ಗ್ಯಾರಂಟಿ ಯೋಜನೆಯಿಂದ ಬಡವರ್ಗಕ್ಕೆ ಅನುಕೂಲ: ಸಂಗಮೇಶ ಗುತ್ತಿ

| Published : Dec 21 2024, 01:16 AM IST

ಗ್ಯಾರಂಟಿ ಯೋಜನೆಯಿಂದ ಬಡವರ್ಗಕ್ಕೆ ಅನುಕೂಲ: ಸಂಗಮೇಶ ಗುತ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.

ಕುಕನೂರು: ಸರ್ಕಾರದ ಮಹಾತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ಜತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ತರವಾದದ್ದು. ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದು ಕುಕನೂರು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಶೇಕಡಾ 100% ಜನಸಾಮಾನ್ಯರಿಗೆ ತಲುಪಿಸುವಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಕುಕನೂರ ಮತ್ತು ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಂದ ಬಡವರ್ಗಕ್ಕೆ ಅನುಕೂಲ ಆಗಿದೆ. ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿವೆಯೇ ಎಂದು ಅಧಿಕಾರಿಗಳು ಗಮನ ಹರಿಸಬೇಕು. ಯೋಜನೆ ಯಾರಿಗಾದರೂ ತಲುಪದಿದ್ದರೆ ಕೂಡಲೇ ಅವರಿಗೆ ಯೋಜನೆಯ ಸದುಪಯೋಗ ಆಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಯಲಬುರ್ಗಾ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ ಮಾತನಾಡಿ, ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಯೋಜನೆ ಇನ್ನೂ ಯಾರಿಗೆ ತಲುಪಿಲ್ಲ, ಯಾಕೆ ತಲುಪಿಲ್ಲ ಎಂಬ ಮಾಹಿತಿ ಪಡೆಯಿರಿ. ನಂತರ ಯೋಜನೆ ಫಲಾನುಭವಿಗೆ ತಲುಪುವಂತೆ ಮಾಡಿ. ಸಮಸ್ಯೆಗಳನ್ನು ಪರಿಹರಿಸಿ ಜನಸಾಮಾನ್ಯರಿಗೆ ಯೋಜನೆಗಳನ್ನು ತಲುಪಿಸುವುದು ಅವುಗಳ ಅನುಷ್ಠಾನ ಮಾಡುತ್ತಿರುವ ಸರ್ಕಾರದ ಇಲಾಖೆಗಳ ಪಾತ್ರ ದೊಡ್ಡದು ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಖಾಸೀಂ ಸಾಬ್ ತಳಕಲ್ ಮಾತನಾಡಿ, ಗ್ಯಾರಂಟಿ ಯೋಜನೆ ತಲುಪುವಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.

ತಾಪಂ ಇಒ ಸಂತೋಷ ಬಿರಾದಾರ ಮಾತನಾಡಿ, ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗು ಜನಸಾಮಾನ್ಯರಿಗೆ ಯೋಜನೆ ತಲುಪುವಂತೆ ಪ್ರತಿ ಹಂತದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನದಲ್ಲಿ ಹಲವಾರು ಫಲಾನುಭವಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು. ಅದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಉತ್ತರಿಸಿ, ಒಟ್ಟು ತಾಲೂಕಿನಲ್ಲಿ 59783 ಕುಟುಂಬಗಳು ನೋಂದಣಿಯಾಗಿದ್ದು, 328 ಫಲಾನುಭವಿಗಳಿಗೆ ಮಾತ್ರ ಸಮಸ್ಯೆ ಆಗಿದೆ. ಅದರಲ್ಲಿ 39 ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದಾರೆ, 42 ಜಿಎಸ್‌ಟಿ ಪಾವತಿದಾರರು, 61 ಫಲಾನುಭವಿಗಳಿಗೆ ಬ್ಯಾಂಕ್ ಅಕೌಂಟ್ ಸಮಸ್ಯೆ ಇದೆ. ಸುಮಾರು 186 ಫಲಾನುಭವಿಗಳ ಸಮಸ್ಯೆ ಬಗೆ ಹರಿದಿದೆ ಎಂದರು.

ನಂತರ ಅಧ್ಯಕ್ಷರು ಮಾತನಾಡಿ, ಆಧ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಬೇಕು, ಯೋಜನೆಯ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಅಂಗನವಾಡಿಗಳಲ್ಲಿ ಹಾಕಲು ಸೂಚಿಸಿದರು. ಅನ್ನಭಾಗ್ಯ ಯೋಜನೆಯ ಬಗ್ಗೆ ಚರ್ಚಿಸಿದಾಗ ಅವಳಿ ತಾಲೂಕಿನಲ್ಲಿ 53849 ಕಾರ್ಡ್‌ಗಳು ಇದ್ದು 2,08,804 ಫಲಾನುಭವಿಗಳು ಇದ್ದು ಪ್ರತೀ ಸದಸ್ಯರಿಗೆ 5 ಕೆಜಿ ಅಕ್ಕಿ 5 ಕೆಜಿ ಅಕ್ಕಿಯ ಮೊತ್ತ ₹172 ಅನ್ನು ಕುಟುಂಬದ ಮುಖ್ಯಸ್ಥರಿಗೆ ಪಾವತಿಸಲಾಗುತ್ತಿದೆ. 918 ಪಡಿತರ ಜೀಟಿಗಳ ಸಮಸ್ಯೆ ಇದೆ. ಅದರಲ್ಲಿ 52 ಪಡಿತರ ಚೀಟಿ ಮುಖ್ಯಸ್ಥರು ಮರಣ ಹೊಂದಿದ್ದಾರೆ. 638 ಪ.ಚೀ ಆಧಾರ್‌ ನಂಬರ್ ಸಮಸ್ಯೆ, 228 ಎನ್.ಪಿ.ಸಿ.ಐ ಸಮಸ್ಯೆ ಇದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ಗೃಹ ಜ್ಯೋತಿ ಯೋಜನೆಯನ್ನು ನಿಯಮಾನುಸಾರ ಅನುಷ್ಠಾನ ಮಾಡಲಾಗುತ್ತಿದೆ ಎಂದು ಕೆಪಿ.ಟಿ.ಸಿಎಲ್ ಅಧಿಕಾರಿಗಳು ಸಭೆಗೆ ತಿಳಿಸಿದರು. ಶಕ್ತಿ ಯೋಜನೆಯಲ್ಲಿ ಕುಕನೂರ 64.62 ಲಕ್ಷ ಮಹಿಳಾ ಫಲಾನುಭವಿಗಳು ಸಂಚಾರ ಮಾಡಿದ್ದಾರೆ ಎಂದು ಕೆ.ಕೆ.ಆರ್.ಟಿ.ಸಿ. ಅಧಿಕಾರಿಗಳು ತಿಳಿಸಿದರು.

ಯುವ ನಿಧಿಯಲ್ಲಿ ಈ 2023ರ ನಂತರ ಪದವಿ ಮುಕ್ತಾಯವಾದ 3011 ಯುವಕರು ನೋಂದಣಿಯಾಗಿದ್ದು ನಿಯಮಾನುಸಾರ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪಾವತಿ ಮಾಡಲಾಗುತ್ತಿದೆ ಎಂದು ಕೌಶಲ್ಯ ಯುವ ನಿಧಿ ಅಧಿಕಾರಿಗಳು ಸಭೆಗೆ ತಿಳಿಸದರು.

ಸಭೆಯಲ್ಲಿ ತಾಲೂಕು 5 ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು, ಅನುಷ್ಠಾನ ಇಲಾಖೆ ಅಧಿಕಾರಿಗಳು ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.