ಜಿಎಸ್‌ಬಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ ಸಮಾರಂಭ ಜ.೧೧ರಂದು ಪಟ್ಟಣದ ಶ್ರೀ ವಿದ್ಯಾಧಿರಾಜ ಕಲಾಮಂದಿರದಲ್ಲಿ ಜರುಗಲಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಜಿಎಸ್‌ಬಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ ಸಮಾರಂಭ ಜ.೧೧ರಂದು ಪಟ್ಟಣದ ಶ್ರೀ ವಿದ್ಯಾಧಿರಾಜ ಕಲಾಮಂದಿರದಲ್ಲಿ ಜರುಗಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ನಾಗೇಶ ದಾಮೋದರ ಹುಲೇಕಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೧ರ ಬೆಳಗ್ಗೆ ೧೦ ಗಂಟೆಗೆ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಜೀ ಸಮಾರಂಭ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ನಾಗೇಶ ದಾಮೋದರ ಹುಲೇಕಲ್ ವಹಿಸುವರು. ಮುಖ್ಯ ಅತಿಥಿಗಳಾಗಿ ಸಹಕಾರ ರತ್ನ ಪುರಸ್ಕೃತ, ಶಿರಾಲಿಯ ಮಾರುತಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಅಶೋಕ ಶಾಂತಾರಾಮ ಪೈ ಹೆಗ್ಗಾರ, ಸಹಕಾರ ರತ್ನ ಪುರಸ್ಕೃತ, ತೀರ್ಥಹಳ್ಳಿ ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯಕ, ಶಿರಸಿ ಸಹಕಾರಿ ಸಂಘಗಳ ನಿಬಂಧಕ ಅಜಿತ ಶಿರಹಟ್ಟಿ, ಶಿರಸಿಯ ಲೆಕ್ಕ ಪರಿಶೋಧಕ ಮಂಜುನಾಥ ಎಸ್.ಶೆಟ್ಟಿ, ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ ದೇವಾಲಯದ ಮೊಕ್ತೇಸರ ಕೆ.ವಿ.ಮಹಾಲೆ ಉಪಸ್ಥಿತರಿರುವರು. ಮಧ್ಯಾಹ್ನ ೩ ಗಂಟೆಯಿಂದ ದಾಸವಾಣಿ ಮತ್ತು ಚಿತ್ರಕಲಾವೈಭವ ಕಾರ್ಯಕ್ರಮ ನಡೆಯಲಿದೆ ಎಂದರು.

೧೯೯೯ರಲ್ಲಿ ಆರಂಭಗೊಂಡ ಸೊಸೈಟಿ ಆರಂಭದ ೩ ತಿಂಗಳಲ್ಲಿ ೪೪೪ ಸದಸ್ಯರನ್ನು ಹೊಂದಿದ್ದು, ಈವರೆಗೂ ಯಾವುದೇ ಬ್ಯಾಂಕ್ ಹಾಗೂ ಸಂಘಗಳಿಂದ ಸಾಲ ಪಡೆದುಕೊಳ್ಳದೇ ಸ್ವಂತ ಬಂಡವಾಳದಿಂದ ೨೫ ವರ್ಷಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಪ್ರಸಕ್ತ ೯೮೫ ಸದಸ್ಯರನ್ನು ಹೊಂದಿ ₹೪೩ ಲಕ್ಷ ಶೇರು, ₹೧೫ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಯಾವುದೇ ಸಾಲ ಕಟಬಾಕಿ ಇಲ್ಲದೇ ಪ್ರತಿವರ್ಷ ಅ ವರ್ಗದಲಿ ಗುರುತಿಸಿಕೊಂಡಿದ್ದು ಯಾವುದೇ ನ್ಯಾಯಾಲಯದ ಪ್ರಕರಣಗಳು ಇಲ್ಲ. ಕೊರೋನಾ ಸಂದರ್ಭದಲ್ಲಿ ಸ್ವಲ್ಪ ತೊಡಕಾಗಿದ್ದು ಹೊರತುಪಡಿಸಿ ೨೦೧೮ರಿಂದ ಶೇ.೧೬ ಡಿವಿಡೆಂಡ್ ನೀಡುತ್ತಿದ್ದೇವೆ. ₹೨೭ ಲಕ್ಷಗಳನ್ನು ಆದಾಯ ತೆರಿಗೆ ಕಾರಣಕ್ಕೆ ತೆಗೆದಿರಿಸಿದ್ದು ಅದನ್ನು ಹೊರತುಪಡಿಸಿ ₹೩೦ ಲಕ್ಷ ಲಾಭ ಗಳಿಸಿದೆ. ನಮಗೆ ಲಾಭ ಮುಖ್ಯವಲ್ಲ. ಗ್ರಾಹಕರ ಮತ್ತು ಸದಸ್ಯರ ಅನುಕೂಲವೇ ಪ್ರಾಮುಖ್ಯ. ತ್ವರಿತ ಸೇವೆಗೆ ಗಣಕೀಕೃತ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸವಿತಾ ಎನ್.ಕಾಮತ, ನಿರ್ದೇಶಕರಾದ ಸುರೇಶ ಎಲ್.ಪೈ, ಮರ್ತು ಆರ್. ನಾಯಕ ಬೆಂಗ್ರೆ, ವಾಮನ ಎಸ್.ಪೈ, ಕೃಷ್ಣಾನಂದ ಎನ್. ದೇವನಳ್ಳಿ, ವಿ.ಎಸ್. ಶೆಟ್, ಆರ್.ಜಿ. ಕೊಂಡ್ಲಿ, ಸ್ವಾತಿ ಸುಧೀರ ನಾಯಕ ಬೆಂಗ್ರೆ, ವ್ಯವಸ್ಥಾಪಕ ಯೋಗೀಶ ಕಾಮತ ಮುಂತಾದವರಿದ್ದರು.