ಕೊಲ್ಲಿ ರಾಷ್ಟ್ರಗಳಲ್ಲಿ ಮಾರ್ಚ್‌ ತಿಂಗಳ ಆರಂಭದಿಂದಲೇ ನಡೆಯುತ್ತಿರುವ ಯುದ್ಧದಿಂದಾಗಿ ಇಡಿ ರಾಜ್ಯದಲ್ಲಿನ ಬಾಟಲಿ ನೀರಿನ ಬಿಸಿನೆಸ್‌ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಗ್ಯಾಸ್ ಸಿಲಿಂಡರ್‌ಗಳು, ಆಟೋಗಳಿಗೆ ತುಂಬಿಸುವ ಎಲ್‌ಪಿಜಿ ಗ್ಯಾಸ್ ಸೇರಿದಂತೆ ಹಲವು ಉದ್ಯಮಗಳಿಗೆ ಹೊಡೆತ ಬಿದ್ದಿದ್ದು, ಇದೀಗ ಇರಾನ್-ಇಸ್ರೇಲ್-ಅಮೇರಿಕಾ ಯುದ್ಧದ ಪರಿಣಾಮ ನೀರಿನ ಬಾಟಲ್‌ಗಳ ಮೇಲೆ ಬಿದ್ದಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕೊಲ್ಲಿ ರಾಷ್ಟ್ರಗಳಲ್ಲಿ ಮಾರ್ಚ್‌ ತಿಂಗಳ ಆರಂಭದಿಂದಲೇ ನಡೆಯುತ್ತಿರುವ ಯುದ್ಧದಿಂದಾಗಿ ಇಡಿ ರಾಜ್ಯದಲ್ಲಿನ ಬಾಟಲಿ ನೀರಿನ ಬಿಸಿನೆಸ್‌ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಗ್ಯಾಸ್ ಸಿಲಿಂಡರ್‌ಗಳು, ಆಟೋಗಳಿಗೆ ತುಂಬಿಸುವ ಎಲ್‌ಪಿಜಿ ಗ್ಯಾಸ್ ಸೇರಿದಂತೆ ಹಲವು ಉದ್ಯಮಗಳಿಗೆ ಹೊಡೆತ ಬಿದ್ದಿದ್ದು, ಇದೀಗ ಇರಾನ್-ಇಸ್ರೇಲ್-ಅಮೇರಿಕಾ ಯುದ್ಧದ ಪರಿಣಾಮ ನೀರಿನ ಬಾಟಲ್‌ಗಳ ಮೇಲೆ ಬಿದ್ದಿದೆ. ಯಾಕೆಂದರೆ ತಂಪು ಪಾನೀಯಗಳಿಗೆ ಬಳಸುವ ಪ್ಲಾಸ್ಟಿಕ್ ಬಾಟಲ್‌ ತಯಾರಿಕೆಗೆ ಬೇಕಿದ್ದ ಕಚ್ಚಾ ವಸ್ತುವಿನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ 250ಎಂಎಲ್, ಅರ್ಧ ಲೀಟರ್, ಒಂದು ಲೀಟರ್‌, ಎರಡು ಲೀಟರ್‌ ಬಾಟಲ್‌ ಗಳಲ್ಲಿನ ವಾಟರ್‌ ಬಿಸಿನೆಸ್‌ಗೆ ಕಂಟಕ ಶುರುವಾಗಿದೆ. ಅಲ್ಲಿನ ಭೀಕರ ಯುದ್ಧದ ಪರಿಣಾಮದಿಂದಾಗಿ ಬಾಟಲಿ ತಯಾರಿಕೆಗೆ ಕಚ್ಚಾಮಾಲು ಸಿಗದಿರುವುದರಿಂದ ಇಲ್ಲಿನ ಜಲ ಉದ್ಯೋಗದ ಮೇಲೆ ಬೀರುತ್ತಿದೆ. ಹೀಗಾಗಿ ಈ ಬಾರಿ ಬೇಸಿಗೆಯಲ್ಲಿ ನೀರು ಸೇರಿದಂತೆ ತಂಪು ಪಾನೀಯಗಳ ತಯಾರಕರು, ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಇದರ ಇದರ ಬಿಸಿ ತಟ್ಟಲಿದೆ.

