ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಮೈಸೂರು ಜಿಲ್ಲೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನ ಸಭೆಯು ಮಂಗಳವಾರ ಜರುಗಿತು.ನನಗೆ ಬಂದ 5 ತಿಂಗಳ ಗೃಹಲಕ್ಷ್ಮಿ ಹಣವನ್ನು ಸಂಗ್ರಹಿಸಿ, ಅದರಲ್ಲಿ ಇಂದು ವಿವಿಧ ರೀತಿಯ ಬಟ್ಟೆ ಬ್ಯಾಗ್ ಗಳನ್ನು ತಯಾರಿಸುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಬದುಕನ್ನು ಕಟ್ಟಿಕೊಂಡೆ. ಇದರಿಂದ ದಿನಕ್ಕೆ ಸುಮಾರು 350 ರೂ. ಲಾಭ ಗಳಿಸುತ್ತಿದ್ದೇನೆ. ಒಟ್ಟಾರೆಯಾಗಿ ನಮ್ಮ ಕುಟುಂಬಕ್ಕೆ ಗೃಹಲಕ್ಷ್ಮಿ ಹಾಗೂ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಬಹಳ ಉಪಯುಕ್ತವಾಗಿವೆ ಎಂದು ಕುಕ್ಕರಹಳ್ಳಿ ಗ್ರಾಮದ ಲಕ್ಷ್ಮೀ ತಿಳಿಸಿದರು.
ಫಲಾನುಭವಿ ನಜ್ಮಾ ಕೌಸರ್ ಮಾತನಾಡಿ, ಗೃಹಿಣಿಯಾಗಿರುವ ನಾನು ಮನೆಯ ದಿನನಿತ್ಯದ ಖರ್ಚು ಹಾಗೂ ವೈಯಕ್ತಿಕ ಖರ್ಚಿನ ಹಣಕ್ಕಾಗಿ ನನ್ನ ಪತಿಯನ್ನೇ ಅವಲಂಬಿಸಿದ್ದೆ. ಆದರೆ, ಗೃಹಲಕ್ಷ್ಮಿ ಯೋಜನೆ ಬಂದಾಗಿನಿಂದ ನನ್ನ ಗೃಹಲಕ್ಷ್ಮಿ ಹಣವನ್ನು ಉಳಿತಾಯ ಮಾಡಿ ಹೊಲಿಗೆ ಯಂತ್ರವನ್ನು ಖರೀದಿಸಿ, ಪ್ರಸ್ತುತ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದ್ದೇನೆ. ಅಲ್ಲದೆ, ನನ್ನ ತಂದೆ ಮರಣ ಹೊಂದಿದಾಗ ನನ್ನ ಅಮ್ಮನ ಯೋಗಕ್ಷೇಮ ವಿಚಾರಿಸಲು ಶಕ್ತಿ ಯೋಜನೆಯ ಮೂಲಕ 4 ತಿಂಗಳು ಸುಮಾರು 30 ರಿಂದ 40 ಕಿ.ಮೀ ಉಚಿತ ಬಸ್ ಪ್ರಯಾಣ ಮಾಡಿದ್ದೇನೆ. ಇದರಿಂದ 25 ಸಾವಿರ ರೂ. ಉಳಿಸಿದ್ದೇನೆ. ಸರ್ಕಾರದ 5 ಗ್ಯಾರಂಟಿ ಯೋಜನೆಯಲ್ಲಿ 4 ಗ್ಯಾರಂಟಿಗಳ ಉಪಯೋಗವನ್ನು ಪಡೆಯುತ್ತಿದ್ದೇನೆ. ಈ ಗ್ಯಾರಂಟಿಗಳು ಪ್ರತಿಯೊಬ್ಬ ಬಡಜನರ ಜೀವನಕ್ಕೆ ಆಧಾರ ಸ್ತಂಭವಾಗಿವೆ ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮೈಸೂರು 5ನೇ ಸ್ಥಾನ
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಬಿ. ಪುಷ್ಪಾ ಅಮರನಾಥ್ ಮಾತನಾಡಿ, ಜನರಿಗಾಗಿಯೇ ಜಾರಿ ಮಾಡಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು ಎಲ್ಲಾ ಅಧಿಕಾರಿಗಳ ಜವಾಬ್ದಾರಿ. ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಗ್ಯಾರಂಟಿ ಯೋಜನೆಗಳ ಫಲಕ ಹಾಕಬೇಕು. ಪ್ರಸ್ತುತ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮೈಸೂರು 5ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತೆ ಮಾಡಬೇಕು ಎಂದು ತಿಳಿಸಿದರು.ಮುಖ್ಯಮಂತ್ರಿಗಳ ಜಿಲ್ಲೆಯಾದ್ದರಿಂದ ಜವಾಬ್ದಾರಿ ಹಾಗೂ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು. ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಳಿಗೆ ಭೇಟಿ ನೀಡಿ, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದರ ಮಾಹಿತಿ ಕಲೆ ಹಾಕಬೇಕು. ಒಂದು ವೇಳೆ ಜನರಿಗೆ ತಲುಪುತ್ತಿಲ್ಲವಾದರೆ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಯಾರೊಬ್ಬರೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ತೂಕದಲ್ಲಿ ಮೋಸ ಮಾಡುತ್ತಿರುವುದು ಹಾಗೂ ಸಾರ್ವಜನಿಕರಿಗೆ ಪಡಿತರ ವಿತರಿಸಲು ನಿರ್ದಿಷ್ಟ ಸಮಯ ನಿಗಧಿ ಮಾಡದೆ, ತಮ್ಮ ಬಿಡುವಿನ ವೇಳೆಯಲ್ಲಿ ವಿತರಿಸುವಂತೆ ಹೇಳುತ್ತಿರುವುದು ಕಂಡು ಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಪಡಿತರಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಬಯೋ ಮೆಟ್ರಿಕ್ ನಲ್ಲಿ ತೊಂದರೆ ಉಂಟಾದರೆ ಅದಕ್ಕೆ ಪರ್ಯಾಯ ಮಾರ್ಗವನ್ನು ನೀಡಿ ಪ್ರತಿಯೊಬ್ಬರಿಗೂ ಪಡಿತರ ದೊರಕುವಂತೆ ಮಾಡಬೇಕು ಎಂದು ಸೂಚಿಸಿದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಗ್ಯಾರಂಟಿ ಯೋಜನೆಗಳ ಪ್ರಧಿಕಾರದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಹಾಗೂ ಸದಸ್ಯರು ಇದ್ದರು.
----ಕೋಟ್...
ಕೆಲವು ತಾಂತ್ರಿಕ ದೋಷಗಳಿಂದ ಕಳೆದ 2 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಮಾಡಲಾಗಿಲ್ಲ. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ, ಶೀಘ್ರದಲ್ಲೇ 2000 ರೂ. ಗಳನ್ನು ಖಾತೆಗೆ ಜಮೆ ಮಾಡಲಾಗುತ್ತದೆ.- ಬಿ. ಪುಷ್ಪಾ ಅಮರನಾಥ್, ಉಪಾಧ್ಯಕ್ಷೆ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