ಸಾರಾಂಶ
ಶಿವಾನಂದ ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಉತ್ತರ ಕರ್ನಾಟಕದಲ್ಲಿ ಹಬ್ಬ, ಹರಿದಿನ, ಆಚರಣೆಗಳಿಗೆ ಬರವಿಲ್ಲ. ಕಾಲಕ್ಕೆ ತಕ್ಕಂತೆ ಆಚರಣೆಗಳು ರೂಢಿಯಲ್ಲಿವೆ. ಅವುಗಳಲ್ಲಿ ಗುಳ್ಳವ್ವನ ಹಬ್ಬವೂ ಒಂದು. ಮಂಗಳವಾರದಿಂದ ಪಟ್ಟಣದಲ್ಲಿ ಗುಳ್ಳವ್ವನ ಹಬ್ಬದ ಆಚರಣೆ ಜೋರಾಗಿತ್ತು.
ಒಂದರಿಷಿಣ ಒಂದರಿಷಣ..ಕ್ಯಾದಗಿ ಪರಿಮಳ..ಗುಳ್ಳವ್ವನ ಹೆಣ್ಮಕ್ಕಳು ಆಡುತ ಬಂದಾರ.. ಉತ್ತತ್ತಿ ಬನಕ ತೊಟ್ಟಿಲ ಕಟ್ಟಿ ಜಯವೊಂದ ಜಯವೊಂದ..., ಎಂಬ ಜನಪದೀಯ ಶೈಲಿಯ ಹಾಡುಗಳು ಆಷಾಢ ಮಾಸದ ನಾಲ್ಕು ಮಂಗಳವಾರಗಳಂದು ಉತ್ತರ ಕರ್ನಾಟಕದ ಬಾಲೆಯರ ಕಂಠದಿಂದ ಕೇಳಿ ಬರುತ್ತವೆ. ಇದು ಜಾನಪದ ಹಬ್ಬದ ಆಚರಣೆಯ ಪ್ರಮುಖ ಅಂಗವಾಗಿದೆ. ಈ ಆಚರಣೆಯ ಬಹು ಮುಖ್ಯ ಉದ್ದೇಶ ರೈತರು ಕೃಷಿ ಚಟುವಟಿಕೆಗಳ ಆರಂಭದ ಕಾಲದಲ್ಲಿ ಸಕಲ ಜೀವಿಗಳನ್ನು ಪೊರೆದು ಪೋಷಿಸುವ ಭೂದೇವಿಗೆ ಕೃತಜ್ಞತೆ ತುಂಬಿದ ಅರ್ಚನೆ ಸಲ್ಲಿಸುವುದೇ ಆಗಿದೆ.ಯಾಕೆ ಗುಳ್ಳವ್ವನ ಆಚರಣೆ?:
ಮಣ್ಣಿಂದ ಕಾಯ, ಮಣ್ಣಿಂದ ಸಕಲ ಸಂಪದವು ಎಂದು ಪ್ರಾಚೀನ ತತ್ವಜ್ಞಾನಿಗಳು ಹಾಡಿ, ಮಣ್ಣಿನ ಘನ ಸಿರಿವಂತಿಕೆಯನ್ನು ಮತ್ತು ಮಣ್ಣು ಜೀವನದ ಮೂಲಾಧಾರ ಎಂಬುದನ್ನು ಸ್ಪಷ್ಟಪಡಿಸಿದ್ದರು. ಮಣ್ಣಿಗೆ ಮಾತೃ ಸ್ಥಾನವವಿರುವುದಲ್ಲದೇ ನಿತ್ಯ ಮನುಕುಲವನ್ನು ತಾಯಿಯಂತೆ ಸಲುಹುವುದೆಂಬ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣಿನ ಪೂಜೆಗೆ ಮುಂದಾಗಿ ಕೃತಜ್ಞತೆ ಮತ್ತು ಗೌರವ ಸಲ್ಲಿಸುವುದಕ್ಕಾಗಿ ಕಾರ ಹುಣ್ಣಿಮೆ ಸಂದರ್ಭದಲ್ಲಿ ಮಣ್ಣಿನ ಬಸವನ ಪ್ರತಿಮೆ ಮಾಡಿ ಪೂಜಿಸಿದರೆ, ಆಷಾಢ ಮಾಸದಲ್ಲಿ ಗುಳ್ಳವ್ವನ ಪೂಜೆ, ಭಾದ್ರಪದ ಮಾಸದಲ್ಲಿ ಗಣೇಶ ಮತ್ತು ಜೋಕುಮಾರ, ಹೋಳಿ ಹಬ್ಬದ ಸಂದರ್ಭದಲ್ಲಿ ಮನುಷ್ಯರಲ್ಲಿನ ಅರಿಷಡ್ವರ್ಗಗಳನ್ನು ಸುಟ್ಟು ಬೂದಿ ಮಾಡುವ ಉದ್ದೇಶದಿಂದ ಮಣ್ಣಿನಿಂದ ಕಾಮನ ಮೂರ್ತಿ ತಯಾರಿಸಿ ಹುಣ್ಣಿಮೆ ದಿನ ದಹಿಸಿ, ಮಾರನೇ ದಿನ ವಿಧವಿಧದ ಬಣ್ಣಗಳನ್ನು ಬಳಸಿ ರಂಗೀನಾಟ ಆಡುವ ಮೂಲಕ ಪೂಜೆ ನಡೆಸುವ ಸಂಪ್ರದಾಯವಿದೆ.ನಾಲ್ಕು ಮಂಗಳವಾರ ಆಚರಣೆ:
