ಜಗತ್ತಿನಲ್ಲಿ ಮಾನವ ಸಂಪನ್ಮೂಲದ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಯುವಶಕ್ತಿಯ ಮೇಲೆ ಜಾಗತಿಕ ಮಟ್ಟದಲ್ಲಿ ವಿಶ್ವಾಸ ಹೆಚ್ಚುತ್ತಿದೆ.

ಹುಬ್ಬಳ್ಳಿ:

ಜಗತ್ತಿನಲ್ಲಿ ಮಾನವ ಸಂಪನ್ಮೂಲದ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಯುವಶಕ್ತಿಯ ಮೇಲೆ ಜಾಗತಿಕ ಮಟ್ಟದಲ್ಲಿ ವಿಶ್ವಾಸ ಹೆಚ್ಚುತ್ತಿದೆ. ದೇಶದ ಅಪಾರ ಯುವ ಸಂಪನ್ಮೂಲಕ್ಕೆ ಕೌಶಲ್ಯಯುತ ಶಿಕ್ಷಣ ನೀಡಿ, ಉದ್ಯೋಗ ಅರಸುವವರ ಬದಲು ಉದ್ಯೋಗ ಸೃಷ್ಟಿಸುವ ಉದ್ಯಮಿಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ತಾಜ್‌ ನಗರದಲ್ಲಿರುವ ದ್ಯಾವಪ್ಪನವರ, ಕೊರವಿ, ಸಿದ್ನಾಳ ಎಜುಕೇಶನ್ ಟ್ರಸ್ಟ್ ಹಾಗೂ ಚೇತನ ಸಮೂಹ ಸಂಸ್ಥೆಗಳ ಚೇತನ ಬಿಸಿನೆಸ್ ಸ್ಕೂಲ್ ಮತ್ತು ಚೇತನ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಜ್ಞಾನಯೋಗಿ ಶ್ರೀಸಿದ್ದೇಶ್ವರ ಸ್ವಾಮೀಜಿ ಸಭಾಂಗಣ ಹಾಗೂ ಚೇತನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಂದು ಕಾಲದಲ್ಲಿ ರಕ್ಷಣಾ ಕ್ಷೇತ್ರದ ಅಗತ್ಯ ವಸ್ತುಗಳಿಗಾಗಿ ವಿದೇಶಗಳನ್ನು ಅವಲಂಬಿಸಿದ್ದ ಭಾರತ ಇಂದು ಸ್ವಾವಲಂಬನೆಯತ್ತ ಮುನ್ನಡೆಯುತ್ತಿದೆ. ರಕ್ಷಣಾ ಸಾಮಗ್ರಿಗಳನ್ನು ದೇಶದಲ್ಲೇ ಉತ್ಪಾದಿಸುವುದರ ಜತೆಗೆ ಸುಮಾರು 40 ಸಾವಿರ ಬಗೆಯ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ. 2014ರಲ್ಲಿ ದೇಶದಲ್ಲಿ ಕೇವಲ 200 ಸ್ಟಾರ್ಟ್‌ಅಪ್‌ಗಳಿದ್ದವು. ಇಂದು ಅವುಗಳ ಸಂಖ್ಯೆ ಎರಡೂವರೆ ಲಕ್ಷ ದಾಟಿದ್ದು, ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿವೆ ಎಂದರು.

ಚೇತನಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಪರಿಶ್ರಮದಿಂದ 24 ಯಂತ್ರೋಪಕರಣಗಳನ್ನು ಸಂಶೋಧಿಸಿದ್ದೇನೆ. ರೈತರ ಸಂಶೋಧನೆಗೂ ಪೇಟೆಂಟ್ ದೊರೆಯುತ್ತಿರುವುದು ಸಂತಸದ ಸಂಗತಿ. ಯುವ ಸಮೂಹ ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ ಕೃಷಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳಬೇಕು. ಕಲಿತ ಯುವಕರು ಕೃಷಿಯಿಂದ ದೂರ ಉಳಿಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಮಾತನಾಡಿ, ಈ ಪ್ರಶಸ್ತಿ ನನಗೆ ವೈಯಕ್ತಿಕವಾಗಿ ಸಂದ ಗೌರವವಲ್ಲ. ರಾಜ್ಯದ ಎಲ್ಲ ಮಹಿಳೆಯರಿಗೆ ದೊರೆತ ಗೌರವವಾಗಿದೆ. ಸಮಾಜದಲ್ಲಿ ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದರು.

ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಮಠಾಧೀಶರು ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹದ ಫಲವಾಗಿ ಇಂದು ಈ ಭಾಗದ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಶಿಕ್ಷಣಕ್ಕೆ ನೀಡುವಷ್ಟೇ ಆದ್ಯತೆಯನ್ನು ಕೃಷಿಗೂ ನೀಡಬೇಕು. ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಬೇಕು. ರೈತರ ನೆರವಿಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಅವರ ಬದುಕು ಹಸನಾಗಲಿದೆ ಎಂದು ಹೇಳಿದರು.

ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಮುರಗೇಶ ಸಿದ್ನಾಳ, ಡಾ. ವಿಶ್ವನಾಥ ಕೊರವಿ, ರಾಜಣ್ಣ ಕೊರವಿ, ಜಗದೀಶ ದ್ಯಾವಪ್ಪನವರ, ಡಾ. ಪವನ ಅಪರಂಜಿ, ಮಹೇಶ ದ್ಯಾವಪ್ಪನವರ, ಮಾಜಿ ಸಂಸದ ಐ.ಜಿ. ಸನದಿ, ಎ.ಎಚ್. ಚಚಡಿ ಉಪಸ್ಥಿತರಿದ್ದರು.