ಸೋಮವಾರಪೇಟೆ: ಗ್ಯಾರಂಟಿ ಯೋಜನೆ ಪ್ರಾಧಿಕಾರ ಸಮಿತಿ ಸಭೆ

| Published : May 01 2025, 12:48 AM IST

ಸಾರಾಂಶ

ತಾಲೂಕು ಗ್ಯಾರೆಂಟಿ ಯೋಜನೆ ಪ್ರಾಧಿಕಾರ ಸಮಿತಿ ಸಭೆ ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಜಿ.ಎಂ. ಕಾಂತರಾಜ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರ ಸಮಿತಿ ಸಭೆ ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಜಿ.ಎಂ.ಕಾಂತರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.ಸರ್ಕಾರದ ಎಲ್ಲ ಯೋಜನೆಗಳು ಎಲ್ಲ ಅರ್ಹರಿಗೆ ತಲುಪಬೇಕಾದರೆ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಕಿರಿಯ ಅಧಿಕಾರಿಗಳು ಅಥವಾ ಸಿಬ್ಬಂದಿ ಕಳುಹಿಸದೇ ತಾವೇ ಖುದ್ದಾಗಿ ಹಾಜರಾಗಬೇಕು. ತಿಂಗಳಿಗೆ ನಡೆಯುವ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲವೇ? ಎಂದು ಅಧ್ಯಕ್ಷರು ಇಲಾಖಾಧಿಕಾರಿಗಳನ್ನು ಪ್ರಶ್ನಿಸಿದರು.ಶಕ್ತಿ ಯೋಜನೆ ಜಿಲ್ಲೆಯಾದ್ಯಂತ ಉತ್ತಮ ಆದಾಯ ತರುತ್ತಿದ್ದು, ಇದೂವರೆಗೆ 1 ಕೋಟಿ 88 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿ, 45, 07, 78, 891 ಆದಾಯ ಇಲಾಖೆಗೆ ಬಂದಿದ್ದು, ಪ್ರತಿ ದಿನ ಜಿಲ್ಲೆಯಲ್ಲಿ 15, 631 ಮಹಿಳಾ ಪ್ರಯಾಣಿಕರು ಸಂಚರಿಸುತ್ತಿದ್ದು, 6 ಲಕ್ಷಕ್ಕೂ ಅಧಿಕ ಆದಾಯ ಬಂದಿದೆ ಎಂದು ಮಡಿಕೇರಿ ಘಟಕ ವ್ಯವಸ್ಥಾಪಕ ಆಲಿ ಸಭೆಗೆ ತಿಳಿಸಿದರು.ಶಕ್ತಿ ಯೋಜನೆ ಮೂಲಕ ಕುಶಾಲನಗರ, ಶನಿವಾರಸಂತೆ, ಗೋಪಾಲಪುರ, ನಿಡ್ತ, ಹಾರೆಹೊಸೂರು ಮಾರ್ಗವಾಗಿ ಸಂಚರಿಸುತ್ತಿರುವ ನೂತನ ಬಸ್ ಮಾರ್ಗ ಉತ್ತಮವಾಗಿ ಸಂಚರಿಸುತ್ತಿದೆ. ಆದರೆ, ಮಡಿಕೇರಿಯಿಂದ ಸೋಮವಾರಪೇಟೆಗೆ ಬೆಳಗ್ಗೆ 8 ಗಂಟೆಯ ನಂತರ ಸಂಚರಿಸುವ ಬಸ್‌ಗಳು ಸಮಯ ಪಾಲನೆ ಮಾಡುತ್ತಿಲ್ಲ. ಇದರಿಂದ ನೌಕರರು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಸಮಯದಲ್ಲಿ ಯಾರಿಗೂ ತೊಂದರೆಯಾಗದಂತೆ ಕ್ರಮ ವಹಿಸಿಕೊಳ್ಳುವಂತೆ ಡಿಪೋ ವ್ಯವಸ್ಥಾಪಕರಿಗೆ ಅಧ್ಯಕ್ಷ ಕಾಂತರಾಜ್ ಸೂಚನೆ ನೀಡಿದರು. ಘಟಕದ ಬಸ್‌ಗಳಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ಇದರ ಬಗ್ಗೆ ಪ್ರಯಾಣಿಕರು ದೂರು ನೀಡುತ್ತಿದ್ದಾರೆ ಎಂದು ಸಮಿತಿ ಸದಸ್ಯರಾದ ವೀರೇಂದ್ರಕುಮಾರ್ ಸಭೆಗೆ ತಿಳಿಸಿದರು.