ಸಾರಾಂಶ
ಕನಕಪುರ: ಹೆಣ್ಣು ಪ್ರಗತಿ ಹೊಂದಿದರೆ ಒಂದು ಕುಟುಂಬವೇ ಪ್ರಗತಿಯಾಗುತ್ತದೆ. ಆದ ಕಾರಣ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಆರ್‌ಇಎಸ್ ಮೈದಾನದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಕುಟುಂಬದ ಅಭಿವೃದ್ಧಿ, ಆರೋಗ್ಯ ಕಾಪಾಡಲು ಪ್ರಮುಖ ಪಾತ್ರ ವಹಿಸುವ ತಾಯಂದಿರಿಗೆ ಶಕ್ತಿ ತುಂಬುವ ಉದ್ದೇಶದಿಂದಲೇ ಸರ್ಕಾರ ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮೈತ್ರಿ ಸರ್ಕಾರ ನಮ್ಮ ಗೃಹಲಕ್ಷ್ಮಿ ಯೋಜನೆಯನ್ನು ನಕಲು ಮಾಡಿ ಮಾಝಿ ಲಡಕಿ ಬಹಿನ್ ಯೋಜನಾ ಎಂದು ಹೆಸರಿಟ್ಟು 1,500 ರು. ಕೊಟ್ಟಿದ್ದರು, ನಾವು ಮಹಾಲಕ್ಷ್ಮಿ ಎನ್ನುವ ಹೆಸರಿಟ್ಟು 3 ಸಾವಿರ ಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ ಅಲ್ಲಿನ ಬಿಜೆಪಿ ಮೈತ್ರಿ ಸರ್ಕಾರ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಹಣ ನೀಡಿದ ಪರಿಣಾಮ ನಮಗಿಂತ ಅವರಿಗೆ ಹೆಚ್ಚು ಮತಗಳು ಬಂದಿರಬಹುದು ಎಂದು ಹೇಳಿದರು.ಸಾಮಾನ್ಯ ಸ್ತ್ರೀಯರು ಅಧಿಕಾರ ಗದ್ದುಗೆ ಏರಬೇಕು:ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಮುಖಂಡರು ತಮ್ಮ ಹೆಂಡತಿ, ತಂಗಿ, ಅಕ್ಕ ಅಥವಾ ಸಂಬಂಧಿಕರನ್ನು ನಿಲ್ಲಿಸುತ್ತಿದ್ದಾರೆ. ಅಧಿಕಾರದ ಗದ್ದುಗೆ ಏರಲು ಸಾಮಾನ್ಯ ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಗೆ ಒಪ್ಪಿಗೆ ದೊರೆತಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಶೇ. 33ರಷ್ಟು ಮೀಸಲಾತಿ ಮಹಿಳೆಯರಿಗೆ ನೀಡಬಹುದು. ಅದಕ್ಕಾಗಿ ಸಾಮಾನ್ಯ ಮಹಿಳೆಯರು ಈಗಿನಿಂದಲೇ ತಮ್ಮಲ್ಲಿರುವ ನಾಯಕತ್ವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಸ್ತ್ರೀಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೆ ಕಾಂಗ್ರೆಸ್:ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಾನು ಸಹಕಾರ ಸಚಿವನಾಗಿದ್ದ ಅವಧಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೆ ನಾವು. ಸಹಕಾರ ಇಲಾಖೆಯಡಿ ಬರುವ ಡಿಸಿಸಿ ಬ್ಯಾಂಕ್ ನೇತೃತ್ವದಲ್ಲಿ ಸ್ವಸಹಾಯ ಗುಂಪುಗಳಿದ್ದವು. ಇವುಗಳನ್ನೇ ಸ್ತ್ರೀಶಕ್ತಿ ಸಂಘಗಳೆಂದು ಪರಿವರ್ತಿಸಿ, ಸಚಿವರಾಗಿದ್ದ ಮೋಟಮ್ಮ ಅವರಿಗೆ ನೇತೃತ್ವದಲ್ಲಿ ಸ್ತ್ರೀಶಕ್ತಿ ಸಂಘಗಳನ್ನು ಮಾಡಿದೆವು. ಆಗಲೂ ಸ್ತ್ರೀಶಕ್ತಿ ಸಂಘಗಳ ಪರಿಣಾಮ ಹೆಣ್ಣು ಮಕ್ಕಳು ಮನೆಯಲ್ಲಿ ಇರುತ್ತಿಲ್ಲ ಎಂದು ಅನೇಕ ನಾಯಕರು ನನಗೆ ಬೈದರು. ಮನೆಯಲ್ಲಿ ಹೆಣ್ಣಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕು ಎಂದು ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತೆ. ಹೆಣ್ಣು ಕುಟುಂಬದ ಕಣ್ಣು. ಕುಟುಂಬದಲ್ಲಿ ಹೆಣ್ಣಿನ ಮನಸ್ಥಿತಿ, ಪರಿಸ್ಥಿತಿ ಆರೋಗ್ಯವಾಗಿದ್ದರೆ, ನಾವೆಲ್ಲರೂ ಆರೋಗ್ಯವಾಗಿದ್ದಂತೆ ಪುರುಷರೂ ಇದಕ್ಕೆ ತಮ್ಮ ಸಹಕಾರ ಹಾಗೂ ಕೊಡುಗೆ ಕೊಡುವಂತೆ ಮನವಿ ಮಾಡಿದರು.