ಶೇರ್ ಮಾರ್ಕೆಟನಂತೆ ಬೆಲೆಯಲ್ಲಿ ವ್ಯತ್ಯಾಸ:

ಯುದ್ದದ ಪರಿಣಾಮದಿಂದಾಗಿ ರಾಜ್ಯದಲ್ಲಿಯೂ ನೀರು ಉದ್ಯೋಗದಲ್ಲಿ ಪರಿಣಾಮ ದಿನದಿಂದ ದಿನಕ್ಕೆ ಕಾಣಿಸುತ್ತಿದೆ. ಶೇರ್ ಮಾರ್ಕೆಟ್‌ ಹಾಗೆ ಇದರಲ್ಲಿಯೂ ದಿನದಿಂದ ದಿನಕ್ಕೆ ಬೆಲೆ ಏರಿಕೆ ಆಗುತ್ತಿದೆ. ರಾ ಮಟಿರಿಯಲ್‌ಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದಿಂದ ನಿತ್ಯ ದರದಲ್ಲಿ ಬದಲಾವಣೆಯಾಗುತ್ತಿದೆ. ಯಾಕೆಂದರೆ ಕಚ್ಚಾ ಮಾಲಿನ ಬೆಲೆ ಏರಿಕೆಯಿಂದ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್‌ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದ್ದು, ಉತ್ಪಾದನೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿನ ಉದ್ಯೋಗಿಗಳಿಗೆ ಈ ಏರಿಕೆ ಸಹಿಸಲಾಗದ ಕಾರಣ ಅವರ ಉದ್ಯೋಗ ಈ ಬೇಸಿಗೆಯಲ್ಲಿ ನಿಂತುಹೋಗುವ ಭೀತಿಯಿದೆ.ನೀರಿನ ಬಾಟಲಿಗೆ ಬೇಕಾದ ಕಚ್ಚಾ ಮಾಲಿನಲ್ಲಿ ಏರಿಕೆ:

ಜಲ ಉದ್ಯೋಗಕ್ಕೆ ಅಗತ್ಯವಾಗಿ ಬೇಕಿರುವ ಕಚ್ಚಾ ಮಾಲಿನಲ್ಲಿ ಏರಿಕೆ ಆಗಿದ್ದು, ಒಂದು ಕೆಜಿ ಪ್ರಿ ಫಾರ್ಮ್‌ಗಳ ಬೆಲೆ 115 ರೂಪಾಯಿಗಳಿಂದ 170 ರೂಪಾಯಿಗಳಿಗೆ, ಕ್ಯಾಪ್‌ 20 ಪೈಸೆಗಳಿಂದ 45 ಪೈಸೆಗಳಿಗೆ, ಲೇಬಲ್‌ 300 ರೂಪಾಯಿಗಳಿಂದ 520 ರೂಪಾಯಿಗಳಿಗೆ, ಪುಠ್ಯಾ ಬಾಕ್ಸ್‌ 11 ರೂಪಾಯಿಗಳಿಂದ 15 ರೂಪಾಯಿಗಳಿಗೆ, ಶ್ರಿಂಕ್ ಫಿಲ್ಮ್‌ 118 ರೂಪಾಯಿಗಳಿಂದ 180 ರೂಪಾಯಿಗಳಿಗೆ ಮತ್ತು ಚಿಕಟ್ ಟೇಪ್‌(ಜಿಗಟಪಟ್ಟಿ) 280 ರೂಪಾಯಿಗಳಿಂದ 410 ರೂಪಾಯಿಗಳಿಗೆ ಏರಿಕೆ ಆಗಿದೆ.ನೀರಿನ ಬಾಟಲಿ ಬಾಕ್ಸ್‌ಗಳ ಮೇಲೆಯೂ ನಿರಂತರ ಬೆಲೆಯೇರಿಕೆ

ಯುದ್ದದ ಹಿನ್ನೆಲೆ ನೀರಿನ ಬಾಟಲ್‌ ತಯಾರಿಕೆಗೆ ಬೇಕಾದ ಕಚ್ಚಾಮಾಲು ತುಟ್ಟಿಯಾಗಿದ್ದರಿಂದ ಕಳೆದ ವಾರದಲ್ಲಿ ನೀರಿನ ಪ್ರತಿ ಬಾಕ್ಸ್‌ (ಒಂದು ಲೀಟರ್‌ನ 12 ಬಾಟಲಿಗಳು) ಬೆಲೆಯಲ್ಲಿ 10 ರೂಪಾಯಿಗಳ ಏರಿಕೆ ಆಗಿದ್ದು, ಈ ಏರಿಕೆ ಒಂದೇ ವಾರದಲ್ಲಿ 15 ರಿಂದ 25 ರೂಪಾಯಿಗಳಿಗೆ ಏರಿದೆ.ನೀರಿನ ಬಾಟಲಿ ಉದ್ಯಮದಲ್ಲಿ ಭೀತಿ

