ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಇದೀಗ ವೈದ್ಯಕೀಯ ಕ್ಷೇತ್ರದ ಮೇಲೂ ಆಗುತ್ತಿದೆ. ಪೆಟ್ರೋಲಿಯಂ ಉಪ ಉತ್ಪನ್ನಗಳಿಂದ ತಯಾರಾಗುವ ಸಿರಿಂಜ್‌ ಉತ್ಪಾದನೆ ಕುಂಠಿತಗೊಂಡಿದ್ದು, ಮುಂದೆ ಮಾರುಕಟ್ಟೆಯಲ್ಲಿ ಸಿರಿಂಜ್‌ಗಳ ಅಭಾವ ಕಂಡು ಬರುವ ಲಕ್ಷಣಗಳು ದಟ್ಟವಾಗಿವೆ. ಇದರಿಂದ ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಸಿರಿಂಜ್‌, ನೀಡಲ್‌ ಹಾಗೂ ಐವಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ರೋಗಿಗೆ ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಕೊನೆಯವರೆಗೂ ಇವುಗಳ ಅತ್ಯಗತ್ಯ ಇದ್ದೇ ಇರುತ್ತದೆ. ಇವುಗಳ ತಯಾರಿಕೆಗೆ ಕ್ರೂಡ್‌ ಆಯಿಲ್‌ನಿಂದ ತಯಾರಾಗುವ ಪಾಲಿಪ್ರೊಪಿಲಿನ್‌ (ಪಿಪಿಎ) ಎಂಬ ಪೆಟ್ರೋಲಿಯಂನ ಉಪ ಉತ್ಪನ್ನ ಅಗತ್ಯವಿದೆ. ಗುಜರಾತ್‌ನ ಜಾಮ್‌ನಗರ ಹಾಗೂ ಪಾಣಿಪಥದಲ್ಲಿ ಪಾಲಿಪ್ರೊಪಿಲಿನ್‌ ತಯಾರಾಗಿ ದೇಶದ ವಿವಿಧೆಡೆ ಸರಬರಾಜಾಗುತ್ತದೆ. ಆದರೆ, ಕಳೆದ 20 ದಿನಗಳಿಂದ ಈ ಕಚ್ಚಾ ವಸ್ತು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಹೀಗಾಗಿ, ಸಿರಿಂಜ್‌ ಮತ್ತು ನೀಡಲ್‌, ಐವಿಗಳ ಉತ್ಪಾದನೆ ಕುಂಠಿತಗೊಂಡಿದೆ.

ಒಂದೇ ಶಿಫ್ಟ್‌:


ಮಾರುಕಟ್ಟೆಯಲ್ಲಿ ಡಿಸ್ಪೋವ್ಯಾನ್‌, ಸಿರಿಸೇಫ್‌ ಸೇರಿದಂತೆ ವಿವಿಧ ಬ್ರ್ಯಾಂಡ್‌ನ ಸಿರಿಂಜ್‌, ನೀಡಲ್‌ ಲಭ್ಯವಿವೆ. ಹುಬ್ಬಳ್ಳಿಯಲ್ಲಿ ಸಿರಿಸೇಫ್‌ ಎಂಬ ಬ್ಯ್ರಾಂಡ್‌ನ ಸಿರಿಂಜ್‌ ಹಾಗೂ ನೀಡಲ್‌ ಸಿದ್ಧಪಡಿಸಲಾಗುತ್ತಿದೆ. ಇಲ್ಲಿನ ಪಿಬಿ ರಸ್ತೆಯಲ್ಲಿರುವ ರಕ್ಷಂ ಮೆಡಿಕಲ್‌ ಡಿವೈಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಸಿರಿಂಜ್‌, ನೀಡಲ್‌ ತಯಾರಾಗುತ್ತವೆ. ರಾಜ್ಯದಲ್ಲಿ ಈ ಬ್ರ್ಯಾಂಡ್‌ನ ಸಿರಿಂಜ್‌ ಹಾಗೂ ನೀಡಲ್‌ ತಯಾರಾಗುವುದು ಹುಬ್ಬಳ್ಳಿಯಲ್ಲಿ ಮಾತ್ರ. ಇಲ್ಲಿಂದಲೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ರವಾನೆಯಾಗುತ್ತದೆ.

