ಸಾರಾಂಶ
ಗಿಡ-ಮರಗಳ ನಿಸ್ವಾರ್ಥತೆಯು ಮನುಕುಲಕ್ಕೆ ಶ್ರೇಷ್ಠ ಮಾರ್ಗವನ್ನು ತೋರಿಸಿದೆ
ಗದಗ: ಮನೆಯ ಮಕ್ಕಳಂತೆ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ನಗರದ ಪಂ. ಪಂಚಾಕ್ಷರ ಗವಾಯಿಗಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಸಹಯೋಗದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮ ಹಾಗೂ ವ್ಯಸನಮುಕ್ತ ಸಮಾಜಕ್ಕಾಗಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮ ಜೀವನದ ಉಸಿರು ಮರಗಳು. ಗಿಡ-ಮರಗಳ ನಿಸ್ವಾರ್ಥತೆಯು ಮನುಕುಲಕ್ಕೆ ಶ್ರೇಷ್ಠ ಮಾರ್ಗವನ್ನು ತೋರಿಸಿದೆ. ಗಿಡವನ್ನು ಬೆಳೆಸಿದರೆ ಸಕಲ ಪ್ರಾಣಿ ಕುಲಕ್ಕೆ ಶುದ್ಧ ಗಾಳಿ, ನೆರಳನ್ನು ನೀಡಿ, ಪ್ರಕೃತಿಯಲ್ಲಿ ಸಮತೋಲನ ಉಂಟು ಮಾಡುತ್ತವೆ ಎಂದು ಹೇಳಿದರು.ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎನ್. ರಂಜನಿ ಮಾತನಾಡಿ, ಡ್ರಗ್ಸ್‌ನ ಅಪಾಯಕಾರಿ ಪರಿಣಾಮಗಳ ಕುರಿತು ತಿಳಿಸಿದರು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.ಉಪನ್ಯಾಸಕ ಪ್ರೊ. ಡಿ.ಎಸ್. ಗಾಳಿ ಅವರು, ವ್ಯಸನಮುಕ್ತ ದಿನದ ಔಚಿತ್ಯ ಹಾಗು ಇಳಕಲ್ ಮಹಾಂತ ಶಿವಯೋಗಿಗಳ ಮಹಾಂತ ಜೋಳಿಗೆ ಅದರ ಸಾಮಾಜಿಕ ಕಳಕಳಿಯ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ವೀರೇಶ ಹಿತ್ತಲಮನಿ ವಹಿಸಿದ್ದರು. ರವಿ ಹೊಂಬಾಳೆ ಉಪಸ್ಥಿತರಿದ್ದರು. ಕವಿತಾ ಪೂಜಾರ ಪ್ರಾರ್ಥಿಸಿದರು. ಉಪನ್ಯಾಸಕಿ ಜಿ.ಎಸ್. ಇಟಗಿ ಸ್ವಾಗತಿಸಿದರು. ಉಪನ್ಯಾಸಕ ಗುರು ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಕೆ.ಎಚ್. ಹೆಬಸೂರ ವಂದಿಸಿದರು.