ಮುರುಘಾಮಠದಿಂದ ಅಲಕ್ಷಿತ ಸಮುದಾಯಗಳಿಗೆ ಮಾರ್ಗದರ್ಶನ

| Published : Jun 26 2025, 01:32 AM IST

ಮುರುಘಾಮಠದಿಂದ ಅಲಕ್ಷಿತ ಸಮುದಾಯಗಳಿಗೆ ಮಾರ್ಗದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಕೇಂದ್ರ ಮುರುಘಾ ಮಠದಲ್ಲಿ ಬುಧವಾರ ನಡೆದ ಕುಂಬಾರ ಗಂಡಯ್ಯ ಶರಣೋತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶೂನ್ಯಪೀಠ ಪರಂಪರೆಯ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠವು ಅಲಕ್ಷಿತ ಸಮುದಾಯಗಳಿಗೆ ಸರಿಯಾದ ದಿಕ್ಕನ್ನು ತೋರಿಸಲು ಸೂಕ್ತ ನಿರ್ದೇಶನವನ್ನು ನೀಡುವುದರಮೂಲಕ ಸಮಾನತೆಯ ಕುರುಹು ಪಸರಿಸಿದೆ ಎಂದು ಚಿತ್ರದುರ್ಗ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಬುಧವಾರ ನಡೆದ ಶಿವಶರಣ ಕುಂಬಾರ ಗುಂಡಯ್ಯ ಮತ್ತು ಅವರ ಪತ್ನಿ ಶರಣೆ ಕೇತಲದೇವಿ ಅವರ ಶರಣೋತ್ಸವ ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ನಮ್ಮದು ಸಣ್ಣ ಸಮಾಜ. ನಾವು ಸಹ ಎಲ್ಲರಂತೆ ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಸಹಕಾರದ ಅಗತ್ಯವಿದೆ. ಬಸವಣ್ಣ ಅಂದು ಅನುಭವ ಮಂಟದಲ್ಲಿ ಎಲ್ಲರಿಗೂ ಸಮಾನ ಸ್ಥಾನ ಮಾನ ನೀಡಿದ್ದ. ಅದರ ಫಲ ಇಂದು ನಾವೆಲ್ಲ ಉಣ್ಣುತ್ತಿದ್ದೇವೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮೀಜಿ ಮಾತನಾಡಿ, ಸಕಲ ಜೀವರಾಶಿಗಳಿಗೂ ಆಹಾರ, ಆಶ್ರಯ ಇತರ ಸಕಲೈಶ್ವರ್ಯಗಳನ್ನು ಒದಗಿಸಿರುವುದು ಮಣ್ಣು. ಅಂತಹ ಶ್ರೇಷ್ಠ ಎನಿಸಿದ ಮಣ್ಣಿನಿಂದ ಹಲವು ರೀತಿಯ ಗೃಹೋಪಯೋಗಿ ವಸ್ತುಗಳನ್ನು ತಮ್ಮ ಕೌಶಲ್ಯದಿಂದ ತಯಾರು ಮಾಡುತ್ತಿದ್ದ ಶಿವಶರಣ ಕುಂಬಾರ ಗುಂಡಯ್ಯ ಮತ್ತವರ ಪತ್ನಿ ವಿಶೇಷ ವ್ಯಕ್ತಿತ್ವದವರು ಎಂದು ಬಣ್ಣಿಸಿದರು.

