ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಹಾಗೂ ಕೋಲಾರದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಸಚಿವರು, ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಉಲ್ಲೇಖಿಸಿದರು.

ಕೋಲಾರದಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೮೦ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪೆರೇಡ್ ವೀಕ್ಷಿಸಿ ಗೌರವ ರಕ್ಷೆ ಸ್ವೀಕರಿಸಿದರು.

ಬಳಿಕ ಮಾತನಾಡಿ, "ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಕೇವಲ ಯೋಜನೆಗಳಲ್ಲ, ಇವು ಬಡವರು, ಶೋಷಿತರು, ಕಾರ್ಮಿಕರು ಹಾಗೂ ಮಹಿಳೆಯರ ಬಾಳಿನ ನೈಜ ಸ್ವಾತಂತ್ರ್ಯದ ಹಾಗೂ ಆರ್ಥಿಕ ಸಬಲೀಕರಣದ ಸಂಕೇತಗಳಾಗಿವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಹಾಗೂ ಕೋಲಾರದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಸಚಿವರು, ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಉಲ್ಲೇಖಿಸಿದರು.

ದೇಶದ ಕಟ್ಟಕಡೆಯ ಬಡವನೂ ಈ ದೇಶ ನನ್ನದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಒಬ್ಬನೇ ಒಬ್ಬ ಬಡವನೂ ಹಸಿವಿನಿಂದ ಮಲಗಬಾರದು ಎಂಬ ಗಾಂಧೀಜಿಯವರ ಕನಸು ಇಂದು ನಮ್ಮ ಅನ್ನಭಾಗ್ಯ ಯೋಜನೆಯ ಮೂಲಕ ಅಕ್ಷರಶಃ ನನಸಾಗುತ್ತಿದೆ. ಸಣ್ಣಪುಟ್ಟ ಖರ್ಚುಗಳಿಗೂ ಬೇರೆಯವರ ಮುಂದೆ ಕೈಯೊಡ್ಡುವ ಪರಿಸ್ಥಿತಿ ನಮ್ಮ ತಾಯಂದಿರಿಗೆ ಬರಬಾರದು ಎಂದರು.

ನಾವು ನುಡಿದಂತೆ ನಡೆದು ನೂರಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ. ರೈತ ಮಿತ್ರ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ ಶೇ.೫೦ ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ತ್ವರಿತ ಬಂಡವಾಳ ಹೂಡಿಕೆ ನೀತಿಯಡಿ ರು. ೨೫,೦೦೦ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉದ್ಯೋಗ ನಿಧಿ ಯೋಜನೆಯಡಿ ಹಿಂದುಳಿದ ೧೦ ಜಿಲ್ಲೆಗಳಲ್ಲಿ ೧ ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದ್ದು, ನೇಮಕಗೊಳ್ಳುವ ಉದ್ಯೋಗಿಗಳಿಗೆ ಪ್ರತಿ ತಿಂಗಳಿಗೆ ತಲಾ ರು. ೨೫೦೦ ರಂತೆ ಪ್ರೋತ್ಸಾಹ ಧನ ನೀಡಲು ವಾರ್ಷಿಕ ರು. ೩೦೦ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.

ಯುವ ಯುಗ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ೬೦೦೦ ಹಾಗೂ ನಗರ ಪ್ರದೇಶಗಳಲ್ಲಿ ೪೦೦೦ ಸೇರಿದಂತೆ ಒಟ್ಟು ೧೦,೦೦೦ ಯುವಕ ಸಂಘಗಳನ್ನು ಸ್ಥಾಪಿಸಲು ರು. ೧೦೦೦ ಕೋಟಿ ವೆಚ್ಚ ಮಾಡಲಾಗುತ್ತಿದೆ ಹಾಗೂ ೧೦೦ ಸರ್ಕಾರಿ ಐಟಿಐಗಳನ್ನು ಕೈಗಾರಿಕೆಗಳೊಂದಿಗೆ ಲಿಂಕ್ ಮಾಡಿ ೧೦,೦೦೦ ಯುವಕರಿಗೆ ಉದ್ಯೋಗದ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

ಮೂಲಸೌಕರ್ಯ ಹಾಗೂ ಪರಿಸರ ಸಂರಕ್ಷಣೆಗೂ ಒತ್ತು ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಿ.ಎಸ್.ಆರ್ ಅನುದಾನದಿಂದ ೧೦೦೦ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ ಹಾಗೂ ರೈತರು ಮರ ಬೆಳೆಸುವುದನ್ನು ಪ್ರೋತ್ಸಾಹಿಸಲು ಮರಗಳ ಮಾರಾಟದಿಂದ ಬರುವ ರಾಜಸ್ವದ ಶೇ.೭೦ರಷ್ಟನ್ನು ಭೂಮಾಲೀಕರಿಗೆ ನೀಡುವ ಯೋಜನೆ ಜಾರಿಯಲ್ಲಿದೆ. ಯುವಜನತೆಗೆ ಉದ್ಯೋಗ, ರೈತರಿಗೆ ಬೆಂಬಲ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನಮ್ಮ ಬದ್ಧತೆಯಾಗಿದೆ ಎಂದರು.

ಸಮಾರಂಭದಲ್ಲಿ ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಸಂಸದ ಎಂ.ಮಲ್ಲೇಶ್ ಬಾಬು, ವಹ್ನಿಕುಲ ಅಭಿವೃದ್ಧಿ ನಿಗಮದ ಎಲ್.ಎ.ಮಂಜುನಾಥ್, ಆರ್ಯವೈಷ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ರಸಾದ್, ಕುಡಾ ಅಧ್ಯಕ ಹನೀಪ್, ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳ, ಎಸಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಇದ್ದರು.