ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಸುಮಾರು ಮೂರು ಕೋಟಿ ರು. ವೆಚ್ಚದ ಬೆಟ್ಟದಪುರ ಪೊಲೀಸ್ ಠಾಣಾ ಪೋಲೀಸರ 12 ವಸತಿಗೃಹ ನಿರ್ಮಾಣಕ್ಕೆ ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.ಈ ವೇಳೆ ಎಸ್ಪಿ ವಿಷ್ಣುವರ್ಧನ್ ಜೊತೆಗಿದ್ದು ವಿವಿಧ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಸಚಿವರು, ಪೊಲೀಸರಿಗೆ ಹಗಲು ಇರುಳು ಎನ್ನದೆ ಕರ್ತವ್ಯ ಪಾಲನೆ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಅವರು ವಾಸಿಸಲು ವಸತಿಗೃಹಗಳಿದ್ದರೆ ಯಾವುದೇ ಘಟನೆ ನಡೆದ ಕೂಡಲೇ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬಹುದು. ಆದ್ದರಿಂದ ರಾಜ್ಯದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಸತಿಗೃಹ ನಿರ್ಮಿಸಲಾಗುವುದು. ಆದ್ದರಿಂದ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಕುಟುಂಬವನ್ನು ಸೇರಬಹುದು ಮತ್ತು ಅವರ ಸಂತೋಷವನ್ನು ಹಂಚಿಕೊಳ್ಳಬಹುದು ಎಂಬ ಉದ್ದೇಶದಿಂದ ಠಾಣಾ ವ್ಯಾಪ್ತಿಯಲ್ಲಿ ವಸತಿಗೃಹ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಪೊಲೀಸರಿಗೆ ಕರ್ತವ್ಯ ಮತ್ತು ಕುಟುಂಬ ಎರಡು ಕಣ್ಣುಗಳಿದ್ದಂತೆ. ಯಾವುದನ್ನು ನಿರ್ಲಕ್ಷ ಮಾಡುವಂತಿಲ್ಲ. ಆದ್ದರಿಂದ ವಸತಿಗೃಹಗಳು ಠಾಣಾ ಪಕ್ಕದಲ್ಲಿದ್ದರೆ ಸಿಬ್ಬಂದಿಯನ್ನು ಅತಿ ಶೀಘ್ರದಲ್ಲೇ ಬಳಸಿಕೊಳ್ಳಬಹುದು. ಕರ್ತವ್ಯ ಪಾಲಿಸಲು ಅನುಕೂಲವಾಗುತ್ತದೆ. ಕುಟುಂಬದ ಜೊತೆ ಸಂತೋಷ ಹಂಚಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.ಗ್ರಾಪಂ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಲಕ್ಷ್ಮಿ ರಾಮು, ಭುವನಹಳ್ಳಿ ಗ್ರಾಪಂ ಅಧ್ಯಕ್ಷ ದೇವರಾಜ್, ಮಾಜಿ ಅಧ್ಯಕ್ಷ ಬಿ.ಸಿ. ಗಿರೀಶ್, ಮಾಜಿ ಉಪಾಧ್ಯಕ್ಷ ರಮೇಶ್, ನಿವೃತ್ತ ಶಿಕ್ಷಕ ಸಣ್ಣಸ್ವಾಮಿಗೌಡ, ಭೋವಿ ಸಮಾಜದ ಮಾಜಿ ಅಧ್ಯಕ್ಷ ರವಿಕುಮಾರ್, ಅರ್ಚಕ ಸತೀಶ್ ಕಶ್ಯಪ್, ತಾಪಂ ಮಾಜಿ ಸದಸ್ಯೆ ಅನಿತಾ, ಚನ್ನೇಗೌಡನ ಕೊಪ್ಪಲು ಜಯರಾಮೇಗೌಡ, ಯಕ್ಬಲ್ ಷರೀಫ್, ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ, ತಹಸೀಲ್ದಾರ್ ನಿಸರ್ಗ ಪ್ರಿಯಾ, ಇಒ ಸುನಿಲ್ ಕುಮಾರ್, ಸಿಪಿಐ ದೀಪಕ್, ಎಸ್ಐ ಶಿವಶಂಕರ್, ಬೈಲುಕುಪ್ಪ ಎಸ್ಐ ಕಿರಣ್ ಕುಮಾರ್, ಪೊಲೀಸ್ ಸಿಬ್ಬಂದಿ ಇದ್ದರು.