ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಆಶಾ ದೀಪ. ವಿಶೇಷವಾಗಿ ಗ್ರಾಮೀಣ ಗೃಹಿಣಿಯರಿಗೆ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಬದುಕಿನ ಆರ್ಥಿಕ ಶಕ್ತಿ ಹೆಚ್ಚಿಸಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನ ಕೆಲವು ಭಾಗಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಸಾರಿಗೆ ಇಲಾಖೆ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಕುಟುಂಬದ ನಿರ್ವಹಣೆಯಲ್ಲಿ ಯಜಮಾನಿ ಪಾತ್ರ ಪ್ರಮುಖವಾಗಿದ್ದು, ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆ ಫಲಪ್ರದ ಎಂದರು.

ಗೃಹಲಕ್ಷ್ಮಿ ಯೋಜನೆಯಡಿ 2024-25ನೇ ಸಾಲಿನಲ್ಲಿ ತಾಲೂಕಿನಲ್ಲಿ ಯಜಮಾನಿ ಖಾತೆಗೆ ₹1,36,23,08,000 ಸಂದಾಯ ವಾಗಿದೆ. ಗೃಹಜ್ಯೋತಿ ಯೋಜನೆಯಡಿ 85728 ಮೀಟರ್‌ಗೆ ಉಚಿತ ವಿದ್ಯುತ್ ಪೂರೈಸಿ ಒಟ್ಟು ₹3826.05 ಲಕ್ಷ ಸರ್ಕಾರ ಮೆಸ್ಕಾಂಗೆ ಭರಿಸಿದೆ ಎಂದು ಹೇಳಿದರು.ಶಕ್ತಿ ಯೋಜನೆಯಡಿ ಚಿಕ್ಕಮಗಳೂರು-ಶೃಂಗೇರಿ ವಿಭಾಗದಲ್ಲಿ 10745481 ಮಹಿಳೆಯರು ಪ್ರಯಾಣಿಸಿ ಯೋಜನೆ ಸದ್ಬಳಕೆ ಮಾಡಿದ್ದಾರೆ. ಅನ್ಯ ಭಾಗದಡಿ ಹಣದ ಬದಲಿಗೆ ನೇರವಾಗಿ ಗ್ರಾಹಕ ರಿಗೆ ಅಕ್ಕಿ ವಿತರಿಸುತ್ತಿದ್ದು, ಮುಂದೆ ಇಂದಿರಾ ಕಿಟ್ ವಿತರಿಸುವ ಗುರಿಯಿದೆ. ಯುವನಿಧಿಯಡಿ ನಿರುದ್ಯೋಗಳಿಗೆ ₹3,98,53,500 ಲಕ್ಷ ನೀಡಿ ಜೀವನ ಭದ್ರತೆ ಒದಗಿಸಿದೆ ಎಂದರು.ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಗೃಹಲಕ್ಷ್ಮಿ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ನೀಡಬೇಕೆಂಬ ಸುಳ್ಳು ವದಂತಿ ಹಬ್ಬಿದೆ. ಈ ಹಿನ್ನೆಲೆ ಎಲ್ಲಾ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸುವ ಸಂಖ್ಯೆ ಹೆಚ್ಚಿದ್ದು, ಸರ್ಕಾರ ಇದುವರೆಗೂ ಈ ರೀತಿ ಆದೇಶ ಹೊರಡಿಸಿಲ್ಲ. ಸುಳ್ಳು ಮಾಹಿತಿಗೆ ಸಾರ್ವಜನಿಕರು ಕಿವಿ ಗೊಡಬಾರದು ಎಂದು ಹೇಳಿದರು.ತಾ.ಪಂ. ಇಒ ವಿಜಯ್‌ಕುಮಾರ್ ಮಾತನಾಡಿ ತಾಲೂಕು ಗ್ಯಾರಂಟಿ ಸಮಾವೇಶ ಹಮ್ಮಿಕೊಳ್ಳುವ ಗುರಿಯಿದ್ದು, ನಗರ ಅಥವಾ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಗ್ಯಾರಂಟಿ ಸದಸ್ಯರಾದ ಜಯಂತಿ, ನವರಾಜ್, ನಾಗರಾಜ್, ಕೃಷ್ಣ, ಧರ್ಮಯ್ಯ, ಗೌಸ್‌ಮೊಹಿಯುದ್ದೀನ್ ಉಪಸ್ಥಿತರಿದ್ದರು.