ಶಿಸ್ತು, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ-ಶಿವಕುಮಾರ ಹೊನ್ನಾಳಿ

| Published : Jul 10 2024, 12:35 AM IST

ಶಿಸ್ತು, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ-ಶಿವಕುಮಾರ ಹೊನ್ನಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಸ್ತು, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧಿಸುವ ಛಲ, ಏಕಾಗ್ರತೆ ನಿಮ್ಮಲ್ಲಿದ್ದಾಗ ಯಶಸ್ಸು ನಿಮ್ಮದೇ ಎಂದು ಪ್ರಾಧ್ಯಾಪಕ ಡಾ.ಎಂ.ಈ. ಶಿವಕುಮಾರ ಹೊನ್ನಾಳಿ ಹೇಳಿದರು.

ರಾಣಿಬೆನ್ನೂರು: ಶಿಸ್ತು, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧಿಸುವ ಛಲ, ಏಕಾಗ್ರತೆ ನಿಮ್ಮಲ್ಲಿದ್ದಾಗ ಯಶಸ್ಸು ನಿಮ್ಮದೇ ಎಂದು ಪ್ರಾಧ್ಯಾಪಕ ಡಾ.ಎಂ.ಈ. ಶಿವಕುಮಾರ ಹೊನ್ನಾಳಿ ಹೇಳಿದರು.ನಗರದ ಸಂಜೀವಿನಿ ಪದವಿ ಪೂರ್ವ ಕಾಲೇಜಿನಲ್ಲಿ ಯಶಸ್ಸಿನ ದಾರಿ ಯಾವುದು ಎಂಬ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಶಸ್ಸು ಎಂಬುದು ತಟ್ಟೆಯಲ್ಲಿ ಹಾಕಿದ ಊಟವಲ್ಲ. ಇದಕ್ಕಾಗಿ ನಾವು ಸಾಕಷ್ಟು ಶ್ರಮಿಸಬೇಕು. ನಮ್ಮ ಅನ್ನಕ್ಕಾಗಿ ನಾವೇ ಬಿತ್ತಿ, ಬೆಳೆದು, ಕೊಯಿಲು ಮಾಡಿ ಅಡುಗೆ ತಯಾರಿಸಿ ಊಟ ಮಾಡಿದಂತೆ. ಯಶಸ್ಸಿನ ಹಾದಿಯಲ್ಲಿ ಸಾಗಲು ಬಯಸುವವರು ತಮ್ಮೆಲ್ಲಾ ಸಂತೋಷ, ಸೌಕರ್ಯಗಳನ್ನು ತ್ಯಾಗ ಮಾಡಬೇಕು ಎಂದರು.ಆರಂಭದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನು ಎದುರಿಸಿದಾಗ ಅಂತ್ಯದಲ್ಲಿ ನಿಮಗೆ ಸುಖವಷ್ಟೇ ಇರುತ್ತದೆ. ಒಮ್ಮೆ ನೀವು ಯಶಸ್ಸು ಗಳಿಸಿದರೆ ಜೀವನದಲ್ಲಿ ಎಲ್ಲವೂ ನಿಮ್ಮನ್ನು ಹಿಂಬಾಲಿಸಿ ಬರುತ್ತದೆ. ಆದರೆ ಸಂತೋಷ, ವೈಭೋಗದ ಹಿಂದೆ ಓಡಿದರೆ ಯಶಸ್ಸು ಖಂಡಿತ ನಿಮ್ಮದಾಗುವುದು ಅಸಾಧ್ಯ. ಶಿಸ್ತು, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧಿಸುವ ಛಲ, ಏಕಾಗ್ರತೆ ಈ ಎಲ್ಲವನ್ನು ನಿಮ್ಮಲ್ಲಿ ಬೆಳೆಸಿಕೊಂಡಾಗ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದರು.ಇಲ್ಲಿ ಒಬ್ಬ ವ್ಯಕ್ತಿ ಯಶಸ್ವಿಯಾಗಿದ್ದಾರೆ ಅಂತ ಹೇಳಿದರೆ, ಆ ವ್ಯಕ್ತಿ ಖಂಡಿತವಾಗಿಯೂ ಕೌಶಲ್ಯಗಳನ್ನು ಮತ್ತು ದೃಷ್ಟಿಕೋನವನ್ನು ತನ್ನಲ್ಲಿ ಹೊಂದಿದ್ದಾನೆ ಅಂತ ಹೇಳಬಹುದು. ಈ ಕೌಶಲ್ಯಗಳನ್ನು ನೀವು ನಿಮ್ಮ ಜೀವನದಲ್ಲಿ ಬೆಳೆಸಿಕೊಂಡು ನೋಡಿ, ನಿಮಗೂ ನೀವು ಮಾಡುವಂತಹ ಕೆಲಸಗಳಲ್ಲಿ ಆ ಯಶಸ್ಸು ಸಿಗುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ಎಂ.ಎನ್. ಕರಬಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಪ್ರಾ ಪ್ರೊ.ಪ್ರಭುಲಿಂಗ ಕೊಡದ, ರಮೇಶ ತಳವಾರ, ಸಿದ್ದಪ್ಪ ಕಂಬಳಿ, ಪ್ರಕಾಶ ಬಳ್ಳಾರಿ, ಪ್ರವೀಣ ಬಿದರಿ, ನಾಗರಾಜ ಎಲಿಗಾರ, ಎಸ್.ಕೆ. ನೇತ್ರಾವತಿ, ಶ್ರೀನಿವಾಸ್ ಮಾಗಳ, ಭೂಮಿಕಾ ಕಸವಾಳ, ಬಿ. ಗೀತಾ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.