ಮತದಾರರನ್ನ ವಿಶ್ವಾಸಕ್ಕೆ ಪಡೆಯಲು ಎಡವಿದರಾ ಗುಲ್ಬರ್ಗ ಬಿಜೆಪಿ ಮುಖಂಡರು

| Published : Jun 06 2024, 12:30 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರೇ ಕಲಬುರಗಿಗೆ ಬಂದು ದೇಶದ ಲೋಕ ಕದನದ ರಣಕಹಳೆ ಕಲಬುರಗಿಯಲ್ಲೇ ಮೊಳಗಿಸಿದ್ದರೂ ಕೂಡಾ ಲೋಕಲ್‌ ಬಿಜೆಪಿ ಸಂಘಟನೆ ಮೋದಿ ಅಲೆಯನ್ನ ತನ್ನ ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಡವಿತು ಯಾಕೆ?

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಲೋಕ ಸಮರದಲ್ಲಿ ಕಮಲ ಮುದುಡಿತು ಹೇಗೆ?

ಪ್ರಧಾನಿ ನರೇಂದ್ರ ಮೋದಿಯವರೇ ಕಲಬುರಗಿಗೆ ಬಂದು ದೇಶದ ಲೋಕ ಕದನದ ರಣಕಹಳೆ ಕಲಬುರಗಿಯಲ್ಲೇ ಮೊಳಗಿಸಿದ್ದರೂ ಕೂಡಾ ಲೋಕಲ್‌ ಬಿಜೆಪಿ ಸಂಘಟನೆ ಮೋದಿ ಅಲೆಯನ್ನ ತನ್ನ ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಡವಿತು ಯಾಕೆ?

ಮಳೆ ನಿಂತರೂ ಮರದಿಂದ ಮಳೆ ಹನಿ ಉದುರೋದು ನಿಲ್ಲೋದಿಲ್ಲ ಎಂಬ ಮಾತಿನಂತೆ ಚುನಾವಣೆ, ಮತ ಎಣಿಕೆ ಎಲ್ಲಾ ಮುಗಿದರೂ ರಾಜಕೀಯ ಚರ್ಚೆ ಮಾತ್ರ ನಿಂತಿಲ್ಲ, ಕಲಬುರಗಿ ಲೋಕ ಕದನದ ಫಲಿತಾಂಶ ಹೊರಬಿದ್ದ ನಂತರದಲ್ಲಿ ಕ್ಷೇತ್ರಾದ್ಯಂತ ಚರ್ಚೆಗಳು ಸಾಗಿವೆ.

ಮತದಾರರೇ ಜೋಶ್‌ನಲ್ಲಿದ್ದರೂ ಕೂಡಾ ನೇತಾರರು ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಲಿಲ್ಲವೆಂದು ಕಾಂಗ್ರೆಸ್‌ಗೆ ಅಷ್ಟೇನೂ ಲೀಡ್‌ ಬಾರದ್ದನ್ನು ಕಂಡು ಬಿಜೆಪಿ ಸೋಲನ್ನು ವಿಶ್ಲೇಷಣೆ ಮಾಡುತ್ತಿದ್ದರೆ, ಇನ್ನು ಹಲವರು ಲೀಡರ್‌ಗಳ ಒಳಗೊಳ್ಳುವಿಕೆ ಈ ಚುನಾವಣೆಯಲ್ಲಿ ಅಷ್ಟಾಗಿ ಕಾಣಲೇ ಇಲ್ಲ ಎಂದು ತಾವು ಕಂಡ, ಕೇಳಿದ ಅನೇಕ ಸಂಗತಿಗಳನ್ನು ಹೇಳುತ್ತ ಪರಸ್ಪರ ಚರ್ಚೆಯಲ್ಲಿದ್ದಾರೆ.

