ಜಿಲ್ಲೆಯ ಹವಾಗುಣಕ್ಕೆ ಪೂರಕವಾಗುವಂತಹ ಭವಿಷ್ಯದ ಹಣ್ಣಿನ ಬೆಳೆಗಳನ್ನು ಬೆಳೆದು ರೈತರು ಹೆಚ್ಚಿನ ಆದಾಯ ಗಳಿಸಿ ಆರ್ಥಿಕ ಸದೃಢತೆ ಹೊಂದಬಹುದಾಗಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ವಿ. ಹಿತ್ತಲಮನಿ ಅವರು ಸಲಹೆ ನೀಡಿದರು.

ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರೈತರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ವಿ. ಹಿತ್ತಲಮನಿ ಸಲಹೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಹವಾಗುಣಕ್ಕೆ ಪೂರಕವಾಗುವಂತಹ ಭವಿಷ್ಯದ ಹಣ್ಣಿನ ಬೆಳೆಗಳನ್ನು ಬೆಳೆದು ರೈತರು ಹೆಚ್ಚಿನ ಆದಾಯ ಗಳಿಸಿ ಆರ್ಥಿಕ ಸದೃಢತೆ ಹೊಂದಬಹುದಾಗಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ವಿ. ಹಿತ್ತಲಮನಿ ಅವರು ಸಲಹೆ ನೀಡಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಭವಿಷ್ಯದ ಹಣ್ಣಿನ ಬೆಳೆಗಳಾದ ಬಟರ್‌ಪ್ರೂಟ್ (ಬೆಣ್ಣೆಹಣ್ಣು), ಡ್ರ್ಯಾಗನ್‌ಪ್ರೂಟ್, ಹಲಸು, ಮಾವು, ಸೀತಾಫಲ, ನೇರಳೆ, ರಾಂಬುಟನ್, ಇನ್ನಿತರೆ ಬೆಳೆಗಳ ಪರಿವರ್ತನೆ, ಹೊಸತಳಿ ಪರಿಚಯ, ಬೇಸಾಯ ಕ್ರಮ ಹಾಗೂ ಅವಕಾಶಗಳ ಕುರಿತು ಜಿಲ್ಲೆಯ ರೈತರಿಗೆ ಆಯೋಜಿಸಲಾಗಿದ್ದ ‘ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಪಿಪಿಟಿ ಮೂಲಕ ವಿವರಿಸಿ ಅವರು ಮಾತನಾಡಿದರು.

ತೋಟಗಾರಿಕೆಯನ್ನು ಸಾಮಾನ್ಯ ರೈತರ ಕಸುಬನ್ನಾಗಿ ಮಾಡಿ ಜನರ ಅರ್ಥಿಕ ಸ್ಥಿತಿಗತಿ ಸುಧಾರಿಸಿದವರು ತೋಟಗಾರಿಕೆಯ ಪಿತಾಮಹ ಡಾ. ಎಂ.ಎಚ್. ಮರಿಗೌಡ ಅವರು. ಕೃಷಿಗೆ ಹೆಚ್ಚಿನ ಮಹತ್ವವಿದ್ದ ಆಗಿನ ಕಾಲದಲ್ಲಿ ಮರಿಗೌಡ ಅವರು ತೋಟಗಾರಿಕೆಯ ಮೂಲಕ ತರಕಾರಿ ಹಾಗೂ ಹಣ್ಣಿನ ಬೆಳೆಗಳ ಪ್ರಾಮುಖ್ಯತೆಯನ್ನು ಇಡೀ ಸಮುದಾಯ, ದೇಶಕ್ಕೆ ಪರಿಚಯಿಸಿದರು. ಕರ್ನಾಟಕದಲ್ಲೆಡೆ ಒಂದೊಂದು ಪ್ರಮುಖ ಹಣ್ಣಿನ ಬೆಳೆ ಬೆಳೆಯುತ್ತಾರೆ. ಆದರೆ ಎಲ್ಲಾ ಪ್ರಮುಖ ಬೆಳೆಗಳು ಇಂದು ಸಮಸ್ಯೆ ಎದುರಿಸುತ್ತಿವೆ. ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ, ಹಣ್ಣಿನ ದರ ಕುಸಿದರೂ ರೈತರ ಜೀವನ ಕಷ್ಟಸಾಧ್ಯವಾಗಲಿದೆ ಎಂದರು.