ತನ್ನ ಕಸುಬಿನ ಜತೆಗೆ ಬಸವಣ್ಣನವರ ಆಶಯಕ್ಕೆ ಒತ್ತುಕೊಟ್ಟು ಅವರು ನಡೆದಿದ್ದರು. ನಮ್ಮ ಹಿರಿಯರು ಹುಣ್ಣಿಮೆ ಅಮಾವಾಸ್ಯೆಗಳನ್ನು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ಇಂದು ಮಣ್ಣೆತ್ತಿನ ಅಮಾವಾಸ್ಯೆ. ಇದಕ್ಕೂ ವೈಜ್ಞಾನಿಕ ಮತು ತಾತ್ವಿಕ ನೆಲೆಗಟ್ಟು ಇದೆ. ವೈಚಾರಿಕ ಚಿಂತನೆಯ ನೆಲೆಗಟ್ಟಿನಲ್ಲಿ ರೂಪಿತಗೊಂಡ ದಿನಗಳನ್ನು ಕೆಲವರು ಅವುಗಳನ್ನು ಭಯಪಡಿಸಲು ಬಳಸಿಕೊಂಡಿದ್ದಾರೆ. ಶ್ರೀ ಮಠವು ಎಲ್ಲಾ ದಿನಗಳಿಗೂ ಮಹತ್ವ ನೀಡಿದೆ. ನಾಲ್ಕಾರು ದಶಕಗಳಿಂದ ಇದು ನಡೆದಿದ್ದು, ಅಮಾವಾಸ್ಯೆಯ ದಿನದಂದು ನೂರಾರು ಜೋಡಿ ಸಾಮೂಹಿಕ ಕಲ್ಯಾಣ ಮಹೋತ್ಸವಗಳು ನಡೆದಿರುವುದು ವಿಶೇಷ. ಕುಂಬಾರ ಗುಂಡಯ್ಯನವರಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದ್ದ ಕಾರಣ ಈ ವಿಶೇಷ ದಿನದಂದು ಅವರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಕಳೆದ ಶತಮಾನದಲ್ಲಿ ಮನೆಯ ಜಗುಲಿ ಮೇಲಿಟ್ಟು ಪೂಜಿಸುತ್ತಿದ್ದ ತಾಡೋಲೆ ಕಟ್ಟುಗಳನ್ನು ಬಿಚ್ಚಿ ಅವುಗಳಲ್ಲಿದ್ದ ಅನರ್ಘ್ಯ ವಚನಗಳನ್ನು ಹೊರತಂದು ಸಂಶೋಧಿಸಿ ಬಹಳ ಪರಿಶ್ರಮ ವಹಿಸಿ ವಚನ ಪಿತಾಮಹ ಫ.ಗು.ಹಳಕಟ್ಟಿ ನಮ್ಮ ಮುಂದೆ ಇಟ್ಟಿದ್ದರು. ಅಂಥ ವಚನಗಳನ್ನು ಬಯಲಿಗೆ ತಂದು ಶರಣರನ್ನು ಪರಿಚಯಿಸಿದ ಅವರ ಜಯಂತಿಯನ್ನು ವಚನ ಸಂರಕ್ಷಣೆಯ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶ ನೀಡಿದೆ. ಹಾಗಾಗಿ ಬರುವ ಜುಲೈ 2 ರಂದು ಆ ಸಮಾರಂಭವು ಶ್ರೀಮಠದಲ್ಲಿ ಆಚರಿಸಲಾಗುತ್ತಿದೆ ಎಂದರು.

ಸಮ್ಮುಖ ವಹಿಸಿದ್ದ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ ಮಾತನಾಡಿ, ಕುಂಬಾರ ಗುಂಡಯ್ಯ ದಂಪತಿಗಳ ವ್ಯಕ್ತಿತ್ವ ಅನ್ಯೋನ್ಯತೆಯಿಂದ ಕೂಡಿದ್ದು ತಮ್ಮ ವಿಶೇಷ ಕೌಶಲ್ಯದಿಂದ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದರು. ಹದವಾದ ಮಣ್ಣಿನಿಂದ ನಾಜೂಕಾದ ವಿಶೇಷ ವಸ್ತುಗಳನ್ನು ತಯಾರು ಮಾಡುತ್ತಿದ್ದರು. ಗುಂಡಯ್ಯನವರು ತಯಾರಿಸುತ್ತಿದ್ದ ಮಡಿಕೆ, ಕುಡಿಕೆ, ಇತರ ವಸ್ತುಗಳಿಗೆ ಪತ್ನಿ ಕೇತಲಾದೇವಿ ಅದಕ್ಕೆ ಒಪ್ಪುವ ಚಿತ್ರಗಳನ್ನು ಆಕರ್ಷಕವಾಗಿ ಚಿತ್ರಿಸುತ್ತಿದ್ದರು. ಇವರದು ಆದರ್ಶ ಕುಟುಂಬವಾಗಿತ್ತೆಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಕುಂಬಾರ ಸಮಾಜದ ತಿಪ್ಪೇಸ್ವಾಮಿ, ವೈ.ಮೃತ್ಯುಂಜಯ, ತಿಪ್ಪೇರುದ್ರಪ್ಪ, ಸುನಿಲ್‌ಕುಮಾರ್, ಬಯಲಮ್ಮ, ಬಸವೇಶ್ವರ ವಿದ್ಯಾಸಂಸ್ಥೆಯ ಶಂಕರಪ್ಪ ಕೋಣನವರ, ಪೈಲ್ವಾನ್ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಎಸ್‌ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ಕೆಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಡಾ.ಎಂ.ಆರ್.ಚಿದಾನಂದಪ್ಪ ಸ್ವಾಗತಿಸಿದರು. ಇತಿಹಾಸ ಪ್ರಾಧ್ಯಾಪಕ ಪ್ರೊ.ವಿಶ್ವನಾಥ್ ನಿರೂಪಿಸಿದರು. ಕನ್ನಡ ಉಪನ್ಯಾಸಕ ಡಾ.ಸಂತೋಷ ಶರಣು ಸಮರ್ಪಣೆ ನೆರವೇರಿಸಿದರು.