ಮೃತರ ಖಾತೆಗಳಿಗೂ ಸಹಾಯಧನ ಜಮೆಯಾಗುತ್ತಿರುವುದು ಸೇರಿ ಅರ್ಹರಲ್ಲದವರಿಗೂ ಇನ್ನೀತರ ಸೌಲಭ್ಯಗಳು ದೊರೆತು ಹಣ ಪೋಲಾಗುತ್ತಿದೆ.

ಕನಕಗಿರಿ: ಗ್ಯಾರಂಟಿ ಯೋಜನೆಗಳಿಂದ ಕೆಲವರಿಗೆ ಒಳ್ಳೆಯದಾಗಿದ್ದು, ಹಲವರಿಗೆ ತೊಂದರೆಯಾಗಿರುವುದು ಸತ್ಯ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

ಅವರು ಪಟ್ಟಣದ ರಂಭಾಪುರಿ ಭವನದ ಕಟ್ಟಡ ಪರಿಶೀಲಿಸಿ ಶುಕ್ರವಾರ ಪತ್ರಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಘೋಷಣೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಬಹುದು. ಆದರೆ ಯೋಜನೆಗಳ ಅನುಷ್ಠಾನಕ್ಕೆ ಮುಂದಾದಾಗ ರಾಜ್ಯದ ಬೊಕ್ಕಸಕ್ಕೆ ಬಹಳಷ್ಟು ಪೆಟ್ಟು ಬಿದ್ದಿದೆ. ಗ್ಯಾರಂಟಿ ನೀಡುವುದಕ್ಕಾಗಿ ಜನರ ಮೇಲೆ ಹೆಚ್ಚು ತೆರಿಗೆ ಹಾಕಲಾಗಿದೆ. ಇದೀಗ ಸರ್ಕಾರ ಗ್ಯಾರಂಟಿ ಯೋಜನೆ ಪರಿಷ್ಕರಿಸುವ ನಿರ್ಧಾರಕ್ಕೆ ಬಂದಿರುವುದು ಒಳ್ಳೆಯ ನಿರ್ಧಾರವಾಗಿದೆ ಎಂದರು.

ಮೃತರ ಖಾತೆಗಳಿಗೂ ಸಹಾಯಧನ ಜಮೆಯಾಗುತ್ತಿರುವುದು ಸೇರಿ ಅರ್ಹರಲ್ಲದವರಿಗೂ ಇನ್ನೀತರ ಸೌಲಭ್ಯಗಳು ದೊರೆತು ಹಣ ಪೋಲಾಗುತ್ತಿದೆ. ಅರ್ಹರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಲಾಭ ದೊರೆಯಬೇಕೆ ಹೊರತು ಅನರ್ಹರಿಗಲ್ಲ. ಇದನ್ನು ತಪ್ಪಿಸಲು ನೂತನ ಸಿಎಂ ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದಾಗಿದೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಹಣ ತೊಡಗಿಸಿ ಕಾರ್ಯ ಪ್ರವೃತ್ತರಾಗುವುದು ಒಳಿತು. ರಾಜ್ಯದಲ್ಲಿ ಅಭಿವೃದ್ದಿ ಮಾಡಲು ಹಲವು ಕೆಲಸಗಳಿವೆ. ಜಾತಿ-ಧರ್ಮಗಳ ಸಂಘರ್ಷಕ್ಕೆ ಅವಕಾಶ ನೀಡದೆ ಎಲ್ಲ ಸಮುದಾಯಗಳ ಹಿತ ಕಾಪಾಡುವ ನಿಟ್ಟಿನಲ್ಲಿ ನೂತನ ಸಿಎಂ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ಹಲವರು ಇದ್ದರು.