ದಾಬಸ್‍ಪೇಟೆ: ಮಹಿಳೆಯರ ಸಬಲೀಕರಣಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸದಾ ಸಿದ್ದವಿದೆ. ವಿಪಕ್ಷಗಳು ಬರೀ ಟೀಕೆಯಲ್ಲಿ ಮುಳುಗಿದ್ದಾರೆ. ಆದರೆ ನೈಜವಾಗಿ ಮಹಿಳೆಯರ ಸಬಲೀಕರಣ ಸೇರಿ ಬಡವರಿಗೆ, ಯುವಜನತೆಗೆ, ನೇರ ಆರ್ಥಿಕ ಸಹಾಯ ನೀಡಿ ಬಡತನ ನಿವಾರಣೆ ಮತ್ತು ಜೀವನಮಟ್ಟ ಸುಧಾರಣೆಗೆ, ಸಾಮಾಜಿಕ ಭದ್ರತಾ ಯೋಜನೆಗಳಾಗಿ ಧೃಡ ಹೆಜ್ಜೆ ಮೂಡಿಸಿದೆ ಎಂದು ಎಂದು ಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷೆ ನಾಗರತ್ನಮ್ಮ ಹೇಳಿದರು.

ತ್ಯಾಮಗೊಂಡ್ಲು ಹೋಬಳಿಯ ಅರೆಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಕುಂದು ಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೆಲಮಂಗಲ ತಾಲೂಕಿನಲ್ಲಿ ಸಾವಿರಾರು ಫಲಾನುಭವಿಗಳು ಗ್ಯಾರಂಟಿ ಯೋಜನೆಯ ಫಲ ಅನುಭವಿಸುತ್ತಿದ್ದಾರೆ. ಪ್ರತಿ ತಿಂಗಳು ಕುಟುಂಬಕ್ಕೆ ಸರಾಸರಿ 8 ಸಾವಿರ ರು..ಮೊತ್ತದ ಯೋಜನೆ ತಲುಪುತ್ತಿದೆ. ಈ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುತ್ತಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಿಡಿಪಿಒ ನಾಗೇಶ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ, ಸುಳ್ಳು ಸುದ್ದಿಗಳನ್ನು ನಂಬಬೇಡಿ. ಹಣ ಬಂದಿಲ್ಲ ಎಂದರೆ ಬ್ಯಾಂಕ್ ಪಾಸ್ ಪುಸ್ತಕ ಪರಿಶೀಲಿಸಬೇಕು. ಏನಾದರೂ ಸಮಸ್ಯೆಗಳಿದ್ದರೆ ನೇರವಾಗಿ ಕಚೇರಿಗೆ ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ಆಹಾರ ಶಿರಸ್ತೇದಾರ್ ರಮೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ 1,509 ಕಾರ್ಡ್‍ಗಳಿದ್ದು, ನಾಲ್ಕು ಸೊಸೈಟಿಗಳಿವೆ. ಕಾರ್ಡ್ ಇಲ್ಲದವರು ಇಲಾಖೆಯಿಂದ ಆದೇಶ ಬಂದ ತಕ್ಷಣ ಆನ್‍ಲೈನ್‍ನಲ್ಲಿ ನೋಂದಣಿ ಮಾಡಬಹುದು ಎಂದು ಹೇಳಿದರು.

ನೆಲಮಂಗಲ ತಾಲೂಕಿನಲ್ಲಿ ಗ್ರಾಪಂನಲ್ಲಿ ಕೆಲಸ ಮಾಡುವ ನೀರುಗಂಟಿಗಳ ಆಹಾರ ಚೀಟಿ ರದ್ದಾಗಿದ್ದು, ಎಲ್ಲರೂ ಸಂಕಷ್ಟಕ್ಕೀಡಾಗಿದ್ದಾರೆ. ಗ್ಯಾರಂಟಿ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಿ ಅನುಕೂಲ ಮಾಡಿಕೊಡಬೇಕು ಎಂದು ಅರೆಬೊಮ್ಮನಹಳ್ಳಿ ಗ್ರಾಪಂ ನೀರುಗಂಟಿಗಳು ಆಗ್ರಹಿಸಿದರು.


