ಕನ್ನಡಪ್ರಭ ವಾರ್ತೆ ಮಧುಗಿರಿ

ವಿಶ್ವದಲ್ಲೇ ಭಾರತದ ಯುವ ಜನಾಂಗ ಅತ್ಯಂತ ಬಲಿಷ್ಠವಾದುದು, ಯುವ ಶಕ್ತಿ ದುಶ್ಚಟಗಳಿಗೆ ತಲೆ ಬಾಗದೇ ಸ್ವಂತಿಕೆಯಿಂದ ಚಿಂತನೆ, ಆಲೋಚನೆ, ಕ್ರಿಯಾಶೀಲತೆ ಬೆಳೆಸಿಕೊಂಡು ದೇಶದ ಭವಿಷ್ಯ ಮತ್ತು ಭದ್ರತೆಗೆ ಸಾಕ್ಷಿಯಾಗಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.

ಶನಿವಾರ ಪಟ್ಟಣದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಯುವ ಜನಾಂಗ ಶಿಕ್ಷಣ ಮುಗಿದ ತಕ್ಷಣ ಉದ್ಯೋಗದತ್ತ ಸಾಗುವುದು ಕಂಡು ಬರುತ್ತಿದೆ. ಶಿಕ್ಷಣ ಮತ್ತು ಉದ್ಯೋಗದ ಪ್ರಮಾಣದಲ್ಲಿ ವ್ಯತ್ಯಾಸವಿದ್ದು ಸರ್ಕಾರಿ ನೌಕರಿಯನ್ನೇ ನಂಬಿ ಬದುಕಬಾರದು, ಸ್ವಯಂ ಉದ್ಯೋಗ ಕಲಿತು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿ,

ರಾಷ್ಟ್ರದಲ್ಲಿ ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ಇಂದಿನ ಸ್ವಾತಂತ್ರ್ಯ ಸುಲಭವಾಗಿ ಧಕ್ಕಿದ್ದಲ್ಲ, ಕೋಟ್ಯಂತರ ಜನರ ತ್ಯಾಗ,


ಬಲಿದಾನಗಳ ಫಲ, ಇದನ್ನು ಇಂದಿನ ಪೀಳಿಗೆಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಉಪನ್ಯಾಸಗಳು, ಪಠ್ಯಪುಸ್ತಕಗಳಲ್ಲಿ ಈ ವಿಚಾರಧಾರೆಗಳನ್ನು ಮನ ಮುಟ್ಟುವಂತೆ ತಿಳಿಸುವ ಅಗತ್ಯವಿದೆ ಎಂದರು.

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, 2047ರ ಹೊತ್ತಿಗೆ ಯುವಕರಿಂದ ವಿಕಸಿತ ಭಾರತ ನಿರ್ಮಾಣ ಕನಸನ್ನು ದೇಶ ಎದುರು ನೋಡುತ್ತಿದೆ. ಭಾರತದಲ್ಲಿ 37 ಕೋಟಿಗೂ ಅಧಿಕ ಯುವಕರಿದ್ದಾರೆ. ಅವರು ವಿಶೇಷ ಶಕ್ತಿ, ಸಾಮರ್ಥ್ಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಪ್ರತಿಭೆ ಮೂಲಕ ಹೆಸರು ಮಾಡಿದ್ದಾರೆ. ಯುವಕರನ್ನು ಸಂವೇದನಶೀಲರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸ್ವಾಭಿಮಾನಿ ಭಾರತ ನಿರ್ಮಾಣ ಮಾಡಲು ಸರ್ಕಾರಗಳು ಸಜ್ಜಾಗಿವೆ. ಸ್ವಾವಲಂಭಿ ಭಾರತ ನಿರ್ಮಿಸಲು ಸ್ವದೇಶಿ ಉತ್ಪಾದನೆ ಹೆಚ್ಚಲಿ, ಬೇರೆಡೆಯಿಂದ ಅಮದು ಮಾಡಿಕೊಳ್ಳುವ ಆಲೋಚನೆ ತಗ್ಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಂದಿನಿ, ಡಿಡಿಪಿಐ ಮಾಧವರೆಡ್ಡಿ, ಡಿವೈಎಸ್‌ಪಿ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿ ಸುರೇಶ್, ಬಿಇಒ ಕೆ.ಎನ್‌.ಹನುಮಂತರಾಯಪ್ಪ, ಇಒ ಉತ್ತಮ್, ಎಡಿ ಧನಂಜಯ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡರಾಜು, ಎನ್‌.ಗಂಗಣ್ಣ, ಅಯೂಬ್, ಲಾಲಪೇಟೆ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಪಿಡಬ್ಲ್ಯೂಡಿ ಇಇ ಹನುಮಂತರಾವ್, ಎತ್ತಿನ ಹೊಳೆ ಎಇಇ ಮುರುಳೀಧರ್, ಎಇಇ ಸಂಪತ್ ಕುಮಾರ್, ಎಇಇ ಹನಮಂತಪ್ಪ, ಮಂಜುನಾಥ್, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಜಯರಾಮಯ್ಯ, ಸಿಡಿಪಿಒ ಕುಮಾರ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಕಸಾಪ ಅಧ್ಯಕ್ಷರಾದ ಸಹನಾ ನಾಗೇಶ್, ಎಸಿಎಫ್ ಉಮಾ, ಕೃಷಿ ಸಮಾಜದ ಅಧ್ಯಕ್ಷ ಗುಟ್ಟೆ ರಮೇಶ್, ಸಿಪಿಐ ಹನುಮಂತರಾಯಪ್ಪ, ಪಿಎಸೈ ಚಂದ್ರಶೇಖರ್ ಹಾಗೂ ಅನೇಕರು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ, ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಮತ್ತು ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಯಿತು.