ಬಡವರಿಗೆ ನೆರವಾದ ಗ್ಯಾರಂಟಿ

| Published : Oct 16 2024, 12:31 AM IST

ಸಾರಾಂಶ

ಬಸ್ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಪ್ರಯಾಣಿಕರಿಗೆ ತಮ್ಮ ಸ್ಥಾನ ತಲುಪಲು, ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಶಾಲಾ-ಕಾಲೇಜು ತಲುಪಲು ಕಷ್ಟವಾಗಿದೆ. ಹಳೆಯ ಬಸ್ ಓಡಾಟ ನಿಲ್ಲಿಸಬೇಕು ಎಂದು ಅಳ್ನಾವರ ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಅಳ್ನಾವರ:

ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಬಡವರ ಪಾಲಿಗೆ ವರದಾನವಾಗಿದೆ. ಈ ಯೋಜನೆ ಎಲ್ಲರಿಗೂ ಸಮರ್ಪಕವಾಗಿ ತಲುಪಿಸುವ ಪ್ರಯತ್ನಕ್ಕೆ ಸಮಿತಿ ಶ್ರಮಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿನಾಯಕ ಕುರುಬರ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪಟ್ಟಣ ಪಂಚಾಯಿತಿ ಮತ್ತು ಸಮಿತಿ ಸದಸ್ಯರ ಅಹವಾಲು ಆಲಿಸಿದ ನಂತರ ಮಾತನಾಡಿದರು. ಈ ಸಭೆಯಲ್ಲಿ ದೊರೆತ ಸಲಹೆಗಳನ್ನು ಪೂರ್ಣಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರು ಮಾತನಾಡಿ, ಪಟ್ಟಣದಲ್ಲಿ ಬಸ್ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಪ್ರಯಾಣಿಕರಿಗೆ ತಮ್ಮ ಸ್ಥಾನ ತಲುಪಲು, ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಶಾಲಾ-ಕಾಲೇಜು ತಲುಪಲು ಕಷ್ಟವಾಗಿದೆ. ಹಳೆಯ ಬಸ್ ಓಡಾಟ ನಿಲ್ಲಿಸಬೇಕು. ಹೊಸ ತಾಲೂಕು ಕೇಂದ್ರವಾದ ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಮಿನಿ ಬಸ್ ಡಿಪೋ ಆಗಬೇಕು. ಹಳಿಯಾಳ, ಧಾರವಾಡ ಮಾರ್ಗದಲ್ಲಿ ಇನ್ನೂ ಹೆಚ್ಚು ಬಸ್ ಓಡಿಸಬೇಕು. ಕೋಗಿಲಗೇರಿಗೆ ಬಸ್ ಬೇಕು. ವಿದ್ಯುತ್ ಸರಬರಾಜು ಸಮಸ್ಯೆ ಬಗೆಹರಿಸಬೇಕು ಎಂಬ ಅಹವಾಲು ಸಲ್ಲಿಸಿದರು.

ಹಳಿಯಾಳ ಬಸ್ ಡಿಪೋ ಮ್ಯಾನೇಜರ್‌ ಆರ್.ಜಿ. ರೋಗಿ ಮಾತನಾಡಿ, ಸಮರ್ಪಕ ಸೇವೆ ನೀಡಲು ಇನ್ನೂ ೧೦ ಹೆಚ್ಚು ಬಸ್ ಬೇಕು ಎಂದರು. ಹೆಸ್ಕಾಂ ಶಾಖಾಧಿಕಾರಿ ಕೆ.ಎಲ್. ನಾಯಕ ಮಾತನಾಡಿ, ವಿದ್ಯುತ್ ಘಟಕದಿಂದ ಪಟ್ಟಣಕ್ಕೆ ಸಂಪರ್ಕ ನೀಡುವ ಜಾಲ ತೀರಾ ಹಳೆಯದಾಗಿದೆ. ಹೊಸದಾಗಿ ಭೂಗತ ವಿದ್ಯುತ್ ತಂತಿ ಅಳವಡಿಸಿದರೆ ಶಾಶ್ವತ ಪರಿಹಾರ ದೊರೆಯಲಿದೆ. ೩೦೦ ಕಂಬ ಬದಲಿಸಲು ₹ ೧೫ ಲಕ್ಷ ಅನುದಾನ ದೊರೆತಿದೆ. ಕಬ್ಬು ಬೆಳೆ ಸಾಗಾಣಿಕೆ ನಂತರ ಗ್ರಾಮಾಂತರ ಭಾಗದ ತಂತಿ ಸಮಸ್ಯೆ ಸರಿಪಡಿಸಲಾಗುವುದು ಎಂದರು.

ಆಹಾರ ಇಲಾಖೆಯ ಅಧಿಕಾರಿ ವಿನಾಯಕ ದಿಕ್ಷೀತ ಮಾತನಾಡಿ, ಪಟ್ಟಣದ ಎಂ.ಸಿ. ಪ್ಲಾಟ್ ಹಾಗೂ ಆಶ್ರಯ ಕಾಲನಿ ಜನರಿಗೆ ಸ್ಥಳೀಯವಾಗಿ ಪಡಿತರ ನೀಡುವ ಬೇಡಿಕೆ ಇದೆ. ಈ ಬಗ್ಗೆ ಸದ್ಯದಲ್ಲಿಯೆ ಪಡಿತರದಾರರ ಸಭೆ ಕರೆದು ಚರ್ಚಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಿಡಿಪಿಒ ಉಮಾ ಬಳ್ಳೊಳ್ಳಿ ಹಾಗೂ ಯುವನಿಧಿ ಯೋಜನೆ ಬಗ್ಗೆ ಮಹೇಶ ಮಾಳೋಡಕರ ಮಾಹಿತಿ ನೀಡಿದರು. ತಾಪಂ ಇಒ ಪ್ರಶಾಂತ ತುರ್ಕಾಣಿ, ಪಪಂ ಉಪಾಧ್ಯಕ್ಷ ಅಮೋಲ ಗುಂಜೀಕರ ಮಾತನಾಡಿದರು. ಸಮಿತಿ ಸದಸ್ಯರಾದ ಪುಷ್ಪಾವತಿ ಆನಂತಪುರ, ಸಲೀಂ ತಡಕೋಡ, ರಾಹುಲ್ ಶಿಂಧೆ, ರಾಜು ಪನ್ನಾಳಕರ, ಶಂಕರ ಕಲಾಜ, ಫಕ್ಕೀರಪ್ಪ ದಬಾಲಿ, ಕಲ್ಮೇಶ ಬಡಿಗೇರ, ಎಂ.ಕೆ. ಭಾಗವಾನ, ಸತೀಶ ಬಡಸ್ಕರ್, ಮಹಾಂತೇಶ ಬೋರಿಮನಿ ಹಾಗೂ ಪಪಂ ಸದಸ್ಯರಾದ ತಮೀಮ ತೇರಗಾಂವ, ಜೈಲಾನಿ ಸುದರ್ಜಿ, ರಮೇಶ ಕುನ್ನೂಕರಕರ, ಪರಶುರಾಮ ಬೇಕನೇಕರ ಇದ್ದರು.