ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗ್ಯಾರಂಟಿ ಯೋಜನೆಗಳ ಹೊರೆಯಿಂದ ಆರ್ಥಿಕವಾಗಿ ತೀವ್ರ ನಲುಗಿ ಹೋಗಿರುವ ರಾಜ್ಯ ಸರ್ಕಾರ ಜನ ಸಾಮಾನ್ಯರ ಮೇಲೆ ಬಸ್ ದರ ಏರಿಕೆ ಹೊರೆ ಹಾಕಿದೆ ಎಂದು ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡುವಂತೆ ಶಾಸಕರು ಅಂಗಲಾಚುತ್ತಿದ್ದರೂ ಕೊಡುತ್ತಿಲ್ಲ. ಮರ್ಯಾದೆ ಉಳಿಸಿಕೊಳ್ಳಲು ಶಾಸಕರು ಅವಲತ್ತುಕೊಳ್ಳುತ್ತಿದ್ದರೂ ಅವರಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಸಾರಿಗೆ ಬಸ್ ದರವನ್ನು ಶೇ.2ರಿಂದ 3ರಷ್ಟು ಏರಿಸಿದ್ದನ್ನು ಕಂಡಿದ್ದೇವೆ. ಆದರೆ, ಏಕಾಏಕಿ ಶೇ.15ರಷ್ಟು ಏರಿಕೆ ಮಾಡುವ ಮೂಲಕ ಬಡವರಿಗೆ ಸರ್ಕಾರ ಘೋರ ಅನ್ಯಾಯ ಮಾಡಿದೆ. ಬಡವರ ಕೂಲಿ ದರ ಹೆಚ್ಚಿಸಿ ಬಸ್‌ದರ ಹೆಚ್ಚಳ ಮಾಡಿದರೆ ಅದು ನ್ಯಾಯೋಚಿತ. ಆದರೆ, ಕೂಲಿ ದರವನ್ನು ಹೆಚ್ಚಿಸದೆ ಬಸ್‌ದರ ಏರಿಕೆ ಮಾಡುವುದು ನ್ಯಾಯ ಸಮ್ಮತವಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಹೊತ್ತಿನಲ್ಲಿ ಬಸ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಟೀಕಿಸಿದರು.ಮಳವಳ್ಳಿ ಕ್ಷೇತ್ರದ ಶಾಸಕರು ಮಂತ್ರಿಯಾಗಬೇಕೆಂದು ಹೈಕೋರ್ಟ್ ನ್ಯಾಯಾಧೀಶ ಎಚ್.ಎಸ್.ಶಿವಶಂಕರೇಗೌಡರು ದೇವರಿಗೆ ಹರಕೆ ಕಟ್ಟಿಕೊಂಡಿರುವುದಾಗಿ ಹೇಳಿಕೆ ನೀಡಿರುವುದನ್ನು ನೋಡಿದಾಗ ಇವರು ನ್ಯಾಯಮೂರ್ತಿಗಳೋ, ರಾಜಕಾರಣಿಗಳೋ ಎಂದು ಪ್ರಶ್ನಿಸುವಂತಾಗಿದೆ ಎಂದರು.
ಈ ವಿಷಯವಾಗಿ ರಾಷ್ಟ್ರಪತಿ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ದಾಖಲೆಗಳ ಸಹಿತ ದೂರು ನೀಡುತ್ತೇವೆ. ಈ ಕೂಡಲೇ ಅವರನ್ನು ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸುವುದಾಗಿ ಹೇಳಿದರು.ಕೃಷ್ಣರಾಜಸಾಗರ ಜಲಾಶಯದಲ್ಲಿ 124 ಅಡಿಯಷ್ಟು ನೀರು ಸಂಗ್ರಹವಾಗಿದೆ. ಆದರೂ ಕಟ್ಟುನೀರು ಪದ್ಧತಿಯಡಿ ಮಳವಳ್ಳಿಗೆ ನೀರು ಹರಿಸುತ್ತಿರುವುದೇಕೆ. ಕಟ್ಟು ನೀರು ಪದ್ಧತಿಯಲ್ಲಿ ನೀರನ್ನು ಹರಿಸದೆ ನಿರಂತರವಾಗಿ ನೀರನ್ನು ಹರಿಸಬೇಕು ಎಂದು ಆಗ್ರಹಿಸಿದರು.ನೀರಾವರಿ ಸಲಹಾ ಸಮಿತಿ ಸಭೆಗೆ ಶಾಸಕರು ಗೈರು ಹಾಜರಾಗಿದ್ದಾರೆಂದರೆ ಅವರ ಭಾಗದಲ್ಲಿ ಸಾಕಷ್ಟು ನೀರಿರುವಂತೆ ಕಾಣುತ್ತದೆ. ನಮ್ಮ ಭಾಗದಲ್ಲಿ ನೀರಿಲ್ಲ. ಅದಕ್ಕಾಗಿ ನಾವು ಕೇಳಿಕೊಳ್ಳುತ್ತಿದ್ದೇವೆ. ಮಳವಳ್ಳಿ ಜನರು ಅರ್ಧಂಬರ್ಧ ನೀರಿನಲ್ಲಿ ಬದುಕುತ್ತಿದ್ದಾರೆ. ಅದಕ್ಕಾಗಿ ನಮಗೆ ನಿರಂತರ ನೀರು ಹರಿಸಿ ಜನರನ್ನು ರಕ್ಷಿಸುವಂತೆ ಒತ್ತಾಯಿಸಿದರು.
ಸಂವಿಧಾನಕ್ಕೆ ಅಗೌರವವಾಗಿ ಮಾತನಾಡಿದರೆಂದು ಆರೋಪಿಸಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ದಲಿತ ಸಮುದಾಯದವರನ್ನು ಎತ್ತಿಕಟ್ಟಿ ಸರ್ಕಾರವೇ ರಾಜ್ಯದ ಹಲವೆಡೆ ಬಂದ್ ಮಾಡಿಸುತ್ತಿದೆ. ಆದರೆ, ಮಳವಳ್ಳಿ ಶಾಸಕರು ರಾಜ್ಯದಲ್ಲಿರುವುದು ಅಂಬೇಡ್ಕರ್ ಸಿದ್ಧಾಂತ ಅಲ್ಲ. ಸಿದ್ದರಾಮಯ್ಯ ಸಿದ್ಧಾಂತ ಎಂದು ಹೇಳಿರುವುದು ಸಂವಿಧಾನಕ್ಕೆ ಅಗೌರವ ತಂದಂತಲ್ಲವೇ?, ಅದರ ವಿರುದ್ಧ ಯಾರೂ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.ನಾನು ಮಾತನಾಡಿರುವುದು ತಪ್ಪು ಎಂತಲೂ ಶಾಸಕರು ಹೇಳುತ್ತಿಲ್ಲ. ಹಾಗಾದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಅಮಿತ್ ಶಾ ಮಾಡಿರುವುದು ತಪ್ಪು ಎನ್ನುವುದಾದರೆ ಶಾಸಕರು ಮಾತನಾಡಿರುವುದೂ ತಪ್ಪೇ. ಹಾಗಾಗಿ ಇವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಐಶ್ವರ್ಯಗೌಡ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ವಿಸ್ತೃತವಾಗುತ್ತಿದೆ. ಆಕೆಯ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗಗೊಳ್ಳಬೇಕಿದೆ. ಸುಮಾರು 100 ಕೋಟಿ ರು.ಗೂ ಹೆಚ್ಚು ಅವ್ಯವಹಾರ ನಡೆದಿದೆ. ಈ ಪ್ರಕರಣವನ್ನು ಇ.ಡಿ ಅಥವಾ ಸಿಬಿಐನಿಂದ ತನಿಖೆ ನಡೆಸುವಂತೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಹನುಮಂತು, ಕಾಂತರಾಜು, ಜಯರಾಂ, ಶ್ರೀಧರ್, ಸಿದ್ದಾಚಾರಿ ಇತರರಿದ್ದರು.