ಪಿಜಿಗಳಿಗೆ ಪೊಲೀಸರಿಂದ ಮಾರ್ಗಸೂಚಿ

| Published : Jan 28 2024, 01:18 AM IST

ಸಾರಾಂಶ

ಬೆಂಗಳೂರು ನಗರದ ಪಿಜಿಗಳಿಗೆ ನಗರ ಪೊಲೀಸರು ಮಾರ್ಗಸೂಚಿ ನೀಡಿದ್ದಾರೆ. ಪಿಜಿಗಳಲ್ಲಿ ಬಂದು ನೆಲೆಸುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುರಕ್ಷತೆ ಸಲುವಾಗಿ ನಗರದಲ್ಲಿರುವ ಪೇಯಿಂಗ್ ಗೆಸ್ಟ್‌ (ಪಿಜಿ) ಕೇಂದ್ರಗಳಿಗೆ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.

ಈ ಬಗ್ಗೆ ಶನಿವಾರ ತಮ್ಮ ಎಕ್ಸ್‌ ಖಾತೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಪೋಸ್ಟ್ ಮಾಡಿದ್ದು, ಪಿಜಿಗಳ ಮಾಲಿಕರಿಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಾಲಂ 34 (ಡಿ) ಮತ್ತು 70 ಅನ್ವಯ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಮಾರ್ಗಸೂಚಿ ವಿವರ:

ಪಿಜಿ ಆರಂಭಿಸಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ವಾಸಕ್ಕೆ ಬರುವ ಎಲ್ಲ ವ್ಯಕ್ತಿಗಳ ಗುರುತಿನ ಚೀಟಿ ಹಾಗೂ ಇತ್ತೀಚಿನ ಭಾವಚಿತ್ರ ಮತ್ತು ರಕ್ತ ಸಂಬಂಧಿಗಳ ವಿವರ, ಮೊಬೈಲ್ ಸಂಖ್ಯೆ ಗಣಕೀಕೃತ ದಾಖಲಾತಿ ಮತ್ತು ಭೇಟಿ ನೀಡಲು ಬರುವ ಸಂಬಂಧಿಕರ ಮತ್ತು ಸಾರ್ವಜನಿಕರ ವಿವರ ಪ್ರತ್ಯೇಕವಾಗಿ ನಿರ್ವಹಿಸಬೇಕು. ಸಿಸಿಟಿವಿ ಅಳವಡಿಕೆ ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು, ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು. ಪೊಲೀಸ್-112, ವೈದ್ಯಕೀಯ- 03 ಹಾಗೂ ಸೈಬರ್‌-1930 ಸಹಾಯವಾಣಿ ಕೇಂದ್ರಗಳ ದೂರವಾಣಿಯನ್ನು ಫಲಕದಲ್ಲಿ ಪ್ರಕಟಿಸಬೇಕು.

ಪ್ರಾಥಮಿಕ ವೈದ್ಯಕೀಯ ಚಿಕಿತ್ಸಾ ಕಿಟ್‌ ಇಡಬೇಕು. ಅಡುಗೆ, ಕಾವಲುಗಾರ ಸೇರಿದಂತೆ ಇತರರ ಪೂರ್ವಾಪರ ಮಾಹಿತಿಯನ್ನು ಪೊಲೀಸರ ಪರಿಶೀಲನೆ ಬಳಿಕ ನೇಮಿಸಿಕೊಳ್ಳಬೇಕು. ಈ ಸಿಬ್ಬಂದಿಯಿಂದ ಪೂರ್ವಾಪರ ದೃಢೀಕರಣ ದಾಖಲೆಗಳನ್ನು ಸಂಗ್ರಹಿಸಬೇಕು. ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ವಾಸಕ್ಕೆ ಪ್ರವೇಶ ಪಡೆದಿರುವವರ ಹೊರತುಪಡಿಸಿ ಇತರರಿಗೆ ತಾತ್ಕಾಲಿಕ ವಾಸ ಕಲ್ಪಿಸಬಾರದು. ನ್ಯಾಯಾಲಯದ ಆದೇಶದನ್ವಯದ ರಾತ್ರಿ 10ರಿಂದ ಬೆಳಗ್ಗೆ 6 ವರೆಗೆ ಧನ್ವಿವರ್ಧಕ ಬಳಸುವಂತಿಲ್ಲ.ಪಿ.ಜಿಗಳಲ್ಲಿ ಸುರಕ್ಷತಾ ಕ್ರಮ ಕಲ್ಪಿಸದೆ ಅಹಿತಕರ ಘಟನೆಗಳು ಸಂಭವಿಸಿದರೆ ಪಿಜಿ ಮಾಲಿಕ ಸೇರಿ ಸಂಬಂಧಪಟ್ಟವರೇ ಹೊಣೆಗಾರರು. ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು.

-ರಮಣ ಗುಪ್ತಾ, ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ), ಬೆಂಗಳೂರು