ಸಾರಾಂಶ
ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಜ.24ರಿಂದ ಫೆ.10ರ ವರೆಗೆ ನಡೆಯಲಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.
ಶನಿವಾರಸಂತೆ: ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಜ.24ರಿಂದ ಫೆ.10ರ ವರೆಗೆ ನಡೆಯಲಿದೆ ಎಂದು ಜಯದೇವ ಜಾನುವಾರು ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿನಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಂಡ್ಲಿ ಗ್ರಾ.ಪಂ. ಮತ್ತು ಗುಡುಗಳಲೆ ಜಯದೇವ ಜಾನುವಾರು ಜಾತ್ರಾ ಸಮಿತಿ ಆಶ್ರಯದಲ್ಲಿ ನಡೆಯುವ ಜಾನುವಾರುಗಳ ಜಾತ್ರೆಗೆ ಈಗಾಗಲೇ ಸಮಿತಿ ಸಿದ್ಧತೆ ನಡೆಸಿದೆ ಎಂದ ಅವರು, ಜಾತ್ರೆಯ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಾತ್ರೆಯು ಯಶಸ್ವಿಯಾಗಿ ನೆರವೇರಲು ಅಕ್ಕಪಕ್ಕದ ಗ್ರಾ.ಪಂ.ಗಳು, ವಿವಿಧ ಸಂಘ ಸಂಸ್ಥೆಯವರು, ರೈತರು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.ಜಾತ್ರಾ ಸಮಿತಿ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಜಾನುವಾರು ಜಾತ್ರೆಗೆ ಜ.24ರಂದು ಚಾಲನೆ ನೀಡಲಾಗುತ್ತದೆ. ಅಂದು ಬೆಳಗ್ಗೆ 10 ಗಂಟೆಗೆ ಶನಿವಾರಸಂತೆ ಬನ್ನಿ ಮಂಟಪದಿಂದ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಹೊರಟು ಗುಡುಗಳಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗುಡುಗಳಲೆ ಜಾತ್ರಾ ಮೈದಾನವನ್ನು ಪ್ರವೇಶಿಸಲಾಗುತ್ತದೆ. ನಂತರ ಜಯದೇವ ಜಾತ್ರಾ ಮೈದಾನದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಜಾತ್ರೆಯನ್ನು ಶನಿವಾರಸಂತೆ, ದುಂಡಳ್ಳಿ, ನಿಡ್ತ ಗ್ರಾ.ಪಂ.ಗಳ ಸಹಕಾರದಿಂದ ನಡೆಸಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಾತ್ರಾ ಸಮಿತಿ ಸಹ ಕಾರ್ಯದರ್ಶಿ ಚೈತ್ರಾ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಸುಧಾ ಹಿರೇಶ್, ಸದಸ್ಯ ಬಸವರಾಜು, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ರೂಪ ದಿನೇಶ್ ಭಾಗವಹಿಸಿದ್ದರು.