ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲ: ಗೀತಾ ಶಿವರಾಜಕುಮಾರ್

| Published : Apr 29 2024, 01:33 AM IST

ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲ: ಗೀತಾ ಶಿವರಾಜಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸಿದ್ಧಗಂಗಾ ಮಠಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಭೇಟಿ ನೀಡಿ, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಸಿದ್ಧಗಂಗಾ ಮಠಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಭೇಟಿ ನೀಡಿ, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಹಿರಿಯ ಶ್ರೀಗಳ ಗದ್ದುಗೆಗೆ ನಟ ಶಿವರಾಜಕುಮಾರ್ ದಂಪತಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಶ್ರೀಗಳ ಧ್ಯಾನ ಮಂದಿರಕ್ಕೂ ಭೇಟಿ ನೀಡಿ ಕೊಂಚ ಸಮಯ ಧ್ಯಾನದಲ್ಲಿ ಮಗ್ನರಾದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ಸಿದ್ಧಗಂಗಾ ಮಠಕ್ಕೆ ಶ್ರೀಗಳ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದೇನೆ. ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದಿದ್ದೇವೆ. ಈ ಹಿಂದೆ ನಮ್ಮ ಮಾವ ಹಾಗೂ ನಮ್ಮ ತಂದೆ ಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇಲ್ಲಿಗೆ ಅನೇಕ ಭಾರಿ ಭೇಟಿ ನೀಡಿದ್ದೇನೆ. ಅದೆಲ್ಲವೂ ಈಗ ನೆನಪಾಗುತ್ತಿದೆ ಎಂದರು.ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಕಾರ್ಯ ಉತ್ತಮವಾಗಿ ಸಾಗುತ್ತಿದೆ. ಜಿಲ್ಲೆಯ ಜನರು ನನ್ನ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಅದೇ ರೀತಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದವರಿಗೆ ವರದಾನವಾಗಿವೆ. ಇದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶಯ ಈಡೇರಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದೇ ರೀತಿ, ಶಿವಮೊಗ್ಗದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳು ಸಾಕಷ್ಟಿವೆ. ಮುಳುಗಡೆ ಸಂತ್ರಸ್ತರ ಸಮಸ್ಯೆ, ಬಗರ್ ಹುಕುಂ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ, ರಸ್ತೆ-ಚರಂಡಿ ಹೀಗೆ ಹತ್ತು ಹಲವು ಪ್ರಮುಖ ಸಮಸ್ಯೆಗಳು ನೆನೆಗುದಿಗೆ ಬಿದ್ದಿವೆ. ಇವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ನಟ ಶಿವರಾಜಕುಮಾರ್‌ ಮಾತನಾಡಿ, ಪತ್ನಿ ಗೀತಾ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪತಿಯಾಗಿ ಅರ್ಧಾಂಗಿಗೆ ಬೆಂಬಲ ಸೂಚಿಸುವುದು ನನ್ನ ಜವಾಬ್ದಾರಿ. ಶಿವಮೊಗ್ಗ ಕ್ಷೇತ್ರದಲ್ಲಿ ಮತದಾರರು ಗೀತಾ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಚುನಾವಣೆಯ ಫಲಿತಾಂಶ ಗೀತಾ ಪರವಾಗಿರಲಿದೆ ಎಂಬ ನಂಬಿಕೆ ನನಗಿದೆ ಎಂದರು.ಕಳೆದ ಬಾರಿಗಿಂತ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಗೀತಾ ಪರ ಒಲವು ಕಂಡು ಬರುತ್ತಿದೆ. ದೇವರ ಆಶೀರ್ವಾದ ನಮ್ಮ ಮೇಲಿದೆ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ತಿಳಿಸಿದರು. ನಮ್ಮ ತಂದೆ ಮಠದ ಬಗ್ಗೆ ಅಪಾರ ಗೌರವ ಹೊಂದಿದ್ದರು. ಇಲ್ಲಿ ತಂದೆಯವರ ಅನೇಕ ಸಿನಿಮಾಗಳನ್ನು ಚಿತ್ರಿಸಲಾಗಿದೆ. ಇತ್ತೀಚೆಗೆ ನಾನು ನಟಿಸಿದ ಟಗರು ಸಿನಿಮಾ ಕೂಡ ಇಲ್ಲಿಯೇ ಚಿತ್ರಿಸಲಾಗಿತ್ತು. ಆದ್ದರಿಂದ ಇಲ್ಲಿನ ಪರಿಸರ ನನಗೆ ತುಂಬಾ ಇಷ್ಟ ಎಂದರು. ಕೆಪಿಸಿಸಿ ರಾಜ್ಯ ಸಂಯೋಜಕ ಸುಶಾಂತ್, ರಾಧಾ ವಿಜಯ್, ಕೆಪಿಸಿಸಿ ಒಬಿಸಿ ರಾಜ್ಯ ಉಪಾಧ್ಯಕ್ಷ ಡಾ. ವಿಜಯರಾಘವೇಂದ್ರ, ಅನಿಲ್‌ಕುಮಾರ್ ತಡಕಲ್, ಕಿರುತೆರೆ ನಟ ದಯಾನಂದ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

Related Stories
Top Stories