ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಶೇ.97ರ ಪ್ರಮಾಣದಲ್ಲಿ ದೊರಕುತ್ತಿವೆ.
ಕೊಟ್ಟೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಶೇ.97ರ ಪ್ರಮಾಣದಲ್ಲಿ ದೊರಕುತ್ತಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ದೊರಕಲು ಸದಾ ತೊಡಗಿಸಿಕೊಳ್ಳಬೇಕು ಎಂದು ಕೊಟ್ಟೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಸಮನಿ ಅನಿಲ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಯುವನಿಧಿ, ಅನ್ನಭಾಗ್ಯಗಳ ಯೋಜನೆಗಳು ಬಡಜನತೆಗೆ ಸಮರ್ಪಕವಾಗಿ ನಿರಂತರ ದೊರೆಯುವಂತ್ತಾಂಗಬೇಕು. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿತ ಸಹಿಸಲು ಅಗಲ್ಲ ಎಂದು ಎಚ್ಚರಿಕೆ ನೀಡಿದರು.
ಶಕ್ತಿ ಯೋಜನೆ ಅಡಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆ ಯಾಗುತ್ತಿರುವುದು ಏಕೆ ಎಂದು ತಾಪಂ ಇಒ ಡಾ.ಆನಂದಕುಮಾರ್ ಬಾಳಪ್ಪನವರು ಸಾರಿಗೆ ಇಲಾಖೆ ಅವರನ್ನು ಪ್ರಶ್ನಿಸಿದರಲ್ಲದೇ ಕೊಟ್ಟೂರಿನಿಂದ ಜಿಲ್ಲಾ ಕೇಂದ್ರಕ್ಕೆ ತೆರಳಲ್ಲು ಸೂಕ್ತ ಬಸ್‌ಗಳನ್ನು ನಿಯೋಜಿಸಬೇಕು. ಯಾವುದೇ ಹಂತದಲ್ಲಿ ಪ್ರಯಾಣಿದಿಂದ ಮಹಿಳೆಯರು ವಂಚಿತರಾಗದಂತೆ ಗಮನ ಹರಿಸಬೇಕು ಎಂದರು.ಕೂಡ್ಲಿಗಿಯಿಂದ ಕೊಟ್ಟೂರಿಗೆ ರಾತ್ರಿಯ ವೇಳೆಯಲ್ಲಿ ಹೆಚ್ಚಿನ ಬಸ್ ಸೇವೆ ಒದಗಿಸಿಕೊಡಬೇಕು ಎಂದರು.
ತಾಲೂಕಿನಲ್ಲಿ 56 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿಲ್ಲ. ಇವರ ಅಕ್ಕಿ ಎಲ್ಲಿಗೆ ಮತ್ತು ಯಾರಿಗೆ ಹೋಗುತ್ತೆ ಎಂದು ಅಧ್ಯಕ್ಷ ಅನಿಲ್ ಹೊಸಮನಿ ಕೇಳುತ್ತಿದಂತೆ, ಆಹಾರ ಇಲಾಖೆ ಅಧಿಕಾರಿ ಮಂಜುನಾಥ ಅಕ್ಕಿ ಪಡೆಯದ ಫಲಾನುಭವಿಗಳ ವಿವರ ಪಡೆದು ದಾಸ್ತಾನನ್ನು ವಾಪಸ್ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಉತ್ತರಿಸಿದರು.ಆಧಾರ ಕಾರ್ಡ್, ಪಾನ್ ಕಾರ್ಡ್ ಲಿಂಕ್ ಆಗಿರುವ ಕಾರಣ ಆದಾಯ ಮೀತಿ ಮೀರಿದರೆ ರಾಜ್ಯ ಮಟ್ಟದಿಂದಲೇ ಅವನ್ನು ಡಿಲೀಟ್ ಮಾಡಲಾಗುತ್ತಿದೆ ಎಂದರು.
ತಾಲೂಕು ಸಮಿತಿ ಸದಸ್ಯರಾದ ಮಾರಪ್ಪ, ಹರೀಶ ನಾಯ್ಕ್, ಗಾಯತ್ರಿ ಅಶೋಕ್, ಟಿ.ನಾಗಪ್ಪ, ಪಿ.ಕೆ. ಇಂದ್ರಜಿತ್, ತಿರುಕಪ್ಪ ಕರಡಿ, ಆನಂದ, ಮಾಲ್ವಿ ಜಮೀರಖಾನ್, ಉಮಾಪತಿ ಸ್ವಾಮಿ ಸಭೆಯಲ್ಲಿ ಇದ್ದರು.ತಾಪಂ ವ್ಯವಸ್ಥಾಪಕ ಪುಷ್ಪಲತಾ ಮತ್ತಿತರರು ಸಭೆಯಲ್ಲಿನ ವಿಷಯಗಳನ್ನು ದಾಖಲಿಸಿಕೊಂಡರು.