ಸಾರಾಂಶ
ಅತಿಥಿ ಉಪನ್ಯಾಸಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಅಥಣಿ ಸೇವೆ ಖಾಯಂಗೆ ಆಗ್ರಹಿಸಿ ನ.23 ರಿಂದ ತರಗತಿಗಳನ್ನು ಬಹಿಷ್ಕರಿಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ 22ನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಗಿಡಗಳಿಗೆ ನೀರುಣಿಸುವ ಮೂಸಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಉಪನ್ಯಾಸಕ ಭರತ ಪಾಟೀಲ, ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ತಂದು ಅನುಮೋದನೆ ನೀಡಿ, ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಜಿಸಿದ ಹುದ್ದೆಗಳಲ್ಲಿ ವಿಲೀನಗೊಳಿಸಿ ಖಾಯಂಗೊಳಿಸುವಂತೆ ಒತ್ತಾಯಿಸಿದರು. ನ.23 ರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ನಮ್ಮ ಸೇವೆ ಖಾಯಂಗೊಳಿಸಲು ಲಿಖಿತ ಆದೇಶ ಹೊರಡಿಸಬೇಕು. ಅಲ್ಲಿವರೆಗೆ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.ಎಸ್.ಎಸ್. ದೇವರೆಡ್ಡಿ ಮಾತನಾಡಿ, ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 11000ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿ ಸಾವಿರಾರು ಉಪನ್ಯಾಸಕರ ವಯೋಮಿತಿ ಮೀರಿದ, ಮೀರುತ್ತಿರುವವರು ಇದ್ದಾರೆ. ಅವರೆಲ್ಲರ ಬದುಕು ಅಭದ್ರತೆಯಲ್ಲಿದೆ ಎಂದರು
ಹಿರಿಯ ಉಪನ್ಯಾಸಕ ಎನ್.ಎಸ್ ಚಿಕ್ಕಟ್ಟಿ ಮಾತನಾಡಿ, ಹಿಂದೆ ಬಿಜೆಪಿ ಸರ್ಕಾರದ ವೇಳೆ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಿದ್ದೆವು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೋರಾಟದ ಸ್ಥಳಕ್ಕೆ ಬಂದು ಬೇಡಿಕೆಗೆ ಬೆಂಬಲಿಸಿ ಮಾತನಾಡಿದ್ದರು. ಈಗ ಅವರೇ ಮುಖ್ಯಮಂತ್ರಿಗಳಾಗಿದ್ದು, ಕೊಟ್ಟ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪಿ.ಎಲ್ ಪೂಜಾರಿ, ಡಾ. ಎಂ.ಎಸ್ ಉಕ್ಕಲಿ, ಎಸ್.ಪಿ ತಳಕೇರಿ, ಎಸ್ ಬಿ ಜಾಧವ, ಭಾರತಿ ಪಾಟೀಲ, ಎನ್.ಎಸ್ ಚಿಕ್ಕಟ್ಟಿ, ಡಾ. ವಿದ್ಯಾವತಿ ಬಡಿಗೇರ, ಎಸ್ ಆರ್ ಗಡದೆ, ಭಾರತಿ ಪಾಟೀಲ, ವಿಜಯ ಕಾಂಬಳೆ, ಎ.ವಿ ಕುರಣೆ, ರೂಪಾ ಗಸ್ತಿ , ಎನ್. ಎನ್ ನೂಲಿ, ಎಸ್. ಎಸ್ ದೇವರಡ್ಡಿ, ಡಾ.ಎಸ್. ಎಂ ಹಾದಿಮನಿ, ಬಿ.ಕೆ ಪಾಟೀಲ, ಎಚ್.ಪಿ ಪಾಟೀಲ, ಪರಶುರಾಮ ಹರಳೆ, ಕೆ ಎಸ್ ಬಿಜ್ಜರಗಿ, ಸಂಜಯ ಕಾಂಬಳೆ, ಭಾಗ್ಯವಂತಿ, ಸುನಂದಾ ಹಿಪ್ಪರಗಿ, ಮಂಜುಳಾ ಹಳ್ಳೊಳ್ಳಿ, ಆರ್.ಎ ಬಡಿಗೇರ, ಪ್ರಮೋದ ಮುಂಜಿ, ಎ.ಆರ್ ಕಣಬುರ ಸೇರಿ ಅನೇಕರು ಇದ್ದರು.ಫೋಟೋ (14ಅಥಣಿ 01)