ರಾಜ್ಯದಲ್ಲಿನ ಕುಡಿಯುವ ನೀರಿನ ವ್ಯಾಪಾರಸ್ಥರ ಮಾಹಿತಿ ಪ್ರಕಾರ, ಇರಾನ್-ಇಸ್ರೇಲ್-ಅಮೇರಿಕಾ ಯುದ್ಧದಿಂದ ಬಾಟಲಿ ನೀರಿನ ಉದ್ಯೋಗಕ್ಕೆ ಅಗತ್ಯ ಕಚ್ಚಾ ಮಾಲಿನ ಪೂರೈಕೆ ಕಡಿಮೆಯಾಗುತ್ತಿದೆ. ಪ್ಯಾಕೇಜಿಂಗ್ ಸರಂಜಾಮು ಹಾಗೂ ಸಾಗಣೆ ವೆಚ್ಚದಲ್ಲಿಯೂ ಹೆಚ್ಚಳವಾಗಿದೆ. ಇದರಿಂದಾಗಿ ಒಂದೊಂದು ನೀರಿನ ಬಾಟಲಿ ಬಾಕ್ಸ್ ಗಳ ಮೇಲೆ 15ರಿಂದ 25 ರೂಪಾಯಿ ಬೆಲೆ ಏರಿಕೆಯಾಗಿದೆ. ಹೀಗೆಯೆ ಮುಂದುವರೆದರೆ ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಅಥವಾ ಕೊನೆಗೆ ಕಚ್ಚಾಮಾಲು ಸಿಗದೆ ನೀರಿನ ಉದ್ಯಮವೇ ನಿಲ್ಲುವ ಭೀತಿಯುಂಟಾಗಿದೆ.ಗಲ್ಫ್‌ ಕಂಟ್ರಿಗಳಲ್ಲಿನ ಯುದ್ದದ ಹಿನ್ನೆಲೆ ರಾಜ್ಯದಲ್ಲಿ ನೀರಿನ ಬಾಟಲಿ ಬಿಸಿನೆಸ್‌ ಮೇಲೆ ಹೊಡೆತ ಬಿದ್ದಿದೆ. ಈ ಮೊದಲು ನಾವು ಒಂದು ಲೀಟರ್‌ನ 12 ಬಾಟಲಿಗಳುಳ್ಳ ನೀರಿನ ಬಾಕ್ಸ್‌ಗೆ ಹೋಲಸೇಲ್‌ನಲ್ಲಿ ₹90 ರಂತೆ ಮಾರಾಟ ಮಾಡುತ್ತಿದ್ದೇವು. ಇದೀಗ ಕಚ್ಚಾಮಾಲಿನಲ್ಲಿ ಬೆಲೆ ಏರಿಕೆಯಾಗಿದ್ದರಿಂದ ಇದೀಗ ಒಂದು ಬಾಕ್ಸ್‌ಗೆ ಹೋಲಸೇಲ್‌ನಲ್ಲಿಯೇ ₹110ಕ್ಕೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಈ ಮೊದಲು ಗ್ರಾಹಕರಿಗೆ ₹20 ರೂಪಾಯಿಗೆ ಒಂದು ಲೀಟರ್ ಸಿಗುತ್ತಿದ್ದ ನೀರಿನ ಬಾಟಲಿ ಇದೀಗ 22ರೂ ಏರಿಕೆ ಆಗಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರು ಬೇಲೆ ಏರಿಕೆಯಿಂದಾಗಿ ವಾಗ್ವಾದ ಮಾಡದುತ್ತಿದ್ದು, ಯುದ್ಧದ ಹಿನ್ನೆಲೆಯ ಸಮಸ್ಯೆಯನ್ನರಿತು ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸುತ್ತೇವೆ.

-ಸಚಿನ ಕೋಲಕಾರ,

ವಾಟರ್‌ ಬಾಟಲ ಉದ್ಯಮಿ.