ಜಮೀನು ಮಾರಲು ಬಿಡಬೇಡಿ:ಯಾವುದೇ ಕಾರಣಕ್ಕೂ ತಮ್ಮ ಪಾಲಿನ ಭೂಮಿ ಮಾರಾಟ ಮಾಡದಂತೆ ಮನೆಯ ಪುರುಷರಿಗೆ ಮಹಿಳೆಯರು ಬುದ್ಧಿಮಾತು ಹೇಳಬೇಕು. ಏಕೆಂದರೆ ಭೂಮಿಯ ಬೆಲೆ ಹೆಚ್ಚಾಗಿದೆ. ನಾನು ಮೊದಲ ಬಾರಿಗೆ ಇಲ್ಲಿ ಚುನಾವಣೆ ಗೆ ನಿಂತಾಗ ಒಂದು ಎಕರೆಗೆ ಎರಡರಿಂದ ಮೂರು ಲಕ್ಷ ಮಾತ್ರ ಇತ್ತು. ಈಗ 50 ಲಕ್ಷ ಬೆಲೆ ಬಾಳುತ್ತದೆ. ಇದನ್ನು ರಾಮನಗರ ಜಿಲ್ಲೆ ಎಂದು ಕರೆಯಬಹುದು. ಆದರೆ ಮೂಲತಃ ನಾವೆಲ್ಲರೂ ಬೆಂಗಳೂರು ಜಿಲ್ಲೆಗೆ ಸೇರಿದವರು. ಕನಕಪುರ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ಭೂಮಿ ಕಳೆದುಕೊಂಡರೆ ನಿಮ್ಮ ಜೇಬಿಗೆ ದುಡ್ಡನ್ನು ನಾನು ಹಾಕಲು ಆಗುವುದಿಲ್ಲ. ಯಾವುದೇ ಕಾರಣಕ್ಕೂ ಒಂದು ಕುಂಟೆ ಜಮೀನನ್ನು ಕಳೆದುಕೊಳ್ಳಬೇಡಿ ಎಂದರು.
ಕನಕಪುರಕ್ಕೆ ಹೊಸ ರೂಪ:ನಾವಿನ್ನೂ ಅಭಿವೃದ್ಧಿಯ ಮೈಲಿಗಲ್ಲನ್ನು ಸಾಧಿಸಬೇಕಾಗಿದ್ದು ಕನಕಪುರಕ್ಕೆ ಹೊಸ ರೂಪ ನೀಡಬೇಕಾಗಿದೆ. 2025ಕ್ಕೆ ಕನಕಪುರದ ಅಭಿವೃದ್ಧಿಗೆ ಹೊಸ ಕಾರ್ಯಕ್ರಮಗಳನ್ನು ನೀಡಲಾಗುವುದು. ಸರ್ಕಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರುವ ಕಾರಣ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ತಾಲೂಕು, ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ನಿಮ್ಮೆಲ್ಲರ ಅಹವಾಲುಗಳನ್ನು ಆಲಿಸುವುದಾಗಿ ಭರವಸೆ ನೀಡಿದರು.
ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ:ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ನಂಬಿಕೆ ಹೆಚ್ಚು. ಪಕ್ಷ ಅಧಿಕಾರಕ್ಕೆ ಬಂದರೆ ಇವರಿಗೆ ಸಹಾಯ ಮಾಡಬೇಕು ಎಂಬುದು ನನ್ನ ಅಭಿಲಾಷೆಯಾಗಿತ್ತು. ನಾನು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದಾಗ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಲಾಯಿತು. ಅದೇ ರೀತಿ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ.
ಶ್ರೀಕಂಠುಗೆ ಹುಟ್ಟುಹಬ್ಬದ ಶುಭ ಕೋರಿದ ಡಿಕೆಶಿ:ಕಾರ್ಯಕ್ರಮದಲ್ಲಿ 65 ವಸಂತಗಳನ್ನು ಪೂರೈಸಿರುವ ಕನಕಪುರ ರೂರಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಶ್ರೀಕಂಠು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಸಮಾವೇಶದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ದರ್ಶನ್ ಧ್ರುವ ನಾರಾಯಣ್, ಎಂಎಲ್ಸಿ ಎಸ್ ರವಿ, ಕನಕಾಂಬರಿ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷ ಶ್ರೀಕಂಠು, ಮುಖಂಡ ಲಕ್ಷ್ಮಣ್ ಸೇರಿದಂತೆ ಸ್ತ್ರೀ ಶಕ್ತಿ ಸಂಘದ ನೂರಾರು ಮಹಿಳೆಯರು ಭಾಗವಹಿಸಿದ್ದರು.ಕೆ ಕೆ ಪಿ ಸುದ್ದಿ 02:
ಕನಕಪುರದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.