ಇದಕ್ಕೆ ಉತ್ತರಿಸಿದ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಶಾಸಕರು ಮೊದಲಿನಿಂದಲೂ ಯಾವುದೇ ಕಾರ್ಡ್ ರದ್ದಾಗಲು ಬಿಟ್ಟಿಲ್ಲ. ಕೇಂದ್ರ ನಿಯಮದ ಪ್ರಕಾರ ರದ್ದಾಗಿದೆ. ನೀರುಗಂಟಿಗಳು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡುವುದರಿಂದ ಆದಾಯದ ಮೂಲ ಸಿಕ್ಕಿದೆ. ಹದಿನೈದು ಸಾವಿರ ಸಂಬಳ ಬರುವ ನೌಕರರ ಕಾರ್ಡ್ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ವಾರ್ಷಿಕ 2.5 ಲಕ್ಷಕ್ಕೆ ಆದಾಯ ಮಿತಿ ಹೆಚ್ಚಿಸುವ ಪ್ರಸ್ತಾವ ಇದೆ. ಜಿಲ್ಲಾ ಗ್ಯಾರಂಟಿ ಸಮಿತಿಯಿಂದ ಶಿಫಾರಸು ಕಳುಹಿಸಲಾಗಿದೆ. ನೀವು ಕಾನೂನು ಹೋರಾಟ ಮಾಡಿದರೆ ಈಗಿರುವ ಮಿತಿ ರದ್ದಾಗಬಹುದು. ನಿಮ್ಮಿಂದ ಸರ್ಕಾರಕ್ಕೆ ಮನವಿ ಹೋಗಬೇಕು ಎಂದು ಸ್ಪಷ್ಟಪಡಿಸಿದರು.

ಡಿಪೋ ವ್ಯವಸ್ಥಾಪಕ ಹನುಮಂತರಾಜು ಮಾತನಾಡಿ, ತಾಲೂಕಿನಲ್ಲಿ ಶಕ್ತಿ ಯೋಜನೆ ಉತ್ತಮವಾಗಿ ನಡೆಯುತ್ತಿದೆ. ಹೆಚ್ಚಿನ ಬಸ್ ಬೇಕಾದಲ್ಲಿ ಶಾಸಕರ ಶಿಫಾರಸಿನೊಂದಿಗೆ ಗ್ರಾಪಂನಿಂದ ಮನವಿ ಬಂದಲ್ಲಿ ಪರಿಗಣಿಸಲಾಗುವುದು ಎಂದರು. ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಚನ್ನಕೃಷ್ಣ, ಲೀಡ್ ಬ್ಯಾಂಕ್ ಅಧಿಕಾರಿ ಸಂಪತ್ ಕುಮಾರ್, ವಾಯ್ಸ್ ಆಫ್ ನೀಡಿ ಫೌಂಡೇಷನ್ ಕಲಾವಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಆಡಳಿತಾಧಿಕಾರಿ ನೇತ್ರಾವತಿ, ಪಿಡಿಒ ಸಾವಿತ್ರಮ್ಮ, ಬಿಲ್ ಕಲೆಕ್ಟರ್ ದರ್ಶನ್, ರಾಜ್ ಕುಮಾರ್, ಡಾಟಾ ಅಪರೇಟರ್ ಲೀಲಾವತಿ, ಗ್ರಾಪಂ ಸಿಬ್ಬಂದಿ, ದಾಸನಪುರ ಬಸ್ ಡಿಪೋ ಅಧಿಕಾರಿ ಶ್ರೀಕಾಂತ್ ಇತರರಿದ್ದರು.

ಪೋಟೋ 7 :

ತ್ಯಾಮಗೊಂಡ್ಲು ಹೋಬಳಿಯ ಅರೆಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಕುಂದು ಕೊರತೆ ಸಭೆಯಲ್ಲಿ ತಾಲೂಕು ಅಧ್ಯಕ್ಷೆ ನಾಗರತ್ನಮ್ಮ, ಆಡಳಿತಾಧಿಕಾರಿ ನೇತ್ರಾವತಿ, ಸಿಡಿಪಿಒ ನಾಗೇಶ್, ಜಿಲ್ಲಾ ಸಮಿತಿ ಸದಸ್ಯ ಚನ್ನಕೃಷ್ಣ ಇತರರು ಪಾಲ್ಗೊಂಡಿದ್ದರು.