ತಾಪಮಾನ ಹೆಚ್ಚಳದಿಂದ ಪ್ರಕೃತಿಯಲ್ಲಿ ಹಲವು ಅವಘಡಗಳು ಕಂಡು ಬರುತ್ತದೆ. ನಿರ್ದಿಷ್ಟ ಮಳೆ ಬಾರದೆ ಸಸ್ಯ ಸಂಕುಲ ವಿನಾಶದ ಅಂಚಿಗೆ ಬಂದಿವೆ. ಮನುಷ್ಯ ದುರಾಸೆ ಮನಸ್ಥಿತಿಯಿಂದ ಹೊರಬಂದು ಹಿರಿಯರ ಜೀವನ ಶೈಲಿ ರೂಢಿಸಿಕೊಳ್ಳುವುದು ಅವಶ್ಯಕ.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಕೃತಿ ಅಸಮತೋಲನ ಹೋಗಲಾಡಿಸಲು ಪ್ರತಿಯೊಬ್ಬರೂ ಗಿಡ ಮರ ಬೆಳೆಸಬೇಕು ಎಂದು ಸಂತೆಕಸಲಗೆರೆ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಲೋಕೇಶ್ ತಿಳಿಸಿದರು.ತಾಲೂಕಿನ ಸಂತೆಕಲಸಗೆರೆ ಶಾಲಾ ಆವರಣದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸರ್ಕಾರಿ ಪ್ರೌಢಶಾಲೆಯಿಂದ ವಿಶ್ವ ಓಜೋನ್ ದಿನದ ನಿಮಿತ್ತ ನಡೆದ ವಿದ್ಯಾರ್ಥಿಗಳ ಮೂಲಕ ಅರಣ್ಯ ಸಾಕ್ಷರತಾ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ತಾಪಮಾನ ಹೆಚ್ಚಳದಿಂದ ಪ್ರಕೃತಿಯಲ್ಲಿ ಹಲವು ಅವಘಡಗಳು ಕಂಡು ಬರುತ್ತದೆ. ನಿರ್ದಿಷ್ಟ ಮಳೆ ಬಾರದೆ ಸಸ್ಯ ಸಂಕುಲ ವಿನಾಶದ ಅಂಚಿಗೆ ಬಂದಿವೆ. ಮನುಷ್ಯ ದುರಾಸೆ ಮನಸ್ಥಿತಿಯಿಂದ ಹೊರಬಂದು ಹಿರಿಯರ ಜೀವನ ಶೈಲಿ ರೂಢಿಸಿಕೊಳ್ಳುವುದು ಅವಶ್ಯಕ ಎಂದರು.ಇಂಗಾಲದ ಡೈಆಕ್ಸೈಡ್‌ನಿಂದಾಗಿ ಓಜೋನ್ ಪದರಕ್ಕೆ ದಿನೇ ದಿನೇ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ದಿನನಿತ್ಯದ ಬಳಕೆಯಲ್ಲಿ ರೆಫ್ರಿಜರೇಟರ್, ಎಸಿಯಂತಹ ವಸ್ತುಗಳ ಬಳಕೆ ತಡೆಗಟ್ಟಬೇಕು. ದೈನಂದಿನ ಬದುಕಿನಲ್ಲಿ ಬಟ್ಟೆ ಬ್ಯಾಗ್‌ಗಳು, ಹಸಿರು ಗೊಬ್ಬರ ಸೇರಿದಂತೆ ಪರಿಸರ ಪೂರಕ ವಸ್ತುಗಳನ್ನು ಬಳಕೆ ಮಾಡುವುದು ಅತ್ಯಾವಶಕ್ಯ ಎಂದು ಪ್ರತಿಪಾದಿಸಿದರು.
ಸಂಪನ್ಮೂಲ ವ್ಯಕ್ತಿ ರಶ್ಮಿ ಮಾತನಾಡಿ, ನೀರು, ಗಾಳಿ, ಮಣ್ಣು ಮತ್ತು ನೈರ್ಮಲ್ಯದ ಕಡೆಗೆ ವಿಶೇಷವಾದ ಕಾಳಜಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಓಜೋನ್ ಪದರ ಕ್ಷೀಣಿಸುವಿಕೆಯಿಂದ ಜಗತ್ತು ಹಲವು ಸಂಕೀರ್ಣತೆ ಎದುರಿಸಬೇಕಾಗಿದೆ. ಅತಿಯಾದ ತಾಪಮಾನದಿಂದ ಈಗಾಗಲೇ ಹಲವು ರೀತಿಯ ಸಮಸ್ಯೆಗಳು ವಿಶ್ವವನ್ನು ಕಾಡುತ್ತಿವೆ ಎಂದು ಎಚ್ಚರಿಸಿದರು.ದೇಶದಲ್ಲಿ ಶೇ.30ರಷ್ಟು ಅರಣ್ಯ ಪ್ರದೇಶದ ಅಗತ್ಯವಿದೆ. ಅತಿ ಹೆಚ್ಚು ಅರಣ್ಯವನ್ನು ಬೆಳೆಸುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಪರಿಸರ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ವಿದ್ಯಾರ್ಥಿಗಳ ಮೂಲಕ ಅರಣ್ಯ ಸಾಕ್ಷರತಾ ಆಂದೋಲನ ಕಾರ್‍ಯಕ್ರಮ ಹಮ್ಮಿಕೊಂಡು ಒಬ್ಬ ವಿದ್ಯಾರ್ಥಿ ಎರಡು ಗಿಡಗಳನ್ನು ನೆಡುವ ಮೂಲಕ ಸಸ್ಯ ಸಂರಕ್ಷಣೆಗೆ ಆಸಕ್ತಿ ಬೆಳೆಸಿದಂತಾಗುತ್ತದೆ. ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಅರಣ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಗಿಡ ಬೆಳೆಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಗದು ಬಹುಮಾನ ನೀಡಲಾಗುವುದು ಎಂದರು.ಸಮಾರಂಭದಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾಸೀರ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಸಂತೆಕಸಲಗೆರೆ ಬಸವರಾಜು ಪರಿಸರ ಗೀತೆಗಳನ್ನು ಸಾಧರ ಪಡಿಸಿದರು. 500 ಕ್ಕೂ ಹೆಚ್ಚು ವಿವಿಧ ಗಿಡಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.