2026-27ನೇ ಸಾಲಿನ ಆರ್ಥಿಕ ವರ್ಷದ ಆರಂಭದಲ್ಲೇ ತಾಲೂಕಿನಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಹರಪನಹಳ್ಳಿ: ಗ್ರಾಮೀಣ ಭಾಗದ ಜನರ ಬದುಕಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಹರಪನಹಳ್ಳಿ ತಾಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. 2026-27ನೇ ಸಾಲಿನ ಆರ್ಥಿಕ ವರ್ಷದ ಆರಂಭದಲ್ಲೇ ತಾಲೂಕಿನಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈಗಾಗಲೇ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿ 5 ಸಾವಿರಕ್ಕೂ ಅಧಿಕ ಕೂಲಿಕಾರರಿಗೆ ಯಶಸ್ವಿಯಾಗಿ ಉದ್ಯೋಗ ಒದಗಿಸಲಾಗಿದೆ ಎಂದು ತಾಪಂ ಇಒ ಚಂದ್ರಶೇಖರ್ ವೈ.ಎಚ್. ತಿಳಿಸಿದ್ದಾರೆ.ಅವರು ಈ ಕುರಿತು ಹೇಳಿಕೆ ನೀಡಿದ್ದು, ಬೇಸಿಗೆಯ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಾಲೂಕಿನ ಪ್ರತಿ ಗ್ರಾಪಂನಲ್ಲೂ ಕೆರೆ ಹೂಳೆತ್ತುವುದು, ಬದು ನಿರ್ಮಾಣ ರಸ್ತೆ ಅಭಿವೃದ್ಧಿ ಹಾಗೂ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ದುಡಿಯೋಣ ಬಾ ಅಭಿಯಾನ, ಸ್ತ್ರೀಚೇತನ ಸೇರಿದಂತೆ ಸೇರಿದಂತೆ ವಿವಿಧ ಘೋಷವಾಕ್ಯದಡಿ ಸ್ಥಳೀಯವಾಗಿ ಉದ್ಯೋಗ ಸೃಜನೆ ಮಾಡುವ ಮೂಲಕ ಗ್ರಾಮೀಣ ಆರ್ತಿಕತೆ ಬಲಪಡಿಸಲು ತಾಲ್ಲೂಕು ಪಂಚಾಯಿತಿ ಪಣತೊಟ್ಟಿದೆ ಎಂದು ತಿಳಿಸಿದ್ದಾರೆ.

15 ದಿನಗಳಲ್ಲಿ ಉದ್ಯೋಗದ ಗ್ಯಾರಂಟಿ:

ಉದ್ಯೋಗ ಖಾತ್ರಿ ಕಾಯ್ದೆಯನ್ವಯ, ನಮೂನೆ-6 ಲ್ಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ 15 ದಿನಗಳ ಒಳಗಾಗಿ ಉದ್ಯೋಗ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಕೆಲಸ ನೀಡದಿದ್ದಲ್ಲಿ ನಿಯಮಾನುಸಾರ ನಿರುದ್ಯೋಗ ಭತ್ಯೆ ಪಡೆಯಲು ಕೂಡ ಅವಕಾಶವಿದೆ. ಕೂಲಿಕಾರರು ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಪಿಡಿಒಗಳನ್ನು ಸಂಪರ್ಕಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಕೂಲಿಕಾರರಿಗೆ ಸಕಾಲಕ್ಕೆ ಕೂಲಿ ಪಾವತಿ, ಕೆಲಸದ ಸ್ಥಳದಲ್ಲಿ ನೆರಳು, ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯಂತಹ ಮೂಲಭೂತ ಸೌಕರ‍್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನೀಡಲು ನಿರಾಕರಿಸಿದರೆ ಸಸಾರ್ವಜನಿಕರು ತಕ್ಷಣವೇ ತಾಪಂ ಕಚೇರಿ ಸಂಪರ್ಕಿಸಬೇಕು ಅಥವಾ ರಾಜ್ಯ ಅಧಿಕೃತ ಸಹಾಯವಾಣಿ ಸಂಖ್ಯೆ 8277506000ಕ್ಕೆ ಕರೆ ಮಾಡಬಹುದು ಎಂದು ಇಒ ಅವರು ತಿಳಿಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಉದ್ಯೋಗ ಖಾತ್ರಿ ಕೂಲಿಕಾರರ ಪಾತ್ರ ದೊಡ್ಡದಿದೆ. ಈಗಾಗಲೇ ಏಪ್ರಿಲ್ ಆರಂಭದಿಂದ 5 ಸಾವಿರ ಅಧಿಕ ಜನರಿಗೆ ಕೆಲಸ ನೀಡಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸಿದರೂ ಕೆಲಸ ನೀಡಲು ಸಿದ್ಧರಿದ್ದೇವೆ. ನಿಮ್ಮ ಹಕ್ಕುಗಳನ್ನು ಚಲಾಯಿಸಿ, ನಮೂನೆ-6 ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಗ್ರಾಮದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ ಎನ್ನುತ್ತಾರೆ ಹರಪನಹಳ್ಳಿ ತಾಪಂ ಇಒ ವೈ.ಎಚ್.ಚಂದ್ರಶೇಖರ.