ಬಡ ವರ್ತಕರಿಗೆ ಜಿಎಸ್‌ಟಿ ಹೊರೆ: ಶುಭದ ರಾವ್‌ ಟೀಕೆ

| Published : Jul 25 2025, 01:13 AM IST

ಸಾರಾಂಶ

ಕೇಂದ್ರ ಸರ್ಕಾರ ನಿಯಂತ್ರಿತ ತೆರಿಗೆ ಇಲಾಖೆಯು ವ್ಯಾಪಾರಿಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ಹಾಕಿ ನೋಟಿಸ್ ಜಾರಿಗೊಳಿಸಿದ್ದರಿಂದಾಗಿ ರಾಜ್ಯದ ವರ್ತಕ ವಲಯವು ಆತಂಕಕ್ಕೀಡಾಗಿತ್ತು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಆರೋಪಿಸಿದ್ದಾರೆ.

ಕಾರ್ಕಳ: ಅವೈಜ್ಙಾನಿಕ ನೋಟಿಸ್ ಜಾರಿಗೊಳಿಸಿದ ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯ ಕ್ರಮದಿಂದ ಆತಂಕ ಹಾಗೂ ಗೊಂದಲಕ್ಕೊಳಗಾಗಿದ್ದ ರಾಜ್ಯದ ವರ್ತಕ ವಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿಶೇಷ ಕಾಳಜಿಯಿಂದ ರಕ್ಷಿಸಿದ್ದಾರೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.

ಟೀ ಅಂಗಡಿ, ಕಾಂಡಿಮೆಂಡ್ಸ್, ಬೇಕರಿ ಮುಂತಾದ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಅಭಿವೃದ್ಧಿಗೊಂಡ ಯುಪಿಐ ಆ್ಯಪ್ ಮೂಲಕ ವ್ಯಾಪಾರ ವ್ಯವಹಾರ ನಡೆಸುತ್ತಿದ್ದರು. ಇದನ್ನೇ ಮಾನದಂಡವಾಗಿಸಿದ ಕೇಂದ್ರ ಸರ್ಕಾರ ನಿಯಂತ್ರಿತ ತೆರಿಗೆ ಇಲಾಖೆಯು ವ್ಯಾಪಾರಿಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ಹಾಕಿ ನೋಟಿಸ್ ಜಾರಿಗೊಳಿಸಿದ್ದರಿಂದಾಗಿ ರಾಜ್ಯದ ವರ್ತಕ ವಲಯವು ಆತಂಕಕ್ಕೀಡಾಗಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯೋಚಿತ ನಿರ್ಧಾರದಿಂದ ವ್ಯಾಪಾರಿ ವಲಯದ ಈ ಎಲ್ಲಾ ಆತಂಕ ದೂರಗೊಳಿಸಿದ್ದು ಇದು ಸಿದ್ದರಾಮಯ್ಯನವರ ಆಡಳಿತ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.

ವ್ಯಾಪಾರಸ್ಥರಿಗೆ ದಿನ ಒಂದಕ್ಕೆ 2000 ರೂಪಾಯಿಗಿಂತ ಹೆಚ್ಚುವರಿ ಹಣವು ಗೂಗಲ್ ಪೇ ಮೂಲಕ ಜಮಾವಣೆಯಾದರೆ ಅದರಿಂದ ಶೇ. 1.8 ರಷ್ಟು ಹಣವನ್ನು ಜಿಎಸ್‌ಟಿಯಾಗಿ ಪಾವತಿಸಬೇಕಾಗಿದೆ.

ಕಷ್ಟಕಾಲದಲ್ಲಿ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಜನರು ತಮ್ಮ ಕುಟುಂಬ ಸದಸ್ಯರಿಗೆ ಅರೋಗ್ಯ ವಿಮೆ ಹಾಗು ಜೀವ ವಿಮೆ ಮಾಡಿಸಿಕೊಂಡರೆ ಅಲ್ಲಿಯೂ ತೆರಿಗೆ ಇಲಾಖೆ ಶೇಕಡಾ 18 ರಷ್ಟು ಜಿಎಸ್‌ಟಿ ಬರೆ ಹಾಕಿ ಜನರನ್ನು ಶೋಷಿಸುತ್ತಿದೆ. ತಮ್ಮ ಕಷ್ಟಕ್ಕೆ ಸಹಾಯವಾಗಲಿ ಎಂದು ಆರೋಗ್ಯ ವಿಮೆ ಮಾಡಿಸುವ ಜನರಿಗೆ ತೆರಿಗೆ ಇಲಾಖೆ ಕಷ್ಟಕೊಡುವುದು ಅಮಾನವೀಯ ಕ್ರಮ, ಇದರಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಹೊಟೇಲ್‌ಗಳಲ್ಲಿ ಆಹಾರ ತಯಾರಿಸಲು ಬಳಸುವ ಪ್ರತಿಯೊಂದು ಆಹಾರ ಸಾಮಗ್ರಿಗಳ ಮೇಲೆಯೂ ಜಿಎಸ್‌ಟಿ ಭರಿಸಿಯೇ ಹೊಟೇಲ್ ಮಾಲೀಕರು ಖರೀದಿ ಮಾಡುತ್ತಾರೆ, ಹೊಟೇಲಿಗೆ ತಂದು ಅದನ್ನು ಬೇಯಿಸಿ ಗ್ರಾಹಕರಿಗೆ ಬಡಿಸುವಾಗ ಮತ್ತೆ ಗ್ರಾಹಕರ ಮೇಲೆ ಜಿಎಸ್‌ಟಿ ಹಾಕಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಜನರ ಮೇಲೆ ವಿಧಿಸುತ್ತಿರುವ ಅಮಾನುಷ ತೆರಿಗೆಯನ್ನು ಪುನಃ ಪರಿಷ್ಕರಿಸಬೇಕಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.