ಉತ್ತರ ಕರ್ನಾಟಕದಲ್ಲಿ ಗುಳ್ಳವ್ವ ಆಚರಣೆ ಬಹು ಜನಪ್ರಿಯವಾಗಿರುವ ಜನಪದ ಹಬ್ಬ. ಗುಳ್ಳವ್ವನ ಪ್ರತಿಮೆಯನ್ನು ಮಣ್ಣಿನಿಂದ ಕುಂಬಾರರು ತಯಾರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಬಹು ಮುಖ್ಯವಾಗಿ ಆಚರಿಸುವ ಹೆಣ್ಣುಮಕ್ಕಳ ವಿಶೇಷ ಹಬ್ಬ ಗುಳ್ಳವ್ವನ ಹಬ್ಬದ ಆಚರಣೆಯಾಗಿದೆ. ಮಣ್ಣಿನಿಂದ ಮಾಡುವ ಗುಳ್ಳವ್ವ ಭೂದೇವಿಯ ಅವತಾರ.ಆಷಾಢ ಮಾಸದ ಮೊದಲ ಮಂಗಳವಾರದಿಂದ ಇಡೀ ಮಾಸಾಂತ್ಯ ಒಟ್ಟು ನಾಲ್ಕು ಮಂಗಳವಾರಗಳಂದು ಗುಳ್ಳವ್ವನನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ, ಜೋಳ, ಗೋದಿ, ಎಳ್ಳು ಧಾನ್ಯಗಳ ಜೊತೆಗೆ ಗುಲಗಂಜಿಗಳಿಂದ ಸಿಂಗರಿಸಿ ಪೂಜಿಸಲಾಗುತ್ತದೆ. ಅಂದು ಸಂಜೆ ಊರಿನ ಪ್ರತಿ ಮನೆಮನೆಗಳಿಗೆ ತೆರಳಿ ತುಂಬಿದಾರುತಿ ಹಿಡಿದು ಬಾಲೆಯರು ಗುಳ್ಳವ್ವನ ಹಾಡು ಹೇಳಿ ಆರತಿ ಎತ್ತುತ್ತಾರೆ.ಸದ್ಯ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಹಬ್ಬಗಳು ಕಣ್ಮರೆಯಾಗುತ್ತಿವೆ. ಹಿಂದಿದ್ದ ಕುತೂಹಲ, ಆಕರ್ಷಣೆ ಇದೀಗ ಕಡಿಮೆಯಾಗುತ್ತಿವೆ. ಆದರೆ ಜನಸಾಮಾನ್ಯರು ಬಹು ಸುಲಭವಾಗಿ ಹಾಡಬಲ್ಲ ಗುಳ್ಳವ್ವನ ಹಾಡುಗಳು ಮಾತ್ರ ಈಗಲೂ ಬಾಲೆಯರ ಕಂಠದಲ್ಲಿ ಮೊಳಗುತ್ತಿರುವುದು ಮಾತ್ರ ನಮ್ಮ ಪ್ರಾಚೀನ ಪರಂಪರೆಗಳಿಗೆ ಸಾವಿಲ್ಲ ಎಂಬುದನ್ನು ನಿರೂಪಿಸುತ್ತಿರುವುದು ಸತ್ಯ.
--ಬಾಕ್ಸ್
ಎಲ್ಲೆಡೆ ಗುಳ್ಳವ್ವನ ಹಾಡುಜಾನಪದ ಸಾಹಿತ್ಯದಲ್ಲಿ ಗುಳ್ಳವ್ವನ ಕುರಿತಾದ ಬಹಳಷ್ಟು ಹಾಡುಗಳು ಪ್ರಚಲಿತದಲ್ಲಿವೆ. ಬರತಿ ಇಲಕಲ್ಲಗೆ ಹೋಗಿ ಸೀರಿ ತರತಿನಿ, ಗುಳೆದಗುಡ್ಡಕ್ ಹೋಗಿ ಖಣಾ, ಗೋಕಾಕ ಹೋಗಿ ಕರದಂಟ ತರತಿನಿ ಎಂದ ಬರತಿ ಗುಳ್ಳವ್ವ....ಕೋಲಾರಕ್ಕೋಗಿ ಬಂಗಾರ ತರತಿನಿ ಗುಳ್ಳವ್ವ ಎಂಬ ಹಾಡುಗಳು ಈ ಹಬ್ಬದಲ್ಲಿ ಮೇಳೈಸುತ್ತವೆ. ಈ ಹಾಡುಗಲ್ಲಿ ಜಾನಪದದ ಸೊಗಡು, ಗ್ರಾಮೀಣ ಜನಜೀವನದ ಸೊಬಗು ಅಡಕಗೊಂಡಿವೆ. ಪ್ರದೇಶವಾರು ಪರಿಸರಕ್ಕೆ ತಕ್ಕಂತೆ ಕೊಂಚ ಭಿನ್ನವಾಗಿ ಹಾಡುಗಳು ಕೇಳಿಬರುತ್ತವೆ.------------