಟ ಮಾತನಾಡಿದರು.

ಮನೆಯಂಗಳದಲ್ಲಿ ಗಿಡಗಳನ್ನು ಬೆಳೆಸುವಲ್ಲಿ ಸಾಧನೆ ಮಾಡಿದ ಶ್ವೇತಾ ಗೇರಗದ್ದೆ ಗಿಡಗಳನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ವಿವರವಾಗಿ ಮಾತನಾಡಿದರು.

ಒಕ್ಕೂಟದ ಉಪಾಧ್ಯಕ್ಷೆ ಸಂಧ್ಯಾ ಕೊಂಡದಕುಳಿ ಸ್ವಾಗತಿಸಿದರು. ಅಧ್ಯಕ್ಷೆ ಜಾಹ್ನವಿ ಮಣ್ಮನೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಾಯತ್ರಿ ಬೋಳಗುಡ್ಡೆ ನಿರ್ವಹಿಸಿದರು. ನಿರ್ದೇಶಕಿಯರಾದ ಆಶಾ ಪಟೇಲ ಸನ್ಮಾನ ಪತ್ರ ವಾಚಿಸಿದರು. ಅನಿತಾ ಹೆಗಡೆ ವಂದಿಸಿದರು.