ರಾಮ ಮಂದಿರ ನಿರ್ಮಾಣದ ಪರಿಣಾಮ ಕಲಬುರಗಿಯಲ್ಲಿ ಬೇರುಮಟ್ಟ ತಲುಪಿದ್ದರೂ ಬಿಜೆಪಿ ಇದನ್ನ ಮತಗಳನ್ನಾಗಿ ಪರಿವರ್ತಿಸುವಲ್ಲಿ ಎಡವಿತು, ಅತಿಯಾದ ವಿಶ್ವಾಶದಲ್ಲಿದ್ದು ಗೆದ್ದೇ ಗೆಲ್ಲುತ್ತೇವೆಂದು ಬೀಗಿದ್ದೇ ಆ ಪಕ್ಷದ ಸೋಲಿಗೆ ಕಾರಣವಾಯ್ತು ಎಂದೂ ಅನೇಕರು ಹೇಳುತ್ತಿದ್ದಾರೆ.

ಕ್ಷೇತ್ರದಾದ್ಯಂತ ಇರುವ ಅಭ್ಯರ್ಥಿ ಜಾಧವ್‌ ಪ್ರತಿನಿಧಿಸುವ ಬಂಜಾರಾ ಸಮಾಜದ ಮತಗಳ ಕಟ್ಟು ಇಡಿಯಾಗಿ ಕಮಲ ಮುಡಿಯುತ್ತದೆ ಎಂದು ಅಭ್ಯರ್ಥಿ ಸೇರಿದಂತೆ ಬಿಜೆಪಿಯ ಎಲ್ಲಾ ಮುಖಂಡರ ಅತಿ ವಿಶ್ವಾಸವೂ ಕೈ ಕೊಟ್ಟಿತು. ಜಿಲ್ಲೆಯ ತಾಂಡಾಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷವೂ ಕಮಲಕ್ಕ ಸರಿ ಸಮನಾಗಿ ಮತ ಗಳಿಸಿರೋದರಿಂದಾಗಿ ಈ ಬಾರಿ ಬಂಜಾರಾ ಮತಗಳು ಒಕ್ಕಟ್ಟಾಗಿರಿಸಿಕೊಳ್ಳುವಲ್ಲಿಯೂ ಬಿಜೆಪಿ ಪಕ್ಷ, ಹುರಿಯಾಳು ಎಡವಿದರು ಎಂಬ ಚರ್ಚೆಗಳು ಸಾಗಿವೆ.

ಬಂಜಾರಾ ಮತಗಳ ಜೊತೆಗೇ ಮೇಲ್ವರ್ಗದ ಮತಗಳನ್ನು ಸೆಳೆದರೆ ಸಾಕೆಂಬ ಬಿಜೆಪಿ ಇಲ್ಲಿನ ಸರಳ ಗಣಿತ ಕೈ ಕೊಟ್ಟಿದೆ. ಕಾಂಗ್ರೆಸ್‌ನ ಹುರಿಯಾಳು ರಾಧಾಕೃಷ್ಣ ಎಲ್ಲಾ ಜಾತಿ ಜನ ಸಮೂಹದಲ್ಲಿ ಹೊಂದಿರುವ ವೈಯಕ್ತಿಕ ಸಂಪರ್ಕವೇ ಇಂದು ಅವರನ್ನು ಗೆಲುವಿನ ಸೋಪಾನಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಗುಟ್ಟೇನಲ್ಲ.

ಪ್ರಚಾರದಲ್ಲಿರಲಿಲ್ಲ ಸಂಘಟನೆ- ಶಿಸ್ತು: ಈ ಬಾರಿ ಇಲೆಕ್ಷನ್‌ ಮಾಡಿದವ್ರು ಕಾಂಗ್ರೆಸ್‌ನವರು, ಬಿಜೆಪಿಯವರ ಪ್ರಚಾರದಲ್ಲಿ ಕಳೆದ ಇಲೆಕ್ಷನ್‌ನಲ್ಲಿ ಕಂಡ ಶಿಸ್ತು, ಒಗ್ಗಟ್ಟಿನ ಪ್ರಚಾರ ಕಾಣಲೇ ಇಲ್ಲವೆಂದು ಮತದಾರರೇ ಹೇಳುತ್ತಿರೋದು ನೋಡಿದರೆ ಬಿಜೆಪಿ ಈ ಬಾರಿ ಇಲ್ಲಿ ಆರಂಭದಿಂದಲೇ ಎಡವಿದ್ದು ಸ್ಪಷ್ಟ.

ಪುನರಾಯ್ಕೆ ಬಯಸಿದ್ದ ಡಾ. ಉಮೇಶ ಜಾಧವ್‌ ಜಾಗದಲ್ಲಿ ಟಿಕೆಟ್‌ ಬೇರಾರೂ ಬಯಸದೆ ಇದ್ದರೂ ಕೂಡಾ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಆಕಾಂಕ್ಷಿಯಾಗಿದ್ದಲ್ಲದೆ ಕೊನೆ ಹಂತದಲ್ಲಿ ಅವರ ಹೆಸರೂ ಚರ್ಚೆಗೆ ಬಂದಿತ್ತು.

ಅದನ್ನೆಲ್ಲ ಬದಿಗೊತ್ತಿ ಹೈಕಮಾಂಡ್‌ ಜಾಧವ್‌ ಪುನರಾಯ್ಕೆಗೆ ಅವಕಾಶ ನೀಡಿತ್ತಾದರೂ ಸ್ಥಳೀಯ ಬಿಜೆಪಿ ಸಂಘಯನೆ ಈ ಅವಕಾಶ ಬಳಸಿಕೊಂಡು ಗೆಲ್ಲುವಲ್ಲಿ ಸಂಪೂರ್ಣ ಎಡವಿದ್ದು ಸ್ಪಷ್ಟ. ಕಳೆದ ಬಾರಿಯಂತೆ ಈ ಚುನಾವಣೆಯಲ್ಲಿ ಕೋಮು, ಜಾತಿವಾರು ಯಾವುದೇ ಸಭೆಗಳು, ಸಮಾವೇಶಗಳು ಬಿಜೆಪಿಯಲ್ಲಿ ಕಾಣಲೇ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‌ನಲ್ಲಿ ಇಂತಹ ಸಭೆಗಳು ಹೆಚ್ಚು ನಡೆದವು.

ಪುನರಾಯ್ಕೆ ಪಕ್ಷದಲ್ಲೇ ಬೇಡವಾಗಿತ್ತೆ?: ಉಮೇಶ ಜಾದವರನ್ನ ಸಂಸತ್ತಿಗೆ ಪುನಃ ಕಳುಹಿಸುವಲ್ಲಿ ಪಕ್ಷದ ಹಲವು ಸ್ತರಗಳಲ್ಲಿರುವ ಮುಖಂಡರಿಗೆ ಬೇಡವಾಗಿತ್ತೆ? ಇಂತಹದ್ದೊಂದು ಚರ್ಚೆ ಸಾಗಿದೆ. 2019 ರಲ್ಲಿ ಬಿಜೆಪಿಗೆ ಇದ್ದಂತಹ ಅನುಕೂಲಕರ ವಾತಾವರಣ ಈ ಬಾರಿ ಇಲ್ಲದೆ ಹೋದರೂ ಕೂಡಾ ಮತದಾರರಂತೂ ಕ್ಷೇತ್ರಾದ್ಯಂತ ಇದ್ದರು. ಮತದಾರರ ನಾಡಿ ಮಿಡಿತ ಅರಿಯುವಲ್ಲಿ ಪಕ್ಷ ಎಡವಿದ್ದೇ ಸೋಲಿಗೆ ಕಾರಣವಾಯ್ತು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌, ಬಾಬೂರಾವ ಚಿಂಚನ್ಸೂರ್‌, ವಿಶ್ವನಾಥ ಪಾಟೀಲ್‌ ಹೆಬ್ಬಾಳ ಸೇರಿದಂತೆ ಅನೇಕ ಮುಖಂಡರು ಬಿಜೆಪಿಯಿಂದ ದೂರವಾಗಿ ಕೈ ಹಿಡಿದದ್ದು ಬಿಜೆಪಿ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಆದರೆ ಪಕ್ಷದಲ್ಲಿದ್ದವರು ಒಂದಾಗಿ ಬಿರುಸಿನಿಂದ ಮುಂದಡಿ ಇಟ್ಟಿದ್ರೆ ಇದನ್ನು ಸಮರ್ಥವಾಗಿ ಎದುರಿಸಬಹುದಿತ್ತೇನೋ?

ಅಭಿವೃದ್ಧಿ ಮರೀಚಿಕೆ ಆರೋಪ: ಖರ್ಗೆಯವರ ಸೋಲಾದ ನಂತರದಲ್ಲಿ ಕೇಂದ್ರ ಕಲಬುರಗಿಯತ್ತ ಕಡೆಗಣ್ಣ ನೋಟ ಹರಿಸುತ್ತಿದೆ. ಪ್ರಗತಿ ಮರೀಚಿಕೆಯಾಗಿದೆ, ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳಿಲ್ಲಿ ಕೈಗೂಡಿಲ್ಲ. ವಿಭಾಗೀಯ ರಲ್ವೆ ಯೋಜನೆ, ಏಮ್ಸ್‌ , ಟೆಕ್ಸಟೈಲ್‌ ಪಾರ್ಕ್‌, ಸೇರಿದಂತೆ ಅನೇಕ ಯೋಜನೆಗಳು ಕಲಬುರಗಿಗೆ ಎಟುಕಿಲ್ಲವೆಂಬ ಇಲ್ಲಿನ ಜನಾಕ್ರೋಶ ಜಾಧವ ಚೆನ್ನಾಗಿ ಅರಿತಿದ್ದರೂ ಕೂಡಾ ತಮಗೆ ದೊರಕಿದ 5 ವರ್ಷಗಳ ಕಾಲಾವಧಿಯಲ್ಲಿ ಇಂತಹ ಯೋಜನೆಗಳ ಬಗ್ಗೆ ಆಸಕ್ತಿ ತೋರಿ ಅವು ಕೈಗೂಡುವಂತೆ ಮಾಡಡದೆ ಕಡೆಗಣಿಸದರು ಎಂಬ ಅಸಮಧಾನವೂ ಕ್ಷೇತ್ರಾದ್ಯಂತ ಮಡುಗಟ್ಟಿತ್ತು. ಕಾಂಗ್ರೆಸ್‌ ಇದನ್ನೇ ತನ್ನ ಪ್ರಚಾರದ ಸರಕಾಗಿಸಿಕೊಂಡು ಅವಕಾಶ ಸಿಕ್ಕಾಗೆಲ್ಲ ಜಾಧವ್‌, ಬಿಜೆಪಿಗೆ ಟೀಕಿಸಿತ್ತು. ಇದೂ ಬಿಜೆಪಿ ಸೋಲಿನ ಕಾರಣಗಳಲ್ಲಿ ಪ್ರಮುಖ ಸಂಗತಿಯಾಯ್ತು.

8 ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದ ಕಲಬುರಗಿ ಗ್ರಾಮೀಣ ಏಕೈಕ ಕ್ಷೇತ್ರದಲ್ಲೂ ಕಾಂಗ್ರೆಸ್‌ ಮೈಲುಗೆ ಸಾಧಿಸಿದ್ದು ನೋಡಿದರೆ ಜಿಲ್ಲೆಯ ಲೋಕಲ್‌ ಮುಖಂಡರ ಒಳಗೊಳ್ಳುವಿಕೆ ಸದರಿ ಚುನಾವಣೆಯಲ್ಲಿ ಅದೆ।್ಟಿತ್ತು ಎಂಬುದನ್ನ ಯಾರಾದರೂ ಊಹಿಸಬಹುದಾಗಿದೆ ಎಂದು ಮತದಾರರು ಆಡಿಕೊಳ್ಳುತ್ತಿದ್ದಾರೆ.

ರೇಲ್ವೆ ಬೇಡಿಕೆಗೆ ಮುಂಚೆಯೇ ಸ್ಪಂದಿಸಬಹುದಿತ್ತಲ್ಲವೆ?

ಕಲಬುರಗಿಯಿಂದ ಬೆಂಗಳೂರಿಗೆ ರೇಲ್ವೆ ಸವಲತ್ತಿಲ್ಲ, ಎಲ್ಲೆಂದರಲ್ಲಿ ಕುಳಿತು ಪ್ರಯಾಣಿಸೋದು ದುಸ್ತರವಾಗಿರೋದು ಎಲ್ಲರಿಗೂ ಗೊತ್ತಿರೋ ಸಂಗತಿ. ರೇಲ್ವೆ ಬೇಡಿಕೆ ಬಗಗ್ಗೆ ಜನ ಆಗಾಗ ಧ್ವನಿ ಎತ್ತುತ್ತಿರೋದನ್ನ ಮನಗಂಡು ಡಾ. ಜಾಧವ್‌ ತಮ್ಮ ಅವಧಿಯಲ್ಲಿ ಬೇಗ ಸ್ಪಂದಿಸಲೇ ಇಲ್ಲ. ಇನ್ನೇನು ಲೋಕಸಬೆ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾದಾಗ ವಂದೇ ಭಾರತ ರೈಲು ಕಲಬುರಗಿಯಿಂದ ಓಡಿಸಿದರೂ ಅದು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರೇಲ್ವೆ ಸಂಬಂಧಿ, ಹೆದ್ದಾರಿ ಸಂಬಂಧಿ ಹಲವು ಬೇಡಿಕಗಳಿದ್ದರೂ ಸ್ಪಂದನೆ ಜನರ ನಿರೀಕ್ಷೆಗೆ ತಕ್ಕಂತೆ ಕಾಣದೆ ಹೋದಾಗ ಜನ ಭ್ರಮನಿರಸನಗೊಂಡಿರೋದನ್ನ ಅನೇಕ ಸಂದರ್ಭಗಳಲ್ಲಿ ಎತ್ತಿ ತೋರಿಸಿದ್ದರೂ ಬಿಜೆಪಿ ಎಚ್ಚೆತ್ತು ಕಲಬುರಗಿಯತ್ತ ನೋಡದ ಬೆಳವಣಿಗೆ ಜನಮನ ಘಾಸಿಗೊಳಿಸಿತ್ತು.ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಕಾರ್ಯಕರ್ತರು ಪೂರ್ಣ ಸಹಕಾರ ನೀಡಿದ ಪರಿಣಾಮವಾಗಿ ಇಷ್ಟು ಮತಗಳನ್ನು ಗಳಿಸಲು ಸಾಧ್ಯವಾಗಿದೆ. ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಬೆಂಬಲ ನೀಡಿದ ಮತದಾರರಿಗೆ ಮತ್ತು ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲು ಗೆಲುವಿನ ಸೋಪಾನ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಮಾಡಿ ಬರುವ ಚುನಾವಣೆಗಳನ್ನು ಪ್ರಾಮಾಣಿಕವಾಗಿ ಗೆಲ್ಲುವ ಪ್ರಯತ್ನ ಮಾಡೋಣ.

- ಡಾ. ಉಮೇಶ ಜಾಧವ್‌, ಮಾಜಿ ಸಂಸದರು, ಕಲಬುರಗಿ