ಆರೋಗ್ಯವಂತ ಬದುಕಿಗೆ ಮರ ಬೆಳೆಸಿ,ಪರಿಸರ ಉಳಿಸಿ: ಡಿ.ಕೆ.ಮಹೇಂದ್ರ ಕುಮಾರ್

| Published : Jun 06 2024, 12:31 AM IST

ಸಾರಾಂಶ

ಪರಿಸರ ದಿನಚಾರಣೆ ಒಂದು ದಿನಕ್ಕೆ ಸೀಮಿತಗೊಳಿಸುವುದು ಬೇಡ, ಪರಿಸರ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದ್ದು, ಜೂನ್ ೫ ರಂದು ಶಾಲೆ, ಹಲವೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ನಿಸರ್ಗದ ಜೊತೆ ಮನುಷ್ಯ ಬದುಕನ್ನು ರೂಪಿಸಿಕೊಂಡಿರುವಾಗ ಪರಿಸರದ ಉಳಿವಿಗಾಗಿ ಪೂರಕವಾಗಿರುವ ವಿಷಯಗಳತ್ತ ಗಮನ ಹರಿಸಿ ಎಂದು ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಡಿ.ಕೆ.ಮಹೇಂದ್ರ ಕುಮಾರ್ ತಿಳಿಸಿದರು.ವಿಜಯಪುರ ಹೋಬಳಿಯ ಬಿಜ್ಜವಾರ ಸರ್ಕಾರಿ ಪ್ರೌಢಶಾಲೆ ಮತ್ತು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ಸಂಯಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆಯ ಕರ್ತವ್ಯವನ್ನು ಪ್ರತಿ ವರ್ಷ ನೆನಪಿಸುವ ದಿನವೇ ಪರಿಸರ ದಿನವಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ಪರಿಸರವನ್ನು ಸಂರಕ್ಷಿಸಿ, ಆರೋಗ್ಯವಂತ ಜೀವನವನ್ನು ನಡೆಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಗಿಡ- ಮರಗಳನ್ನು ನೆಟ್ಟು ಬೆಳೆಸುವುದು ಕರ್ತವ್ಯವಾಗಿರುತ್ತದೆ ಎಂದರು.

ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಪರಿಸರ ದಿನಚಾರಣೆ ಒಂದು ದಿನಕ್ಕೆ ಸೀಮಿತಗೊಳಿಸುವುದು ಬೇಡ, ಪರಿಸರ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದ್ದು, ಜೂನ್ ೫ ರಂದು ಶಾಲೆ, ಹಲವೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಗುತ್ತದೆ. ಪ್ರತಿನಿತ್ಯವೂ ಪರಿಸರ ಸಂರಕ್ಷಿಸುವ ಕಾಳಜಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಪ್ರಚಾರ ಸಮಿತಿಯ ವತಿಯಿಂದ ಕನ್ನಡಪ್ರಭ ಯುವ ಆವೃತ್ತಿ ಪತ್ರಿಕೆಯನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಕೆಂಚನಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸುರೇಶ್, ಇಕೋ ಕ್ಲಬ್ ನ ಸಂಚಾಲಕಿ ಸ್ವರ್ಣಗೌರಿ, ಮಾನವ ಹಕ್ಕುಗಳ ಪ್ರಚಾರ ಸಮಿತಿಯ ತಾಲೂಕು ಅಧ್ಯಕ್ಷ ಎಂ.ರಾಮಕೃಷ್ಣ, ಉಪಾಧ್ಯಕ್ಷ ಬಿ.ಮಧುಚಂದ್ರ, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಮುನಿಕೃಷ್ಣ, ನಿವೃತ್ತ ಶಿಕ್ಷಕ ಗುರು ಸಿದ್ದಯ್ಯ, ಗೋವಿಂದಪ್ಪ, ಶಾಲಾ ಶಿಕ್ಷಕರಾದ ಸುರೇಶ್, ಅರ್ಪಿತ, ಜಯಸುಧ, ಕವಿತ ಸೇರಿ ಶಾಲಾ ವಿದ್ಯಾರ್ಥಿಗಳು ಇದ್ದರು.