ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ತಾಲೂಕಿಗೆ ಒಂದು ವರ್ಷದಲ್ಲಿ ಸುಮಾರು 220 ಕೋಟಿ ರು. ನೀಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಕೊಪ್ಪದಲ್ಲಿ ಆಯೋಜಿಸಿದ್ದ ಜನತಾದರ್ಶನ ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿ ಯೋಜನೆ ಪಡೆಯಲು ಜನರು ಕಚೇರಿಗಳಿಗೆ ಅಲೆದಾಡುವಂತಿಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ ಎಂದರು.
ಸಮಸ್ಯೆ ಪರಿಹಾರವಾದ ನಂತರ ಯಾರು ಅಭಿನಂದನೆ ಸಲ್ಲಿಸುವುದಿಲ್ಲ. ಹೊಸ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಸಲ್ಲಿಕೆಯಾಗುತ್ತದೆ. ಸಾರ್ವಜನಿಕರ ಕೆಲಸ ಮಾಡುವುದು ಜನಪ್ರತಿನಿಧಿಗಳ ಕೆಲಸ ಎಂಬ ಮನೋಭಾವನೆ ಬೆಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.ಸರ್ಕಾರದ ಇಲ್ಲಿನ ಸಾರ್ವಜನಿಕರಿಗೆ ನೀಡುವ ಕಾರ್ಯಕ್ರಮಗಳಿಗೆ ಸಂಗ್ರಹಿಸುವ ಫಲಾನುಭವಿಗಳ ವಿವರಗಳ ಬಗ್ಗೆ ಬೇರೆ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿ ವಿವರ ಸಂಗ್ರಹಿಸಲು ರೂಪಿಸಿರುವ ತಂತ್ರಜ್ಞಾನ ಹಂಚಿಕೊಳ್ಳುವಂತೆ ಮನವಿ ಸಲ್ಲಿಸಿರುವುದು ಹರ್ಷದಾಯಕ ವಿಷಯವಾಗಿದೆ ಎಂದರು.
ಕೊಪ್ಪ ಹೋಬಳಿಯಲ್ಲಿ 2ನೇ ಬಾರಿಗೆ ಜನತಾದರ್ಶನ ಆಯೋಜಿಸಿದ್ದು, ಇಲ್ಲಿ ಸ್ವೀಕರಿಸುವ ಕುಂದುಕೊರತೆ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲಾಗುವುದು. ಕೊಪ್ಪದಲ್ಲಿ ಬೇಡಿಕೆ ಇರುವ ಪೊಲೀಸ್ ಠಾಣೆ ನಿರ್ಮಾಣ, ನಾಡ ಕಚೇರಿ ಹಾಗೂ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೇ, ಪಂಚಾಯ್ತಿ ಕಚೇರಿ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಳಾಗಿದೆ. ಇದಕ್ಕೆ ಸುಮಾರು 1 ಕೋಟಿ ವೆಚ್ಚವಾಗಲಿದೆ ಎಂದರು.ಸಹಕಾರ ಸಂಘದ ಮೂಲಕ 1 ಕೋಟಿ ರು. ಸಾಲ:
ಕೊಪ್ಪ ಹಾಗೂ ಸುತ್ತಮುತ್ತಲಿನ 16 ಹಳ್ಳಿಗಳ ಕೃಷಿ ಪತ್ತಿನ ಸಹಕಾರ ಸಂಘ ಹಲವು ಕಾರಣಗಳಿಂದ ಕೆಲಸ ಸ್ಥಗಿತಗೊಳಿಸಿತ್ತು. ಇದನ್ನು ಸರಿಪಡಿಸಿ ರೈತರು ಹಾಗೂ ಮಹಿಳೆಯರಿಗೆ ಆರ್ಥಿಕವಾಗಿ ಸದೃಢರಾಗಲು ಬಡ್ಡಿ ರಹಿತವಾಗಿ 1 ಕೋಟಿ ರು. ವರೆಗೆ ಸಾಲ ನೀಡಲಾಗಿದೆ. ಇದಕ್ಕೆ ನಬಾರ್ಡ್ ವಿಧಿಸುವ ಬಡ್ಡಿಯನ್ನು ಸರ್ಕಾರ ಭರಿಸುತ್ತಿದೆ ಎಂದರು.ಗ್ಯಾರಂಟಿ ಯೋಜನೆಗಳ ಜೊತೆಗೆ ಹೈನುಗಾರಿಕೆ ಕೃಷಿ ಸಂಬಂಧಿಸಿದ ಇಲಾಖೆಗಳ ಮೂಲಕ ಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಸುಮಾರು 2000 ಫಲಾನುಭವಿಗಳಿಗೆ 1.96 ಕೋಟಿ ರು. ಸಹಾಯಧನ ನೀಡಲಾಗಿದೆ. ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿದಂತೆ ಕಳೆದ ಒಂದೂವರೆ ತಿಂಗಳಿನಿಂದ ಕೊಪ್ಪ ವ್ಯಾಪ್ತಿಯಲ್ಲಿ 1275 ಅರ್ಜಿ ಸ್ವೀಕರಿಸಿ ಸುಮಾರು 443 ಪೌತಿ ಖಾತೆ ಮಾಡಿಕೊಡಲಾಗಿದೆ. ಉಳಿದ ರೈತರು ಸಹ ಆಸಕ್ತಿ ತೋರಿಸಿ ಮುಂದೆ ಬರಬೇಕು. ದಾಖಲೆ, ಆರ್.ಟಿ.ಸಿಗಳು ಸರಿಯಿದ್ದರೆ ಮಾತ್ರ ಬ್ಯಾಂಕ್ ಅಥವಾ ಸೊಸೈಟಿಗಳಿಂದ ಸಾಲ ಪಡೆಯಲು ಸಾಧ್ಯ ಎಂದರು.
