ಮಂಡ್ಯ ಜಿಲ್ಲೆಯಲ್ಲಿಯೂ ಗಿಡಗಳನ್ನು ನೆಡುವ ಮುಖಾಂತರ ಭೂಮಿ ಮೇಲೆ ವಾಸಿಸುವ ಪ್ರತಿಯೊಬ್ಬರಿಗೂ ಉತ್ತಮ ಆಮ್ಲಜನಕ ದೊರಕಿಸಲು ಶ್ರಮಿಸಲಾಗುತ್ತಿದೆ. ಈಗ ಗಿಡ ನೆಟ್ಟರೆ ಮುಂದಿನ ಪೀಳಿಗೆಗೆ ನೆರವಾಗಲಿದೆ. ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವ ರಾಶಿಗೂ ಅತ್ಯವಶ್ಯಕವಾಗಿ ಆಮ್ಲಜನಕ ಬೇಕಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವ ರಾಶಿಗೂ ಅತ್ಯವಶ್ಯಕವಾಗಿ ಆಮ್ಲಜನಕ ಬೇಕಿದೆ. ಇದರ ಕೊರತೆ ನೀಗಿಸಲು ಹೆಚ್ಚು ಗಿಡಗಳನ್ನು ನೆಟ್ಟು ಮರಗಳಾಗಿ ಬೆಳೆಸುವಂತೆ ಅಸೋಸಿಯನ್ ಆಫ್ ಅಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೈ ಬಾಲಾಜಿ ಶಾಸ್ತ್ರಿ ತಿಳಿಸಿದರು.

ಗುಂಡಾಪುರ ಗೇಟಿನ ಬಳಿ ಹಲಗೂರಿನ ಅಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಕರೆ ನೀಡಿದ್ದೇವು. ಅದರಲ್ಲಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿಯೂ ಗಿಡಗಳನ್ನು ನೆಡುವ ಮುಖಾಂತರ ಭೂಮಿ ಮೇಲೆ ವಾಸಿಸುವ ಪ್ರತಿಯೊಬ್ಬರಿಗೂ ಉತ್ತಮ ಆಮ್ಲಜನಕ ದೊರಕಿಸಲು ಶ್ರಮಿಸಲಾಗುತ್ತಿದೆ. ಈಗ ಗಿಡ ನೆಟ್ಟರೆ ಮುಂದಿನ ಪೀಳಿಗೆಗೆ ನೆರವಾಗಲಿದೆ ಎಂದರು.

ಹಲಗೂರಿನ ಅಲಯನ್ಸ್ ಮೈತ್ರಿಕೂಟ ಅಧ್ಯಕ್ಷ ಸುರೇಂದ್ರ ಮಾತನಾಡಿ, ಸುಮಾರು 100 ಗಿಡಗಳಲ್ಲಿ 75 ಗಿಡಗಳನ್ನು ನೆಡಲಾಗಿದೆ. ನಮ್ಮ ಸದಸ್ಯರು ಎಲ್ಲರೂ ಸೇರಿ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮ ಹಾಕಲಾಗುವುದು. ನಮಗೂ ಪರಿಸರಕ್ಕೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ನಾವು ದಟ್ಟ ಕಾಡುಗಳ ಪ್ರದೇಶದ ಪಕ್ಕದಲ್ಲಿ ವಾಸಿಸುತ್ತಿದ್ದೇವೆ ಎಂದರು.

ಗಿಡಗಳು ಮತ್ತು ಪ್ರಾಣಿಗಳ ನಡುವೆ ವಾಸಿಸುವ ಜನ ನಾವು. ಮುತ್ತತ್ತಿ ಮತ್ತು ಬಸವನ ಬೆಟ್ಟ ಪ್ರದೇಶ ಮೈಸೂರು ಬೆಂಗಳೂರು ಜನರಿಗೆ ಸೆಲ್ಫಿ ತಾಣವಾದರೆ, ನಮಗೆ ಈ ಪರಿಸರವೇ ಬದುಕು. ನಾವು ಈಗಾಗಲೇ ನೆಟ್ಟಿರುವ ಹುಣಸೆ, ನೇರಳೆ, ಹೊನ್ನೆ ಮುಂತಾದ ಮರಗಳು ನಾಳೆ ಪ್ರಾಣಿ ಪಕ್ಷಿಗಳಿಗೆ ಆಧಾರವಾಗಲಿವೆ ಎಂದರು.

ಅಂತಾರಾಷ್ಟ್ರೀಯ ಕಾರ್ಯದರ್ಶಿ ಡಾ.ನಾಗರಾಜ್ ವಿ.ಬೈರಿ ಮಾತನಾಡಿ, ರಸ್ತೆ ಬದಿ ಗಿಡಗಳನ್ನು ನೆಟ್ಟು ನಮ್ಮೆಲ್ಲರ ಮನಸ್ಸು ಗೆದ್ದು, ವಿಶ್ವಾಸ ಗಳಿಸಿದ್ದೀರಿ. ಸಂಸ್ಥೆ ವಿದೇಶ ಮಟ್ಟದಲ್ಲಿ ಹೆಸರು ಮಾಡಿದೆ. ಆದರೆ, ಬೇರೆ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭವಾಗಿ ಭಾರತ ದೇಶಕ್ಕೆ ಬಂದಿದೆ. ನಮ್ಮ ಸಂಸ್ಥೆ ಸುಮಾರು 38 ವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಈ ವೇಳೆ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಧ್ಯಕ್ಷ ಆಲೈ ಬಾಲಾಜಿ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಚ್.ಮಾದೇಗೌಡ, ಚಂದ್ರಶೇಖರ, ಎನ್.ಶಿವಣ್ಣ, ವಿ.ಎಸ್.ನಾಗರಾಜು, ಸಂಸಥೆಯ ಜಿ.ಕೆ.ನಾಗೇಶ್ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.