ಪ್ರತಿ ತಿಂಗಳಿಗೆ 150 ಟನ್‌ಗೂ ಅಧಿಕ ಪಾಲಿಪ್ರೊಪಿಲಿನ್‌ (ಪಿಪಿಎ) ಬೇಕಾಗಿದ್ದರೂ ಸದ್ಯಕ್ಕೆ ಸಿಗುತ್ತಿರುವುದು ಬರೀ 20-30 ಟನ್‌ ಮಾತ್ರ. ಪ್ರತಿನಿತ್ಯ 18 ಲಕ್ಷ ಸಿರಿಂಜ್‌ ಹಾಗೂ ನೀಡಲ್‌ ಉತ್ಪಾದನೆಯಾಗುತ್ತಿತ್ತು. ಆದರೆ, 15-20 ದಿನಗಳಿಂದ ಕಚ್ಚಾ ವಸ್ತು ಸಿಗದ ಕಾರಣ ಬರೀ 4 ಲಕ್ಷ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಮೂರು ಶಿಫ್ಟ್‌ನಲ್ಲಿ 300 ಕಾರ್ಮಿಕರು ಕೆಲಸದಲ್ಲಿ ತೊಡಗುತ್ತಿದ್ದರು. ಆದರೆ, ಉತ್ಪಾದನೆ ಕಡಿಮೆ ಆಗಿರುವುದರಿಂದ ಒಂದೇ ಶಿಫ್ಟ್‌ನಲ್ಲಿ 70-100 ಕಾರ್ಮಿಕರು ಮಾತ್ರ ಕೆಲಸದಲ್ಲಿ ತೊಡಗುತ್ತಿದ್ದಾರಂತೆ. ಉಳಿದ ಕಾರ್ಮಿಕರಿಗೆ ಸದ್ಯ ಸಂಬಳವೇನೂ ಕಟ್‌ ಮಾಡುತ್ತಿಲ್ಲ. ಆದರೆ, ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂದು ಕಂಪನಿ ಮಾಲೀಕರು ತಿಳಿಸುತ್ತಾರೆ.

ಅಭಾವ ಸಾಧ್ಯತೆ:

ಸದ್ಯಕ್ಕೇನೂ ಸಮಸ್ಯೆಯಿಲ್ಲ. ಉತ್ಪಾದನೆ ಕಡಿಮೆಯಾಗಿದ್ದರೂ ಇರುವ ಸ್ಟಾಕ್‌ನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಆದರೆ, ಇದು ಎಷ್ಟು ದಿನ ಸಾಧ್ಯ?. ಇನ್ನು, ಉತ್ತರ ಭಾರತದ ಹಲವು ರಾಜ್ಯಗಳ ಸಿರಿಂಜ್‌, ನೀಡಲ್‌, ಐವಿ ಸಿದ್ಧಪಡಿಸುವ ಕಾರ್ಖಾನೆಗಳಲ್ಲೂ ಉತ್ಪಾದನೆ ಶೇ.30ಕ್ಕಿಳಿದಿದೆ. ಅಲ್ಲಿಂದಲೂ ಸಮರ್ಪಕ ಸರಬರಾಜು ಆಗುತ್ತಿಲ್ಲ. ಈಗಲೇ ಕಚ್ಚಾ ವಸ್ತುಗಳಿಗೆ ಸಮಸ್ಯೆಯಾಗುತ್ತಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಇನ್ನೂ ತೊಂದರೆಯಾಗುತ್ತದೆ. ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉಪ ಉತ್ಪನ್ನಗಳಿಂದ ತಯಾರಾಗುವ ವೈದ್ಯಕೀಯ ಕ್ಷೇತ್ರದ ಅಗತ್ಯ ಪರಿಕರಗಳ ಅಭಾವ ಸೃಷ್ಟಿಯಾಗಬಹುದು. ಆಗ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂಬ ಆತಂಕ ಕಂಪನಿಯ ಅಧಿಕಾರಿ ವರ್ಗದ್ದು.ಕೋಟ್‌...

ಸಿರಿಸೇಫ್‌ ಎಂಬ ಬ್ರ್ಯಾಂಡ್‌ನ ಸಿರಿಂಜ್‌, ನೀಡಲ್‌ ಗಳನ್ನು ನಮ್ಮ ಫ್ಯಾಕ್ಟರಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಕರ್ನಾಟಕದಲ್ಲಿ ಈ ಬ್ಯ್ರಾಂಡ್‌ನ ಫ್ಯಾಕ್ಟರಿ ಇರುವುದು ಹುಬ್ಬಳ್ಳಿಯಲ್ಲಿ ಮಾತ್ರ. ಇಲ್ಲಿಂದಲೇ ದಕ್ಷಿಣ ಭಾರತದ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ.

- ವಿಶ್ವನಾಥ ಸೋಮಾಪುರ, ವ್ಯವಸ್ಥಾಪಕ ನಿರ್ದೇಶಕರು, ರಕ್ಷಂ ಮೆಡಿಕಲ್‌ ಡಿವೈಸ್‌ ಪ್ರೈ.ಲಿ.