ಸಾರಾಂಶ
ರಾಮನಗರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಚಿಂತನೆಗಳ ಮರು ಕಲ್ಪನೆಯೇ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 110ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದಿರಾ ಮತ್ತು ದೇವರಾಜ ಅರಸು ನೀಡಿದ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿವೆ. 20 ಅಂಶಗಳ ಕಾರ್ಯಕ್ರಮಗಳ ಮೂಲಕ ಸಮಸಮಾಜದ ನಿರ್ಮಾಣದ ಕನಸು ಕಂಡವರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಅಧಿಕಾರ ನಡೆಸಿದವರು. ವೃದ್ಧಾಪ್ಯ ವೇತನ, ವಿದವಾ, ಅಂಗವಿಕಲ ವೇತನ, ಬಡವರಿಗೆ ನಿವೇಶನ, ಅನ್ನಭಾಗ್ಯ , ಪಡಿತರ ವ್ಯವಸ್ಥೆ, ಜೀತ ಪದ್ಧತಿ ವಿಮುಕ್ತಿ ಗೊಳಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಹಾವನೂರು ವರದಿ ಜಾರಿ ತಂದು ಶೈಕ್ಷಣಿಕ, ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಎಂದು ತಿಳಿಸಿದರು.
ದೇವರಾಜ ಅರಸು, ಗುಂಡೂರಾಯರು, ಬಂಗಾರಪ್ಪ, ವೀರಪ್ಪಮೊಯ್ಲಿ, ಎಸ್.ಎಂ.ಕೃಷ್ಣ ಸೇರಿದಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದ ಪ್ರತಿಯೊಬ್ಬರು ಒಂದೊಂದು ಕೊಡುಗೆ ನೀಡಿದ್ದಾರೆ. ಒಬ್ಬೊಬ್ಬ ನಾಯಕರಲ್ಲಿಯೂ ಸಾಮಾಜಿಕ ಚಿಂತನೆ ಇತ್ತು. ಅದೇ ಮಾದರಿಯನ್ನು ಅನುಸರಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭಲೇ ಜೋಡಿ ರೀತಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯರವರು ಭಾಗ್ಯಗಳ ರಾಜ ಅಂತ ಹೆಸರು ಮಾಡಿದ್ದಾರೆ. ದೇಶವೇ ಕರ್ನಾಟಕದತ್ತ ತಿರುಗಿ ನೋಡುವ ರೀತಿ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.ಪಂಚ ಗ್ಯಾರಂಟಿಗಳಿಂದಾಗಿ ಜನರ ತಲಾ ಆದಾಯ ಹೆಚ್ಚಾಗಿದೆ. 98 ಸಾವಿರ ಕೋಟಿ ರು.ಗಳನ್ನು ಮಧ್ಯವರ್ತಿಗಳಿಲ್ಲದ ಜನರ ಮನೆಗಳಿಗೆ ತಲುಪಿಸುವ ಕೆಲಸ ಆಗಿದೆ. ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ ಜನರ ಕೈಯಲ್ಲಿ ಹಣ ಓಡಾಡಿದಾಗ ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಆರ್ಥಿಕತೆಯೂ ಹೆಚ್ಚಾಗುತ್ತದೆ ಎಂದು ರೇವಣ್ಣ ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ವಿಧಾನ ಪರಿಷತ್ ಸದಸ್ಯ ಎಸ್.ರವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ವಿಶ್ವ ಕರ್ಮ ಸಮಾಜ ಮಾಜಿ ಅಧ್ಯಕ್ಷ ಬಿ.ಉಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಒಕ್ಕೂಟದ ಅಧ್ಯಕ್ಷ ರೈಡ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಶಶಿ ಕಲಾ ಶಿವಕುಮಾರ್ ಚೌಡಶೆಟ್ಟಿ, ಮುಖಂಡರಾದ ದೇವರಾಜು, ಮಾದೇಶ್, ರಾಮಮೂರ್ತಿ, ಎಂ.ಎನ್.ಮಂಜುನಾಥ್, ಎಚ್.ಬಿ.ಶ್ರೀನಿವಾಸ್ ಉಪಸ್ಥಿತರಿದ್ದರು.19ಕೆಆರ್ ಎಂಎನ್ 4.ಜೆಪಿಜಿ
ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಡಿ. ದೇವರಾಜ ಅರಸು ಅವರ 110ನೇ ಜಯಂತಿ ಸಮಾರಂಭದಲ್ಲಿ ಎಚ್.ಎಂ.ರೇವಣ್ಣ ಮಾತನಾಡಿದರು.