ಶಕ್ತಿ ಯೋಜನೆ ಕುರಿತು ಚರ್ಚೆ ನಡೆದಿದ್ದು, ದಿಬ್ಬೂರಹಳ್ಳಿ ಮಾರ್ಗದಲ್ಲಿ ಬಸ್‌ಗಳ ಕೊರತೆ ಇರುವ ಬಗ್ಗೆ ಸಭೆಯಲ್ಲಿ ಗಮನ ಸೆಳೆಯಲಾಯಿತು. ತಾಲೂಕಿನಲ್ಲಿ ಪ್ರಸ್ತುತ 50 ಬಸ್‌ಗಳು ಸಂಚರಿಸುತ್ತಿದ್ದು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಇನ್ನೂ 10 ಬಸ್‌ಗಳ ಅಗತ್ಯವಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಜಗದೀಶ್ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ತಾಲೂಕಿನಾದ್ಯಂತ ಗೃಹಲಕ್ಷ್ಮೀ ಯೋಜನೆಯಡಿ ಅನರ್ಹ ಹಾಗೂ ಮರಣ ಹೊಂದಿದ ಫಲಾನುಭವಿಗಳನ್ನು ಪತ್ತೆಹಚ್ಚಿ, ಸರ್ಕಾರದ ಹಣ ದುರುಪಯೋಗವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫಲಾನುಭವಿಗಳು ಮೃತಪಟ್ಟ ಬಳಿಕವೂ ಅವರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾಗುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಪ್ರಕರಣಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರದ ಹಣ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಜವಾಬ್ದಾರಿ ಹಾಗೂ ಇಲಾಖೆಗಳ ಸಮನ್ವಯಕ್ಕೆ ಆದ್ಯತೆ ನೀಡಬೇಕು. ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
10 ಹೆಚ್ಚುವರಿ ಬಸ್‌ಗೆ ಬೇಡಿಕೆ:ಶಕ್ತಿ ಯೋಜನೆ ಕುರಿತು ಚರ್ಚೆ ನಡೆದಿದ್ದು, ದಿಬ್ಬೂರಹಳ್ಳಿ ಮಾರ್ಗದಲ್ಲಿ ಬಸ್‌ಗಳ ಕೊರತೆ ಇರುವ ಬಗ್ಗೆ ಸಭೆಯಲ್ಲಿ ಗಮನ ಸೆಳೆಯಲಾಯಿತು. ತಾಲೂಕಿನಲ್ಲಿ ಪ್ರಸ್ತುತ 50 ಬಸ್‌ಗಳು ಸಂಚರಿಸುತ್ತಿದ್ದು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಇನ್ನೂ 10 ಬಸ್‌ಗಳ ಅಗತ್ಯವಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಜಗದೀಶ್ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಪ್ರತಿದಿನ ಅಕ್ಕಿ ವಿತರಣೆ ಬಳಿಕ ಸ್ಟಾಕ್ ವಿವರ ದಾಖಲಿಸಬೇಕು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ತೆರೆಯುವ ಕುರಿತು ಚರ್ಚಿಸಲಾಯಿತು. ಗೃಹಜ್ಯೋತಿ ಯೋಜನೆಯಡಿ ಬಾಡಿಗೆ ಮನೆಗಳ ಫಲಾನುಭವಿಗಳಿಗೆ ಪ್ರತ್ಯೇಕ ಮೀಟರ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆಯಿತು.ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ. ಮುನಿಯಪ್ಪ, ತಾಪಂ ಇಒ ಹೇಮಾವತಿ ಆರ್., ತಾಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ಸಿಡಿಪಿಒ ವಿದ್ಯಾ ವಸ್ತ್ರದ್, ಬೆಸ್ಕಾಂ ಅಧಿಕಾರಿ ಪ್ರಭು, ಆಹಾರ ಇಲಾಖೆ ಅಧಿಕಾರಿ ವೆಂಕಟಲಕ್ಷ್ಮಮ್ಮ, ಕೆಎಸ್‌ಆರ್‌ಟಿಸಿ ಅಧಿಕಾರಿ ಜಗದೀಶ್ ಸೇರಿದಂತೆ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.