ರೈತರು ಈಗಿರುವ ಹಣ್ಣಿನ ಬೆಳೆಗಳ ಜೊತೆಗೆ ಪರ್ಯಾಯ ಹಣ್ಣುಗಳನ್ನು ಬೆಳೆಯಲು ಮುಂದಾಗಬೇಕಿದೆ. ಪರ್ಯಾಯ ಬೆಳೆಗಳ ಮಾಹಿತಿಗಾಗಿ ಬೇರೆಬೇರೆ ಭಾಗದ ರೈತರೊಂದಿಗೆ ಚರ್ಚಿಸಿ ಭವಿಷ್ಯದ ಹೊಸತಳಿಗಳ ವಿವರ ಅರಿಯಬೇಕು. ಕರ್ನಾಟಕದಲ್ಲಿ ಕರಾವಳಿ, ಪಶ್ಚಿಮ ಘಟ್ಟಗಳು, ಮಲೆನಾಡು, ಬಯಲುಸೀಮೆ ಪ್ರದೇಶಗಳಿದ್ದು, ಮಳೆಯಾಶ್ರಿತ ಹಾಗೂ ನೀರಾವರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಭೂಮಿಯ ಸ್ಥಿತಿಗತಿ, ಹವಾಗುಣ, ಪರಿಸರಕ್ಕೆ ಅನುಗುಣವಾಗಿ ಹಣ್ಣಿನ ಬೆಳೆ ಬೆಳೆಯಬೇಕು. ಆಗಮಾತ್ರ ಉತ್ತಮ ಫಸಲು ಬರಲಿದೆ. ರೈತರ ಆದಾಯ ದ್ವಿಗುಣಗೊಳ್ಳಲಿದೆ. ಚಾಮರಾಜನಗರ ಜಿಲ್ಲೆಯ ಹವಾಗುಣವು ಸಹ ಹಲವು ಹಣ್ಣಿನ ಬೆಳೆಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆಯು ಬಟರ್‌ಪ್ರೂಟ್ (ಬೆಣ್ಣೆಹಣ್ಣು), ಡ್ರ್ಯಾಗನ್‌ಪ್ರೂಟ್, ಸೀಬೆ, ಮಕಡಮಿಯಾ, ಲೋಂಗಾನ್, ಹಲಸು, ಆಮ್ಲ, ಚಕ್ಕೋತ, ಸೀತಾಫಲ, ಕೆಂಪು ಸಪೋಟ, ಸಿಹಿ ಹುಣಸೆ, ಬಿಳಿ ನೇರಳೆ, ವಾಟರ್ ಆಪಲ್ ಹಣ್ಣುಗಳನ್ನು ಬೆಳೆಯಲು ಸೂಕ್ತವಾಗಿದೆ. ಇದನ್ನು ಸಂಶೋಧನೆಗಳು ದೃಢಪಡಿಸಿವೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ಈ ಬೆಳೆಗಳನ್ನು ಈಗಾಗಲೇ ಬೆಳೆಯಲಾಗುತ್ತಿದೆ. ಜಿಲ್ಲೆಯ ಹೆಗ್ಗವಾಡಿ ಶಿವಕುಮಾರ್ ಹಾಗೂ ರೇವಣ್ಣ ಉಪ್ಪಾರ್ ಅವರು ಬೆಣ್ಣೆ ಹಣ್ಣಿನ ಬೆಳೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಅವರ ಮಾದರಿಯಲ್ಲಿಯೇ ಜಿಲ್ಲೆಯ ಇತರೆ ರೈತರು ಪ್ರಮುಖ ಪರ್ಯಾಯ ಹಣ್ಣಿನ ಬೆಳೆ ಬೆಳೆಯಲು ಮುಂದೆ ಬರಬೇಕಿದೆ ಎಂದು ಡಾ. ಎಸ್.ವಿ. ಹಿತ್ತಲಮನಿ ಅವರು ಹೇಳಿದರು.

ಪ್ಲೋರಜಾ ಕಂಪನಿ ಪ್ರತಿನಿಧಿ ಶಾಂತರಾಜು ಅವರು ಥೈ-ಹಲಸು ಹಣ್ಣಿನ ಬಗ್ಗೆ ಮಾಹಿತಿ ನೀಡಿ, ಕಂಪನಿಯು ರೈತರ ಜೊತೆ ಒಡಂಬಡಿಕೆ ಮಾಡಿಕೊಂಡು ಹಲಸಿನ ಸಸಿಗಳನ್ನ ನೀಡುತ್ತದೆ. ಹಲಸಿನ ಹಣ್ಣುಗಳನ್ನು ಕಂಪನಿಯಿಂದಲೇ ಖರೀದಿಸಿ ಪ್ರತಿ ಕೆ.ಜಿ. ಗೆ 30 ರು. ನಂತೆ ಕಂಪನಿಯು ರೈತರಿಗೆ ನೀಡಲಿದೆ. ಒಮ್ಮೆ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡರೆ 28ರಿಂದ 30 ವರ್ಷ ರೈತರು ನಿರಂತರ ಆದಾಯ ಪಡೆಯಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಎಚ್.ಎಸ್. ಶಿವಪ್ರಸಾದ್, ರೈತ ಮುಖಂಡರು, ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಯ ಪದಾಧಿಕಾರಿಗಳು, ಇತರರು ವಿಚಾರಸಂಕಿರಣದಲ್ಲಿ ಉಪಸ್ಥಿತರಿದ್ದರು.

-------------------

6ಸಿಎಚ್‌ಎನ್‌53

ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ವಿ. ಹಿತ್ತಲಮನಿ ಪಿಪಿಟಿ ಮೂಲಕ ವಿವರಿಸಿದರು.