ರೈತರ ಭೂಮಿ ಹಾಗೂ ಇನ್ನಿತರೆ ದಾಖಲೆಗಳನ್ನು ಕಂದಾಯ ಇಲಾಖೆ ಡಿಜಟಲ್ ಮಾಡುವ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಈಗಾಗಲೇ 36 ಲಕ್ಷ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗಿದೆ. ಸುಮಾರು 67 ಲಕ್ಷ ಪೌತಿ ಖಾತೆ, ಹಲವು ವರ್ಷಗಳಿಂದ ಬಾಕಿ ಇದ್ದ ಕೋರ್ಟ್ ಪ್ರಕರಣಗಳನ್ನು ಒಂದು ವರ್ಷದಲ್ಲಿ 16,000 ವಿಲೇವಾರಿ ಮಾಡಲಾಗಿದೆ. 18 ಲಕ್ಷ ಆರ್‌ಟಿಸಿಗಳಿಗೆ ಆಧಾರ್ ಜೋಡಣೆ ಕೆಲಸ ಮಾಡಲಾಗಿದೆ ಎಂದರು.ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗಿದೆ. ಬೆಳಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲು ಪ್ರಾರಂಭಿಸಲಾಗಿದೆ. ರೈತರು ಬಿತ್ತನೆ ಕೆಲಸ ಪ್ರಾರಂಭಿಸಬೇಕು. ಕೃಷಿ ವಿಶ್ವವಿದ್ಯಾಲಯವನ್ನು ವಿ.ಸಿ.ಫಾರ್ಮ್ ನಲ್ಲಿ ಪ್ರಾರಂಭಿಸಲಾಗುವುದು. ಇಲ್ಲಿ ಕೃಷಿ ತಜ್ಞರು ರೈತರಿಗೆ ಹಲವು ಉಪಯುಕ್ತ ಮಾಹಿತಿ ನೀಡಲಿದ್ದಾರೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜನರ ಸಮಸ್ಯೆಗಳನ್ನು ಪರಿಹರಿಸಲು ಜನತಾದರ್ಶನ ನಡೆಯುತ್ತಿದೆ. ಈ ಹಿಂದೆ ಸ್ವೀಕೃತವಾದ ಕುಂದುಕೊರತೆ ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ. ಕಂದಾಯ ಇಲಾಖೆ ಚುರುಕಾಗಿ ಕೆಲಸ ನಿರ್ವಹಿಸುತ್ತಿದೆ. ಸ್ವಯಂ ಪ್ರೇರಿತವಾಗಿ ಪೌತಿ ಖಾತೆ ಆಂದೋಲನ, ಪೋಡಿ ದುರಸ್ತಿ, ಆಧಾರ ಸೀಡಿಂಗ್ ಕೆಲಸಗಳನ್ನು ಮನೆ ಮನೆಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸಿಕೊಂಡು ಮಾಡಿಕೊಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸಿಲ್ದಾರ್ ಡಾ.ಸ್ಮಿತಾ ರಾಮು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ ಸ್ವಾಮಿ, ಮಾಜಿ ಸಚಿವ ಕೆ.ಬಿ.ಚಂದ್ರಶೇಖರ್, ತಾಪಂ ಇಒ ರಾಮಲಿಂಗಯ್ಯ, ಕೊಪ್ಪ ಗ್ರಾಪಂ ಅಧ್ಯಕ್ಷ ರುದ್ರೇಶ, ಕಾಂಗ್ರೆಸ್ ಮುಖಂಡರಾದ ಚಿಕ್ಕೋನಹಳ್ಳಿ ತಮ್ಮೇಗೌಡ, ಕೆ.ಎನ್.ದಿವಾಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.