ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಆಡಳಿತಾರೂಢ ಸರ್ಕಾರವು ಪಂಚ ಗ್ಯಾರಂಟೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದೆ ಎಂದು ಶಿವಮೊಗ್ಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ಮಧು ಹೇಳಿದ್ದಾರೆ.

- ಜನಜಾಗೃತಿ ಕಾರ್ಯಕ್ರಮದಲ್ಲಿ ಎಚ್.ಎಂ.ಮಧು ಅಭಿಮತ । ಸಾಕ್ಷ್ಯ ಚಿತ್ರಪ್ರದರ್ಶನ, ಸಂಗೀತ-ಬೀದಿನಾಟಕ ಪ್ರದರ್ಶನ

- - -

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಆಡಳಿತಾರೂಢ ಸರ್ಕಾರವು ಪಂಚ ಗ್ಯಾರಂಟೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದೆ ಎಂದು ಶಿವಮೊಗ್ಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ಮಧು ಹೇಳಿದರು.

ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗ್ರಾಮ ಸಂಪರ್ಕ ಯೋಜನೆಯಡಿ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಾಕ್ಷ್ಯ ಚಿತ್ರಪ್ರದರ್ಶನ, ಸಂಗೀತ ಮತ್ತು ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಶೋಷಿತರನ್ನು ಮಾತ್ರವಲ್ಲದೇ ಸಮಾಜದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿದ ಅತ್ಯಂತ ಯಶಸ್ವಿ ಗ್ಯಾರಂಟಿ ಯೋಜನೆಗಳಾಗಿವೆ. ಜಗತ್ತಿನಾದ್ಯಂತ ಜನಪ್ರಿಯಗೊಂಡಿವೆ. ಮಾತ್ರವಲ್ಲ, ದೇಶದ ಇತರೆ ರಾಜ್ಯಗಳ ಜನರು ಅವುಗಳನ್ನು ಅನುಸರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಒಂದಿಲ್ಲೊಂದು ರೀತಿಯ ಬದಲಾವಣೆ ಸುಧಾರಣೆ ತಂದಿವೆ. ಆರ್ಥಿಕವಾಗಿ ಸಂಚಲನ ಉಂಟುಮಾಡಿದೆ. ಆರ್ಥಿಕ ದುರ್ಬಲ ವರ್ಗದವರ ಜೀವನಮಟ್ಟ ಸುಧಾರಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದು ಹೇಳಿದರು.

ಜನರಲ್ಲಿ ಮಂದಹಾಸ:

ಕುಟುಂಬದ ಯಜಮಾನಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಆಕೆಯ ಬ್ಯಾಂಕ್‌ ಖಾತೆಗೆ ನೇರವಾಗಿ ₹2000 ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆ, ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಎನ್ನುವಂತೆ ಮಹಿಳೆಯರಿಗಾಗಿಯೇ ರೂಪಿಸಿದ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ, ಹಸಿದ ಒಡಲಿಗೆ ಸಂತೃಪ್ತಿಯ ಊಟ ಬಡಿಸುವ ಅನ್ನಭಾಗ್ಯ ಯೋಜನೆ, ವಿದ್ಯುತ್‌ ಬಳಸುವ ಪ್ರತಿ ಮನೆಗೆ ಉಚಿತ ವಿದ್ಯುತ್‌ ಒದಗಿಸಿದ ಗೃಹಜ್ಯೋತಿ ಯೋಜನೆ ಹಾಗೂ ವಿದ್ಯಾವಂತರಾಗಿಯೂ ಉದ್ಯೋಗ ಸಿಗದ ನಿರುದ್ಯೋಗಿ ಪದವೀದರರಿಗೆ, ಡಿಪ್ಲೋಮಾ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗಳು ಅತ್ಯಂತ ಜನಪ್ರಿಯಗೊಂಡಿವೆ. ಇದರಿಂದಾಗಿ ಜನಸಾಮಾನ್ಯರಲ್ಲಿ ಮಂದಹಾಸ ಮೂಡಿಸಿದೆ ಎಂದರು.

ಯಾವುದೇ ಸರ್ಕಾರ ಜನರ ವೆಚ್ಚ ಸಾಮರ್ಥ್ಯವನ್ನು ಅಥವಾ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದಲ್ಲಿ ಅಂತಹ ಸಮಾಜದಲ್ಲಿ ಅರ್ಥಿಕ ಚಲನಶೀಲತೆ ಆರೋಗ್ಯಕರವಾಗಿರುತ್ತದೆ. ಜಿಡಿಪಿ ಬೆಳವಣಿಯೂ ಉತ್ತಮ ರೀತಿಯಲ್ಲಿರುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಮತ. ಇಂತಹ ಮಾದರಿ ಎನಿಸಬಹುದಾದ ಯೋಜನೆಗಳ ಜಾರಿಯಿಂದ ಜನರ ಜೀವನಮಟ್ಟ ಸುಧಾರಣೆಗೊಂಡು ಆರ್ಥಿಕ ಚಟುವಟಿಕೆ ಸುಧಾರಿಸಲಿದೆ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ ಉಪಸ್ಥಿತರಿದ್ದರು. ಭದ್ರಾವತಿಯ ಜಗದೀಶ್ ನೇತೃತ್ವದ ಸಂಸ್ಕೃತಿ ಕಲಾತಂಡದ ಕಲಾವಿದರು ಭಾಗ್ಯದ ಬೆಳಕು ಎಂಬ ಕಿರುನಾಟಕವನ್ನು ಪ್ರದರ್ಶಿಸಿದರು.

ಈ ಕಾರ್ಯಕ್ರಮ ಜಿಲ್ಲೆಯ ಎಲ್ಲ ತಾಲೂಕುಗಳ ಆಯ್ದ 20 ಸ್ಥಳಗಳಲ್ಲಿ ಪ್ರದರ್ಶನ ನೀಡಲಿದೆ. ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸುತ ಪಡಿಸುವ ಗ್ಯಾರಂಟಿ ಯೋಜನೆಗಳ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

- - -

(ಕೋಟ್‌) ಗ್ಯಾರಂಟಿ ಯೋಜನೆಗಳು ಕಡುಬಡವರ, ದುರ್ಬಲರ ಬಾಳನ್ನು ಬೆಳಗಿಸಿವೆ. ವ್ಯವಸ್ಥೆಯಲ್ಲಿ ಬದಲಾವಣೆಯ ದಿನಗಳನ್ನು ಕಾಣಬಹುದಾಗಿದೆ. ಈ ಯೋಜನೆಗಳ ಪಡೆದ ಫಲಾನುಭವಿಗಳು ಸಹಜವಾಗಿ ತೃಪ್ತಭಾವ ಹೊಂದಿರುವುದು ನಮ್ಮ ಅರಿವಿಗೆ ಬರುತ್ತಿದೆ. ಅಷ್ಟೇ ಅಲ್ಲದೇ, ಜಿಲೆಯ ಜನರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಸಕ್ರಿಯವಾಗಿದೆ.

- ಎಚ್‌.ಎಂ. ಮಧು, ಅಧ್ಯಕ್ಷ.

- - -

-02ಎಸ್‌ಎಂಜಿಕೆಪಿ01:

ಶಿವಮೊಗ್ಗ ನಗರದ ಖಾಸಗಿ ಬಸ್‌ನಿಲ್ದಾಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಾಕ್ಷ್ಯ ಚಿತ್ರಪ್ರದರ್ಶನ, ಸಂಗೀತ ಮತ್ತು ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಶಿವಮೊಗ್ಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಂ.ಮಧು ಚಾಲನೆ ನೀಡಿದರು.