ಪರಿಸರ ಇಲ್ಲದಿದ್ದರೆ ನಮ್ಮ ಬದುದು ಅಸಾಧ್ಯ: ಪ್ರೊ.ಗಿರೀಶ್

| Published : Aug 10 2024, 01:40 AM IST

ಸಾರಾಂಶ

ಜೀವ ವಿಜ್ಞಾನದಿಂದ ನಾವು ಹೊಸ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಗಳು ನಡೆಯುತ್ತಿವೆ.

ಹೊಸಪೇಟೆ: ಭೂಮಿಯಲ್ಲಿ ಜೀವಿಗಳ ಸೃಷ್ಟಿಗೆ ಪಂಚಭೂತಗಳೇ ಮೂಲ ಕಾರಣ. ಜೀವಿಯ ಉಗಮದಲ್ಲಿ ಮಹತ್ವದ ಪಾತ್ರ ವಹಿಸುವ ಗಾಳಿ, ನೀರು ಮತ್ತು ಬೆಳಕನ್ನು ಇಂದು ನಾವು ಬಂಧನಗೊಳಿಸುತ್ತಿದ್ದೇವೆ. ಇದು ಪ್ರಕೃತಿಯ ವಿನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಗಿರೀಶ್ ಎಸ್.ಟಿ. ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ವಿಜ್ಞಾನಗಳ ಇತಿಹಾಸ ವಿಭಾಗದಿಂದ ಪಂಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ಮತ್ತು ಹವಾಮಾನ ಬದಲಾವಣೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವ ವಿಜ್ಞಾನದಿಂದ ನಾವು ಹೊಸ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಗಳು ನಡೆಯುತ್ತಿವೆ. ಪ್ರತಿಯೊಂದು ಜೀವಿಗೂ ಅದರದೇ ಆದ ವೈಶಿಷ್ಟ್ಯವಿದೆ. ಅದರ ಅಸ್ಮಿತೆ ಉಳಿಸಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ನಮಗೆ ಪ್ರಕೃತಿ ಬೇಕೆ ಹೊರತು, ಪ್ರಕೃತಿಗೆ ನಮ್ಮ ಅವಶ್ಯಕತೆಯಿಲ್ಲ. ಪರಿಸರ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಿಲ್ಲ. ಪರಿಸರ ಉಳಿಸುವುದು ನಮ್ಮೆಲ್ಲರ ಜೀವನದ ಪಾಠವಾಗಬೇಕು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಸಿ.ನಾಗರಾಜ ಮಾತನಾಡಿ, ಒಂದು ದೇಶದ ಅಭಿವೃದ್ಧಿಯಲ್ಲಿ ಪರಿಸರ, ಸಮಾಜ ಮತ್ತು ಆರ್ಥಿಕತೆಗಳು ಪ್ರಮುಖ ಪಾತ್ರವಹಿಸುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ಇಂದು ಪರಿಸರದ ವಿನಾಶ ಹೆಚ್ಚುತ್ತಿದೆ. ೧೯೭೨ ರಲ್ಲಿ ಮೊದಲ ಬಾರಿಗೆ ಪರಿಸರ ಜಾಗೃತಿ ಕುರಿತಂತೆ ವಿಶ್ವಸಂಸ್ಥೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಜಗತ್ತಿನ ವಿವಿಧ ದೇಶಗಳು ಪಾಲ್ಗೊಂಡು ಪರಿಸರ ಸಂರಕ್ಷಣೆ ಬಗ್ಗೆ ಚರ್ಚೆ ನಡೆಸಿದವು. ಇದರ ಸವಿನೆನಪಿಗಾಗಿ ಪ್ರತಿವರ್ಷ ಜೂ.೫ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ. ಭಾರತದಲ್ಲಿ ಭೂಪಾಲ್ ಅನಿಲ್ ದುರಂತದ ನಂತರ ಎಚ್ಚೆತ್ತುಕೊಂಡ ಸರ್ಕಾರ ೧೯೮೫ರಲ್ಲಿ ಪರಿಸರ ಸಚಿವಾಲಯ ಆರಂಭಿಸಿತು. ನಮ್ಮ ದೇಶದಲ್ಲಿ ೧೯೭೪ರಲ್ಲಿ ಸುಂದರಲಾಲ್ ಬಹುಗುಣ ಅವರ ಚಿಪ್ಕೋ ಚಳವಳಿ, ಪಾಂಡುರಂಗ ನೇತೃತ್ವದಲ್ಲಿ ನಡೆದ ಅಪ್ಪಿಕೋ ಚಳವಳಿ, ಸಾಲುಮರದ ತಿಮ್ಮಕ್ಕ, ರಾಜೇಂದ್ರ ಸಿಂಗ್ ಅವರ ಪರಿಸರ ಕಾಳಜಿ ಹೀಗೆ ಹಲವಾರು ಜನರು ಪರಿಸರ ಸಂರಕ್ಷಣೆಯಲ್ಲಿ ನಿರ್ವಹಿಸಿದ ಪಾತ್ರ ಅಪಾರವಾದುದು ಎಂದು ತಿಳಿಸಿದರು.

ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ಉಷ್ಣಾಂಶವು ಏರುಗತಿ ತಲುಪಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯ ಕುರಿತಂತೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಮಾಡುತ್ತವೆ. ಸುಸ್ಥಿರತೆಯನ್ನು ಕಾಪಾಡುವಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಅಸಮಾನತೆ ತೊಡೆದು ಹಾಕಬೇಕು. ಅತಿವೃಷ್ಟಿ-ಅನಾವೃಷ್ಟಿಯಿಂದ ತೊಂದರೆಗೊಳಾಗುವ ಜನರನ್ನು ನಿರಾಶ್ರಿತರೆಂದು ಪರಿಗಣಿಸಿ ಅವರಿಗೆ ಪರಿಹಾರ ಧನವನ್ನು ನೀಡಬೇಕೆಂದು ವಿಶ್ವಸಂಸ್ಥೆ ಹೇಳುತ್ತದೆ. ಸುಸ್ಥಿರ ಅಭಿವೃದ್ಧಿಯ ೧೭ ಗುರಿಗಳನ್ನು ಯುವ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ವಾತಾವರಣದಲ್ಲಿದ್ದಾಗ ನಮಗೆ ಅದರ ಅರಿವು ಆಗುವುದಿಲ್ಲ. ಗಣಿಗಾರಿಕೆ, ಕಾರ್ಖಾನೆ, ಟ್ರಾಫಿಕ್ ಜಾಂನಿಂದ ಆಗುವ ಮಾಲಿನ್ಯದಿಂದ ಕೂಡಿದ ಪರಿಸರಕ್ಕೆ ಹೋದಾಗ ನಮಗೆ ಪರಿಸರದ ಮಹತ್ವ ಗೊತ್ತಾಗುತ್ತದೆ. ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಮಾತನಾಡಿದರು. ವಿಜ್ಞಾನಗಳ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಶೈಲಜಾ ಇಂ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಇದ್ದರು.