ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಅತಿಥಿ ಶಿಕ್ಷಕರು ಅನಿವಾರ್ಯ: ಚಿದಾನಂದ ಎಂ ಗೌಡ

| Published : Jan 29 2024, 01:31 AM IST

ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಅತಿಥಿ ಶಿಕ್ಷಕರು ಅನಿವಾರ್ಯ: ಚಿದಾನಂದ ಎಂ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಅತಿಥಿ ಶಿಕ್ಷಕರು ಗೌರವಯುತ ಜೀವನ ನಡೆಸಲು ಬೇಕಾದ ವೇತನ ಭತ್ಯೆ ದೊರಕಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಇಲ್ಲದೆ ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಅತಿಥಿ ಶಿಕ್ಷಕರು ಅನಿವಾರ್ಯ. ಸರ್ಕಾರಿ ಅತಿಥಿ ಶಿಕ್ಷಕರು ಗೌರವಯುತ ಜೀವನ ನಡೆಸಲು ಬೇಕಾದ ವೇತನ ಭತ್ಯೆ ದೊರಕಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಪ್ರಾಥಮಿಕ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ತುಮಕೂರು-ಮಧುಗಿರಿ ಜಿಲ್ಲಾಮಟ್ಟದ ಅತಿಥಿ ಶಿಕ್ಷಕರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ೪೫ ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಸರ್ಕಾರಗಳು ವಿವೇಚನೆಯಿಂದ ಕೆಲಸ ಮಾಡಬೇಕು. ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಬೇಕು. ಅತಿಥಿ ಶಿಕ್ಷಕರಿಗೆ ವರ್ಷದಲ್ಲಿ ಕೇವಲ ೧೦ ತಿಂಗಳು ಮಾತ್ರ ಸಂಬಳ ಕೊಡಬೇಕು ಎಂಬುದು ಅತ್ಯಂತ ಹೀನಾಯ ಸ್ಥಿತಿ. ಇದಕ್ಕೆ ಅತಿಥಿ ಶಿಕ್ಷಕರು ಹೋರಾಟಕ್ಕೆ ಸನ್ನದ್ದವಾಗಬೇಕು. ನಿಮ್ಮ ಹೋರಾಟಕ್ಕೆ ನಾವು ಇದ್ದೇವೆ ಎಂದರು.

ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಭವಿಷ್ಯ ನಿಧಿ ನೀಡಬೇಕು ಎಂಬ ನಿಬಂಧನೆ ಮಾಡುವ ಸರ್ಕಾರಗಳು, ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುವವರಿಗೆ ಯಾವುದೇ ಭದ್ರತೆ ನೀಡುವುದಿಲ್ಲ. ಇತರೆ ಯಾವುದೇ ಸವಲತ್ತುಗಳು ನೀಡುವುದಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ರಾಜ್ಯದಲ್ಲಿ 53000 ಸರ್ಕಾರಿ ಶಾಲೆಗಳು ಇವೆ. 46 ಲಕ್ಷ ಜನ ಬಡವರು, ದೀನ ದಲಿತರು, ಅಸಹಾಯಕರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 18 ಸಾವಿರ ಖಾಸಗಿ ಶಾಲೆಗಳಲ್ಲಿ 48 ಲಕ್ಷ ಜನ ಮಕ್ಕಳು ಕಲಿಯುತ್ತಿದ್ದಾರೆ. ಹಿಂದೆ ಖಾಸಗಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಕಡಿಮೆ ಇತ್ತು. ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಕೇವಲ 8-10 ವರ್ಷಗಳ ಬದಲಾವಣೆಯಾಗಿದೆ. ಸರ್ಕಾರಗಳು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ನೀಡಲಿಲ್ಲವೋ ಜನರು ಖಾಸಗಿ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲು ಮಾಡಲು ಮುಂದಾದರು ಎಂದರು.

ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನಿಂತಿರುವುದೇ ಅತಿಥಿ ಶಿಕ್ಷಕರ ಮೇಲೆ. ಎಲ್ಲಾ ಕೆಲಸಗಳ ಮಧ್ಯೆ ನೆಮ್ಮದಿ ತಂದು ಕೊಡುವ ಹುದ್ದೆ ಶಿಕ್ಷಕರ ಹುದ್ದೆ. ಆದರೆ ಶಿಕ್ಷಕರಿಗೆ ಅನೇಕ ಸವಾಲುಗಳಿವೆ. ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಜಗತ್ತಿನ ೧೩೫ ಕ್ಕಿಂತ ಹೆಚ್ಚು ದೇಶಗಳು ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿವೆ. ಆ ನಿಟ್ಟಿನಲ್ಲಿ ಸಂವಿಧಾನದ ಅನ್ವಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಘೋಷಣೆ ಮಾಡಲಾಗಿದೆ. ೬ ರಿಂದ ೧೪ ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆದರೆ ಅದನ್ನು ಜಾರಿ ಮಾಡಲು ಸರಿಯಾಗಿ ಶಿಕ್ಷಕರ ನೇಮಕಾಗಿಯಾಗುತ್ತಿಲ್ಲ. ಸುಪ್ರಿಂ ಕೋರ್ಟ್ ಹೇಳಿದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆದ್ದರಿಂದ ಸರ್ಕಾರಗಳು ಅತಿಥಿ ಶಿಕ್ಷಕರಿಗೆ ಕನಿಷ್ಠ ಸೌಲಭ್ಯ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ಸೌಮ್ಯಾ, ಉಪಾಧ್ಯಕ್ಷೆ ಚಿತ್ರಲೇಖಾ, ಶಿರಾ ತಾಲೂಕು ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮಪ್ಪ, ಕರಿರಾಮನಹಳ್ಳಿ ಭೂತರಾಜು, ಸಿದ್ದಣ್ಣ, ಮಂಜುನಾಥ್, ಶಿವಣ್ಣ, ತಿಮ್ಮರಾಜು, ಹನುಮಂತರಾಜು, ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು.