: ಟೈಮ್ಸ್ ಹೈಯರ್ ಎಜುಕೇಶನ್ (THE) ಬಿಡುಗಡೆ ಮಾಡಿರುವ 2027ರ ವಿಶ್ವ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ಅಂತಾರಾಷ್ಟ್ರೀಯ ದೃಷ್ಟಿಕೋನ (International Outlook) ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ತುಂಬೆ ಗ್ರೂಪ್‌ನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿರುವ GMU, ಈ ವಿಭಾಗದಲ್ಲಿ 99.4 ಅಂಕ ಗಳಿಸಿದ್ದು, 118 ದೇಶಗಳು ಹಾಗೂ ಪ್ರದೇಶಗಳ ಒಟ್ಟು 2,297 ವಿಶ್ವವಿದ್ಯಾಲಯಗಳ ಪೈಕಿ ಅತ್ಯುನ್ನತ ಸ್ಥಾನ ಪಡೆದಿದೆ. ಯುಎಇ ಮಟ್ಟದಲ್ಲಿಯೂ ಅಂತಾರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ GMU ನಂ.1 ಸ್ಥಾನ ಗಳಿಸಿದೆ.

ಮಂಗಳೂರು: ಟೈಮ್ಸ್ ಹೈಯರ್ ಎಜುಕೇಶನ್ (THE) ಬಿಡುಗಡೆ ಮಾಡಿರುವ 2027ರ ವಿಶ್ವ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ಅಂತಾರಾಷ್ಟ್ರೀಯ ದೃಷ್ಟಿಕೋನ (International Outlook) ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ತುಂಬೆ ಗ್ರೂಪ್‌ನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿರುವ GMU, ಈ ವಿಭಾಗದಲ್ಲಿ 99.4 ಅಂಕ ಗಳಿಸಿದ್ದು, 118 ದೇಶಗಳು ಹಾಗೂ ಪ್ರದೇಶಗಳ ಒಟ್ಟು 2,297 ವಿಶ್ವವಿದ್ಯಾಲಯಗಳ ಪೈಕಿ ಅತ್ಯುನ್ನತ ಸ್ಥಾನ ಪಡೆದಿದೆ. ಯುಎಇ ಮಟ್ಟದಲ್ಲಿಯೂ ಅಂತಾರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ GMU ನಂ.1 ಸ್ಥಾನ ಗಳಿಸಿದೆ.

THE ವಿಶ್ವ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ಗೆ GMU ಇದೇ ಮೊದಲ ಬಾರಿಗೆ ಪ್ರವೇಶಿಸಿದ್ದು, ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ 1001-1200ರ ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿದೆ. 2027ರ ಆವೃತ್ತಿಯಲ್ಲಿ ಸ್ಥಾನ ಪಡೆದಿರುವ ಯುಎಇಯ ಏಕೈಕ ವಿಶೇಷ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯನ್ನೂ GMU ಪಡೆದಿದೆ.

THE ವಿಶ್ವವಿದ್ಯಾಲಯಗಳನ್ನು ಮೌಲ್ಯಮಾಪನ ಮಾಡುವ ಐದು ಪ್ರಮುಖ ಮಾನದಂಡಗಳ ಪೈಕಿ ಅಂತಾರಾಷ್ಟ್ರೀಯ ದೃಷ್ಟಿಕೋನವೂ ಒಂದಾಗಿದೆ. ವಿಶ್ವವಿದ್ಯಾಲಯದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ, ವಿವಿಧ ದೇಶಗಳ ಬೋಧಕ ಸಿಬ್ಬಂದಿ ಹಾಗೂ ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ಪ್ರಕಟವಾಗುವ ಸಂಶೋಧನಾ ಲೇಖನಗಳ ಪ್ರಮಾಣವನ್ನು ಈ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.

115ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು:

ಅಜ್ಮಾನ್‌ನಲ್ಲಿರುವ GMU ಕ್ಯಾಂಪಸ್‌ನಲ್ಲಿ ಪ್ರಸ್ತುತ 115ಕ್ಕೂ ಹೆಚ್ಚು ರಾಷ್ಟ್ರೀಯತೆಗಳ ವಿದ್ಯಾರ್ಥಿಗಳು ಹಾಗೂ 56 ದೇಶಗಳ ಬೋಧಕ ಸಿಬ್ಬಂದಿ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತುಂಬೆ ಗ್ರೂಪ್‌ನ ಶೈಕ್ಷಣಿಕ ಆಸ್ಪತ್ರೆಗಳು ಹಾಗೂ ಜಾಗತಿಕ ಸಂಶೋಧನಾ ಸಹಭಾಗಿತ್ವಗಳ ಮೂಲಕ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ತರಬೇತಿ ಮತ್ತು ಅನುಭವ ಒದಗಿಸಲಾಗುತ್ತಿದೆ.

GMU ಕುಲಪತಿ ಪ್ರೊ. ಮಂಡಾ ವೆಂಕಟ್ರಮಣ ಮಾತನಾಡಿ, THE ವಿಶ್ವ ರ‍್ಯಾಂಕಿಂಗ್‌ಗೆ ಮೊದಲ ಬಾರಿಗೆ ಪ್ರವೇಶಿಸಿ ಅಂತಾರಾಷ್ಟ್ರೀಯ ದೃಷ್ಟಿಕೋನದಲ್ಲಿ ವಿಶ್ವದಲ್ಲೇ ನಂ.1 ಸ್ಥಾನ ಪಡೆದಿರುವುದು ಸಂಸ್ಥೆಯ ಜಾಗತಿಕ ಸ್ವರೂಪಕ್ಕೆ ಸಾಕ್ಷಿಯಾಗಿದೆ. ಆರೋಗ್ಯ ಸೇವೆಗೆ ಗಡಿಗಳಿಲ್ಲದಂತೆ ಶಿಕ್ಷಣಕ್ಕೂ ಗಡಿಗಳಿಲ್ಲ. ಈ ಸಾಧನೆ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಪಾಲುದಾರರು ಹಾಗೂ ಜಾಗತಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವ ಯುಎಇಗೆ ಸಲ್ಲುತ್ತದೆ ಎಂದು ಹೇಳಿದರು.

ಗುಣಮಟ್ಟ ಭರವಸೆ ಮತ್ತು ಸಾಂಸ್ಥಿಕ ಪರಿಣಾಮಕಾರಿತ್ವ ವಿಭಾಗದ ಡೀನ್ ಪ್ರೊ. ಅಮ್ಮಾರ್ ಅಲ್‌ಮಾಯ್ತಾ ಮಾತನಾಡಿ, 99.4 ಅಂಕ ಆಕಸ್ಮಿಕ ಸಾಧನೆಯಲ್ಲ. ವಿಶ್ವದ ವಿವಿಧ ಭಾಗಗಳಿಂದ ಪ್ರತಿಭಾವಂತರನ್ನು ಆಕರ್ಷಿಸುವುದು, ಅಂತಾರಾಷ್ಟ್ರೀಯ ಸಂಶೋಧನಾ ಸಹಯೋಗಗಳನ್ನು ಬೆಳೆಸುವುದು ಮತ್ತು ಜಾಗತಿಕ ಗುಣಮಟ್ಟವನ್ನು ಅಳವಡಿಸಿಕೊಳ್ಳುವ ನಿರಂತರ ಪ್ರಯತ್ನದ ಫಲಿತಾಂಶವಾಗಿದೆ ಎಂದು ಹೇಳಿದರು.

ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಬಯೋಮೆಡಿಕಲ್ ಸೈನ್ಸಸ್ ಹಾಗೂ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು GMU ನೀಡುತ್ತಿದೆ. ತುಂಬೆ ಗ್ರೂಪ್‌ನ ಶೈಕ್ಷಣಿಕ ಆಸ್ಪತ್ರೆಗಳ ಜಾಲದ ಮೂಲಕ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.