ರೋಣ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ಇದ್ದು, ಇವುಗಳು ಸಾಕಷ್ಟು ಅನುಕೂಲವಾಗಿದ್ದು, ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಲು ನೆರವಾಗಿವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಗುರುವಾರ ತಾಲೂಕಿನ ಮುಗಳಿ ಗ್ರಾಮದದಲ್ಲಿ ತಾಪಂ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ 2025- 26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಜರುಗಿದ ಸಿಸಿ ರಸ್ತೆ, ಕಾಳಿಕಾದೇವಿ ದೆವಸ್ಥಾನ ಮತ್ತು ದುರ್ಗಾದೇವಿ ದೇವಸ್ಥಾನ ಸಮುದಾಯ ಭವನ ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿ, ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷ ₹53 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದ್ದು, ಇದರಿಂದ ರಾಜ್ಯದಲ್ಲಿ 1.26 ಲಕ್ಷ ಕುಟುಂಬಗಳು ಆರ್ಥಕವಾಗಿ ಪ್ರಗತಿ ಹೊಂದಿದೆ. ಗ್ಯಾರಂಟಿ ಜತೆಗೆ ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಶಾಸನವನ್ನು ಸಕಾಲಕ್ಕೆ ವಿತರಿಸಲಾಗುತ್ತಿದೆ. ಗ್ಯಾರಂಟಿ ಯೋಜನೆ ಮತ್ತು ಸರ್ಕಾರದ ವಿವಿಧ ಯೋಜನೆಗಳು ಜನರಿಗೆ ತಲುಪುವಲ್ಲಿ ಅಧಿಕಾರಿಗಳು ಅಭಿನಂದನಾರ್ಹವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಲಜೀವನ ಯೋಜನೆ ಇನ್ನು ಕೆಲ ಹಳ್ಳಿಗಳಲ್ಲಿ ಯಶಸ್ವಿಯಾಗಿಲ್ಲ. ಜೆಜೆಎಂ ಯೋಜನೆಯಿಂದ ಸರಿಯಾಗಿ ನೀರು ತಲುಪದ ಹಳ್ಳಿಗಳನ್ನು ಪೈಲಟ್ ಯೋಜನೆಯಡಿ ಸಮರ್ಪಕ ನೀರು ಪೂರೈಸಲಾಗುವುದು. ಮುಗಳಿ ಗ್ರಾಮದ ಪ್ರೌಢಶಾಲೆಗೆ ನೀರು ಪೂರೈಕೆಗೆ ಪೈಪ್ ಲೈನ್ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ, ಅಭಿಷೇಕ ನವಲಗುಂದ, ತಾಪಂ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ, ಈರಣ್ಣ ಯಾಳಗಿ, ತಾಪಂ ಇಒ ಚಂದ್ರಶೇಖರ ಕಂದಕೂರ, ಅಕ್ಷರ ದಾಸೋಹ ಅಧಿಕಾರಿ ಆರದ ಎಲ್. ನಾಯ್ಕರ, ಪಿಡಿಒ ಜ್ಯೋತಿ ಗೋವಿನಕೊಪ್ಪ, ಸಿ.ಎಸ್. ನೀಲಗುಂದ, ಗೀತಾ ಆಲೂರ, ಎಂ.ಎಸ್. ದೇಶಾಯಿ, ಶರಣಪ್ಪ ಮಲ್ಲಾಪೂರ, ಉದಯಕುಮಾರ ದೇಶಾಯಿ, ವಿ.ಎಂ. ದೇಶಾಯಿ, ಯಲ್ಲಪ್ಪ ಕುರಿ, ಬಸವರಾಜ ಉಸಲಕೊಪ್ಪ, ವಿಜಯಕುಮಾರ ತೋಟರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.