ಸಾರಾಂಶ
ಉಡುಪಿ ಸಮೀಪದ ಸಗ್ರಿ ವಾಸುಕಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಿ ನಾಗ ಪೂಜೆಯನ್ನು ನಡೆಸಲಾಯಿತು. ಉಡುಪಿಯ ಸಾವಿರಾರು ಮಂದಿ ಭಕ್ತರು ಇಲ್ಲಿ ನಾಗನಿಗೆ ತನು ಎರೆದರು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾದ್ಯಂತ ಶುಕ್ರವಾರ ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು. ಈ ಪ್ರಯುಕ್ತ ಉಡುಪಿ ರಥಬೀದಿಯಲ್ಲಿ ಹೂವು, ಹಣ್ಣು ಮಾರಾಟ ಭರ್ಜರಿಯಾಗಿತ್ತು.ಉಡುಪಿ ಸಮೀಪದ ಸಗ್ರಿ ವಾಸುಕಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಿ ನಾಗ ಪೂಜೆಯನ್ನು ನಡೆಸಲಾಯಿತು. ಉಡುಪಿಯ ಸಾವಿರಾರು ಮಂದಿ ಭಕ್ತರು ಇಲ್ಲಿ ನಾಗನಿಗೆ ತನು ಎರೆದರು.
ಅದೇ ರೀತಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಆದಿಶಕ್ತಿ ಸನ್ನಿಧಿಯಲ್ಲಿಯೂ ವಿಶೇಷವಾಗಿ ನಾಗಾರಾಧನೆಯನ್ನು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು.* ಪ್ಲಾಸ್ಟಿಕ್ ಮುಕ್ತ ಹಬ್ಬ
ವಿಶೇಷವಾಗಿ ಈ ಬಾರಿ ಉಡುಪಿ ಮತ್ತು ಸುತ್ತಮುತ್ತ ನಾಗಬನಗಳಲ್ಲಿ ಪ್ಲಾಸ್ಟಿಕ್ ರಹಿತ ನಾಗಪಂಚಮಿಯನ್ನು ಆಚರಿಸಲಾಯಿತು. ಸಾಮಾನ್ಯವಾಗಿ ನಾಗರಪಂಚಮಿಯಂದು ನಾಗಬನಗಳಿಗೆ ನೂರಾರು ಸಂಖ್ಯೆಯಲ್ಲಿ ಪೂಜೆಗೆ ಬರುವ ಭಕ್ತರು ತಂದಿರುವ ಹೂವು, ದೀಪದೆಣ್ಣೆ, ತುಪ್ಪ, ಹಾಲು, ಅಗರಬತ್ತಿ, ಕರ್ಪೂರ ಇತ್ಯಾದಿಗಳನ್ನು ತಂದಿರುವ ಪ್ಲಾಸ್ಟಿಕ್ ಪೌಚ್ ಅಥವಾ ಬ್ಯಾಗ್‌ಗಳನ್ನು ಮತ್ತು ಎಳನೀರು ಚಿಪ್ಪುಗಳನ್ನು ಅಲ್ಲಿಯೇ ಬಿಟ್ಟು ಹೋಗುವುದರಿಂದ, ನಾಗಬನಗಳಲ್ಲಿ ಸಾಕಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ. ಈ ಬಾರಿ ಈ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕೆ ಡಸ್ಟ್ ಬಿನ್‌ಗಳನ್ನು ಇಡಲಾಗಿತ್ತು. ನಂತರ ನಗರಸಭೆಯ ವತಿಯಿಂದ ಅವುಗಳನ್ನು ತೆರವುಗೊಳಿಸಲಾಯಿತು.-----ಇಲ್ಲಿ ಜೀವಂತ ನಾಗನಿಗೆ ತನು!
ಎಲ್ಲೆಡೆ ನಾಗನ ಕಲ್ಲಿಗೆ ತನು ಎರೆಯುವುದು ಸಂಪ್ರದಾಯವಾದರೇ, ಕಾಪು ಬಳಿಯ ಮಜೂರು ಗ್ರಾಮದ ವಾಸುಕಿ ನಿಲಯ ಎಂಬಲ್ಲಿಯ ಗೋವರ್ಧನ ರಾವ್ ಅವರು ಪ್ರತಿವರ್ಷ ಜೀವಂತ ನಾಗನಿಗೆ ತನು ಎರೆಯುತ್ತಾರೆ.ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಹಾಗೂ ಅಡುಗೆ ಭಟ್ಟರಾಗಿರುವ ರಾವ್, ಪ್ರವೃತ್ತಿಯಲ್ಲಿ ಉರಗರಕ್ಷಕರೂ ಹೌದು. ಕಳೆದ ಸುಮಾರು 25 ವರ್ಷಗಳಿಂದ, ಗಾಯಗೊಂಡ ಹಾವುಗಳನ್ನು ತಂದು ಆರೈಕೆ ಮಾಡಿ ಮತ್ತೆ ಪ್ರಕೃತಿಗೆ ಬಿಡುತ್ತಾರೆ. ವರ್ಷಕ್ಕೆ ಸುಮಾರು 20-25 ಹಾವುಗಳನ್ನು ಅವರು ರಕ್ಷಿಸುತ್ತಾರೆ.
ಅವರು ನಾಗರಪಂಚಮಿಯ ಸಂದರ್ಭದಲ್ಲಿ ಮನೆಯಲ್ಲಿ ಆರೈಕೆ ಪಡೆಯುತ್ತಿರುವ ಹಾವುಗಳಿಗೆ ನೀರು, ಹಾಲು, ಎಳನೀರಿನ ಅಭಿಷೇಕ ಮಾಡಿ, ಆರತಿ ಬೆಳಗಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.