ಹಾಡಿಗಳಲ್ಲಿ ಕೆಲವರು ಇನ್ನೂ ಆಧಾರ್ ಕಾರ್ಡ್ ಹೊಂದಿಲ್ಲ. ಹಾಡಿ ಸುತ್ತಮುತ್ತ ಸಣ್ಣ ಮಕ್ಕಳಿಗೂ ಬ್ರಾಂಡಿ ಬಾಟಲ್‌ಗಳು ಸಿಗುತ್ತಿವೆ. ಅಬಕಾರಿ ಇಲಾಖೆಯವರು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿದೆ. ಕೆಲವು ಅಂಗಡಿಯವರು ಫಲಾನುಭವಿಗಳು ಹಾಗೂ ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿ ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಮಿತಿ ಸದಸ್ಯರಾದ ಸಂದೀಪ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾಂತರಾಜ್ ಹಾಡಿಗಳಲ್ಲಿ ಜಾಗೃತಿ ಅಭಿಯಾನದ ಅವಶ್ಯಕತೆಯಿದೆ ಎಂದರು.ಯುವನಿಧಿ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಅಧಿಕಾರಿಗಳು ಕಾಲೇಜುಗಳಿಗೆ ತೆರಳಿ ಮಾಹಿತಿ ಸಂಗ್ರಹ ಮಾಡಬೇಕಿತ್ತು. ಆದರೆ, ಇದೂವರೆಗೆ ನಿಧಾನವಾಗಿ ಸಾಗುತ್ತಿದೆ. ಜಾತ್ರೆ, ಕ್ರೀಡಾ ಕಾರ್ಯಕ್ರಮಗಳು ನಡೆಯುವ ಸಂದರ್ಭ ಅಲ್ಲಿ ಇದರ ಬಗ್ಗೆ ಪ್ರಚಾರ ಮಾಡಬೇಕಿದೆ ಎಂದು ಅಧಿಕಾರಿ ಮಂಜುನಾಥ್ ಅವರಿಗೆ ಅಧ್ಯಕ್ಷರು ಸೂಚಿಸಿದರು.ಗೃಹಲಕ್ಷ್ಮಿ ಯೋಜನೆಯಡಿ ಕೆಲವರ ಬಿಪಿಎಲ್ ಕಾರ್ಡ್ ರದ್ದಾಗಿರುವುದರಿಂದ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಅವರನ್ನು ಆದಾಯ ತೆರಿಗೆ ವ್ಯಾಪ್ತಿಯಿಂದ ತೆಗೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ಹಣ ಪಾವತಿಯಾಗಿದೆ. ಕೆಲವೊಂದು ತಾಂತ್ರಿಕ ತೊಂದರೆಗಳು ಇತ್ಯರ್ಥಗೊಂಡಿದೆ ಎಂದು ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು. ಗೃಹಜ್ಯೋತಿ ಯೋಜನೆ ಪ್ರಗತಿ ಕುರಿತು ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಸಭೆಗೆ ಮಾಹಿತಿ ನೀಡಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಗ್ಯಾರಂಟಿ ಯೋಜನೆ ಪ್ರಾಧಿಕಾರ ಸಮಿತಿ ಸದಸ್ಯರು ಹಾಜರಿದ್ದರು.